ಮೈಸೂರು: ರೌಡಿ ಶೀಟರ್ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 5 ಜನರನ್ನು ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ.
ವರುಣ್, ದರ್ಶನ್, ಅನಿಲ್, ಸಚಿನ್, ವೆಂಕಟೇಶ್ ಬಂಧಿತ ಆರೋಪಿಗಳು.
ಇನ್ನು ಗುರುವಾರ 4 ದ್ವಿಚಕ್ರ ವಾಹನದಲ್ಲಿ ಬಂದು 11 ಜನರು ಈ ಕೃತ್ಯ ಎಸಗಿದ್ದರು. ಅದರಲ್ಲಿ 7 ಜನರನ್ನು ಪೊಲೀಸರು ಬಂಧಿಸಿದ್ದರು. ಈಗ ನಾಲ್ವರು ಮತ್ತು ತಲೆ ಮರೆಸಿಕೊಳ್ಳಲು ಸಹಕರಿಸಿದ ಚಾಲಕ ಸೇರಿ ಐವರನ್ನು ಬಂಧಿಸಿದ್ದಾರೆ.
2016 ರಲ್ಲಿ ನಡೆದ ಕೊಲೆಗೆ ಪ್ರತಿಕಾರ
ಚಂದ್ರು ಕೊಲೆ 2016ರಲ್ಲಿ ನಡೆದ ಪಡುವಾರಹಳ್ಳಿ ದೇವು ಮರ್ಡರ್ ಗೆ ಪ್ರತಿಕಾರವಾಗಿ ನಡೆದಿದೆ ಎನ್ನಲಾಗುತ್ತಿದೆ. ಹುಣಸೂರಿನಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೇಸ್ ನಲ್ಲಿ ಆರೋಪಿಯಾಗಿದ್ದ ಚಂದ್ರು ಕೆಲ ತಿಂಗಳ ಹಿಂದೆ ಖುಲಾಸೆಯಾಗಿ ಬಂದಿದ್ದ. ಪಡುವಾರಹಳ್ಳಿ ದೇವು ಹತ್ಯೆ ಪ್ರಕರಣದಲ್ಲೂ ದೋಷಮುಕ್ತನಾಗಿ ಜೈಲಿನಿಂದ ಹೊರಬಂದಿದ್ದ.
ಚಂದ್ರು ಒಂಟಿಕೊಪ್ಪಲಿನ ತನ್ನ ಮನೆ ಬಳಿ ಟೈಲರ್ ಅಂಗಡಿ ಮುಂಭಾಗ ಸಂಜೆ 5 ಗಂಟೆ ವೇಳೆಗೆ ಮಾತನಾಡುತ್ತ ಕುಳಿತಿದ್ದ. ಈ ವೇಳೆ ದ್ವಿಚಕ್ರ ವಾಹನಗಳಲ್ಲಿ ಬಂದ ಹಂತಕರ ತಂಡ ಲಾಂಗು ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿತ್ತು. ಕೂಡಲೇ ಸಂಬಂಧಿಕರು ಹಲ್ಲೆಗೊಳಗಾದ ಚಂದ್ರುವನ್ನು ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದರು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಚಂದ್ರು ಸಾವನ್ನಪ್ಪಿದ್ದ. ಇನ್ನೂ ವಿಚಾರ ತಿಳಿದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿ ಮುತ್ತುರಾಜ್ ಸಿಬ್ಬಂದಿ ಜೊತೆ ಸ್ಥಳ ಪರಿಶೀಲನೆ ನಡೆಸಿದ್ದರು.