ಬೆಂಗಳೂರು: ಸ್ವಾಮೀಜಿಗಳ ಉಡುಗೆ ಕೇಸರಿ, ಹನುಮ ಧ್ವಜದ ಬಣ್ಣ ಕೇಸರಿ. ಇಂತಹ ಕೇಸರಿ ಬಗ್ಗೆ ಕಾಂಗ್ರೆಸ್ ನವರಿಗೆ ಸಿಟ್ಟು ಯಾಕೆಂದು ಗೊತ್ತಿಲ್ಲ. ಇಡೀ ದೇಶದಲ್ಲೇ ಅಧಿಕಾರಕ್ಕೆ ಬಂದಿದ್ದೇವೆ ಎನ್ನುವ ಭ್ರಮೆಯಲ್ಲಿ ಕಾಂಗ್ರೆಸ್ ನವರು ಇದ್ದಾರೆ. ಇಂತಹ ಭ್ರಮೆಯಲ್ಲಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನ ಅವರಿಗೆ ಪಾಠ ಕಲಿಸುತ್ತಾರೆ ಎಂದು ಶಾಸಕ ವಿಜಯೇಂದ್ರ ಹೇಳಿದರು.
ವಿಧಾನಸೌಧದ ಕೆಂಗಲ್ ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದ ಮುಖ್ಯಮಂತ್ರಿ ಮುಂದಿನ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತಾರೋ, ಇಲ್ಲವೋ ಎಂಬುದೇ ಗ್ಯಾರಂಟಿ ಇಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ಐದು ಗ್ಯಾರಂಟಿ ಸ್ಕೀಂಗಳನ್ನು ಘೋಷಣೆ ಮಾಡಿತ್ತು. ಇದೀಗ ಅಧಿಕಾರಕ್ಕೆ ಬಂದ ಮೇಲೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯದ ಜನರಿಗೆ ನಿರಾಸೆ ಕಾದಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ದಾರಿಯಲ್ಲಿ ಹೋಗುವವರ ಬಳಿ ಮತ ಹಾಕಿಸಿಕೊಂಡಿದ್ದಾರೆ. ಆದರೆ ದಾರಿಯಲ್ಲಿ-ಬೀದಿಯಲ್ಲಿ ಹೋಗುವವರಿಗೆಲ್ಲ ಗ್ಯಾರಂಟಿ ಯೋಜನೆ ಕೊಡವುದಿಲ್ಲ ಎನ್ನುತ್ತಿದ್ದಾರೆ.
ಸದ್ಯ ಆಡಳಿತಕ್ಕೆ ಬಂದಿರುವುದು ಡಬಲ್ ಸ್ಟೇರಿಂಗ್ ಸರ್ಕಾರ. ಮುಖ್ಯಮಂತ್ರಿಗೊಂದು ಸ್ಟೇರಿಂಗ್, ಉಪಮುಖ್ಯಮಂತ್ರಿಗೊಂದು ಸ್ಟೇರಿಂಗ್ ಇದೆ. ಯಾರು ಯಾವ ಕಡೆ ಸ್ಟೇರಿಂಗ್ ಎಳೆಯುತ್ತಾರೆ ಎಂಬುದೇ ಗೊತ್ತಿಲ್ಲ. ಬಸ್ ಯಾವ ಕಡೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕು. ಒಟ್ಟಿನಲ್ಲಿ ಆ ದೇವರೇ ಇವರಿಗೆ ಬುದ್ದಿ ಕಲಿಸುತ್ತಾರೆ ಎಂದು ಶಾಸಕ ವಿಜಯೇಂದ್ರ ಹೇಳಿದರು.