ಮನೆ ಕಾನೂನು ಪದವಿ ಪೂರ್ವ ಕಾಲೇಜುಗಳ ಸ್ಥಿತಿಗತಿ ಬಗ್ಗೆ ಸಮಗ್ರ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಪದವಿ ಪೂರ್ವ ಕಾಲೇಜುಗಳ ಸ್ಥಿತಿಗತಿ ಬಗ್ಗೆ ಸಮಗ್ರ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

0

ನಿರ್ದಿಷ್ಟ ಭೌಗೋಳಿಕ ವಿಸ್ತೀರ್ಣ ಸೇರಿದಂತೆ ವಿವಿಧ ಅಗತ್ಯತೆಗಳನ್ನು ಪೂರೈಸದೆ ಕಾರ್ಯನಿರ್ವಹಿಸುತ್ತಿರುವ ಪದವಿ ಪೂರ್ವ ಕಾಲೇಜುಗಳ ಈಗಿನ ಸ್ಥಿತಿಗತಿಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ. ರಾಜ್ಯ ಸರ್ಕಾರ 2013ರಲ್ಲಿ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಉಲ್ಲೇಖಿಸಿರುವ 632 ಪದವಿ ಪೂರ್ವ ಕಾಲೇಜುಗಳ ಈಗಿನ ಸ್ಥಿತಿಗತಿಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಲು ನ್ಯಾಯಾಲಯ ಸೂಚಿಸಿದೆ.

Join Our Whatsapp Group

ಚೌಗಲೆ ಶಿಕ್ಷಣ ಸಂಸ್ಥೆಗೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಪಿಯು ಕಾಲೇಜು ಕಟ್ಟಡ ನಿರ್ಮಾಣಕ್ಕೆ ನೀಡಿರುವ ಅನುಮತಿ ರದ್ದುಪಡಿಸಬೇಕು ಎಂದು ಸ್ಥಳೀಯ ನಿವಾಸಿ ಚಂದ್ರಶೇಖರ್ ಎಂ. ಅರಮನಿ ಹಾಗೂ ಇತರರು 2009ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಕರ್ನಾಟಕ ಪದವಿಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಪ್ರವೇಶ ಮತ್ತು ಅನುದಾನ) ನಿಯಮಗಳು-2006ಕ್ಕೆ 2018ರಲ್ಲಿ ತಿದ್ದುಪಡಿ ತಂದಿರುವ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ. 2013ರ ಜುಲೈ 8ರಂದು ಸರ್ಕಾರ ಸಲ್ಲಿಸಿರುವ ಅಫಿಡವಿಟ್ ನಲ್ಲಿ ರಾಜ್ಯದಲ್ಲಿ 632 ಪಿಯು ಕಾಲೇಜುಗಳು ನಿಯಮದಂತೆ ನಿರ್ದಿಷ್ಟ ಭೌಗೋಳಿಕ ವಿರ್ಸ್ತೀಣ ಸೇರಿದಂತೆ ಇತರ ಅಗತ್ಯತೆಗಳನ್ನು ಪೂರೈಸಿಲ್ಲ ಎಂದು ಸೂಚ್ಯವಾಗಿ ಹೇಳಲಾಗಿದೆ. ಹೀಗಿದ್ದಾಗ, ಆ 632 ಕಾಲೇಜುಗಳಿಗೆ ಶಿಕ್ಷಣ ಇಲಾಖೆ ನೀಡಿರುವ ನೋಟಿಸ್ ಗೆ ಕಾಲೇಜುಗಳ ಕೊಟ್ಟ ವಿವರಣೆ ಏನು? ಅದು ಸರ್ಕಾರಕ್ಕೆ ಸಮಧಾನ ತಂದಿದೆಯೇ? ಸಮಧಾನ ತಂದಿಲ್ಲ ಎಂದಾದರೆ ಕಾಲೇಜುಗಳ ವಿರುದ್ಧ ಕೈಗೊಂಡ ಕ್ರಮಗಳೇನು ಎಂಬ ಸಮಗ್ರವಾದ ವರದಿಯನ್ನು ಮೂರು ವಾರಗಳಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಅಲ್ಲದೇ, 2018ರಲ್ಲಿ ಜಾರಿಗೆ ಬಂದಿರುವ ಕರ್ನಾಟಕ ಪದವಿಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಪ್ರವೇಶ ಮತ್ತು ಅನುದಾನ) ತಿದ್ದುಪಡಿ ನಿಯಮಗಳು-2017 ಪ್ರಕಾರ ಕಾಲೇಜುಗಳು ಸಲ್ಲಿಸಿದ ವರದಿ ಆಧರಿಸಿ ಪರಿಶೀಲನೆ ನಡೆಸುವ ಅವಕಾಶವಿದೆಯೇ, ಒಂದೊಮ್ಮೆ ಅವಕಾಶವಿದ್ದರೆ ವರದಿಗಳನ್ನು ಆಧರಿಸಿ ಕ್ರಮ ಕೈಗೊಳ್ಳಲು ನಿಯಮಗಳಲ್ಲಿ ಅವಕಾಶವಿದೆಯೇ ಎಂಬ ಬಗ್ಗೆಯೂ ವರದಿ ನೀಡುವಂತೆ ನಿರ್ದೇಶನ ನೀಡಿದ ಪೀಠವು ವಿಚಾರಣೆಯನ್ನು ಮುಂದೂಡಿತು.

ಅರ್ಜಿಯಲ್ಲಿ ಪ್ರಶ್ನಿಸಲಾಗಿರುವ ಚೌಗಲೆ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜುನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ ಎಂದು ಕಾಲೇಜು ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಬೆಂಗಳೂರಿನ ಮಾಡರ್ನ್ ಪದವಿ ಪೂರ್ವ ಸಂಯುಕ್ತ ಕಾಲೇಜನ್ನು ಪ್ರತಿನಿಧಿಸಿದ್ದ ವಕೀಲ ಜಿ ಆರ್ ಮೋಹನ್ ಅವರು, ನಮ್ಮ ಕಕ್ಷಿದಾರರ ಕಾಲೇಜು 2004ರಲ್ಲಿ ಸ್ಥಾಪನೆಗೊಂಡಿದೆ. ನಿಯಮಗಳು ಮೊದಲು 2006ರಲ್ಲಿ ಜಾರಿಗೆ ಬಂದು, ನಂತರ 2018ರಲ್ಲಿ ತಿದ್ದುಪಡಿಗೊಂಡಿವೆ. ನಿಯಮಗಳು ಜಾರಿಗೆ ಬರುವ ಮುನ್ನ ನಮ್ಮ ಕಾಲೇಜು ಸ್ಥಾಪನೆಗೊಂಡಿರುವುದರಿಂದ ಹೊಸ ನಿಯಮಗಳು ನಮ್ಮ ಕಕ್ಷಿದಾದರಿಗೆ ಅನ್ವಯವಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಈ ಎರಡೂ ವಿಚಾರಗಳನ್ನು ಪೀಠವು ದಾಖಲಿಸಿಕೊಂಡಿತು.