ಜೂನ್ 12 ರಂದು ಹಾಂಗ್ ಕಾಂಗ್ ನಲ್ಲಿ ಪ್ರಾರಂಭವಾಗಲಿರುವ ಎಸಿಸಿ ಉದಯೋನ್ಮುಖ ಮಹಿಳಾ ಏಷ್ಯಾಕಪ್ ಗೆ 14 ಸದಸ್ಯರ ಭಾರತ ಮಹಿಳಾ ‘ಎ’ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ತಂಡದ ನಾಯಕತ್ವವನ್ನು ಅಂಡರ್ 19 ವಿಶ್ವಕಪ್ ಸ್ಟಾರ್, ಬ್ಯಾಟಿಂಗ್ ಆಲ್ ರೌಂಡರ್ ಶ್ವೇತಾ ಸೆಹ್ರಾವತ್ ಅವರಿಗೆ ನೀಡಲಾಗಿದೆ.
ಭಾರತ ಎ ತಂಡದ ನಾಯಕತ್ವವಹಿಸಿಕೊಂಡಿರುವ ಸೆಹ್ರಾವತ್, ಇದೇ ವರ್ಷ ನಡೆದ ಅಂಡರ್ 19 ವಿಶ್ವಕಪ್ನಲ್ಲಿ ಆಡಿದ ಏಳು ಇನ್ನಿಂಗ್ಸ್ ಗಳಲ್ಲಿ 297 ರನ್ ಬಾರಿಸುವ ಮೂಲಕ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ್ತಿಯರ ಪೈಕಿ ಅಗ್ರಸ್ಥಾನ ಪಡೆದುಕೊಂಡಿದ್ದರು. ಇನ್ನು ಜೂನ್ 13 ರಂದು ಆತಿಥೇಯ ಹಾಂಕಾಂಗ್ ವಿರುದ್ಧ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದ್ದು, ಈ ಪಂದ್ಯಾವಳಿಯ ಫೈನಲ್ ಪಂದ್ಯ ಜೂನ್ 21 ರಂದು ನಡೆಯಲಿದೆ.
ಜೂನ್ 13 ರಂದು ಮೊದಲ ಪಂದ್ಯ
ಉದಯೋನ್ಮುಖ ಮಹಿಳೆಯರ ಏಷ್ಯಾಕಪ್ನಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡ, ಜೂನ್ 13 ರಂದು ಆತಿಥೇಯ ಹಾಂಗ್ ಕಾಂಗ್ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದು, ಜೂನ್ 15 ಮತ್ತು ಜೂನ್ 17 ರಂದು ಕ್ರಮವಾಗಿ ಥಾಯ್ಲೆಂಡ್ ಎ ಮತ್ತು ಪಾಕಿಸ್ತಾನ ಎ ತಂಡಗಳನ್ನು ಎದುರಿಸಲಿದೆ. ಪ್ರತಿ ಪೂಲ್ ನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ ಗೆ ಅರ್ಹತೆ ಪಡೆಯುತ್ತವೆ.
ಎಂಟು ತಂಡಗಳ ಎರಡು ಗುಂಪು
ಭಾರತ ‘ಎ’ ತಂಡ ಎ ಗುಂಪಿನ ಭಾಗವಾಗಿದ್ದು, ಇದರಲ್ಲಿ ಆತಿಥೇಯ ಹಾಂಗ್ ಕಾಂಗ್, ಥಾಯ್ಲೆಂಡ್ ‘ಎ’ ಮತ್ತು ಪಾಕಿಸ್ತಾನ ‘ಎ’ ತಂಡಗಳು ಸೇರಿವೆ. ಇನ್ನು ಬಿ ಗುಂಪಿನಲ್ಲಿ ಬಾಂಗ್ಲಾದೇಶ ‘ಎ’, ಶ್ರೀಲಂಕಾ ‘ಎ’, ಮಲೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ‘ಎ’ ತಂಡಗಳು ಸ್ಥಾನ ಪಡೆದಿವೆ.
ಭಾರತ ‘ಎ’ ತಂಡ: ಶ್ವೇತಾ ಸೆಹ್ರಾವತ್ (ನಾಯಕಿ), ಸೌಮ್ಯ ತಿವಾರಿ (ಉಪನಾಯಕಿ), ತ್ರಿಶಾ ಗೊಂಗಡಿ, ಮುಸ್ಕಾನ್ ಮಲಿಕ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಉಮಾ ಚೆಟ್ರಿ (ವಿಕೆಟ್ ಕೀಪರ್), ಮಮತಾ ಮಡಿವಾಳ (ವಿಕೆಟ್ ಕೀಪರ್), ಟೈಟಾಸ್ ಸಾಧು, ಯಶಸ್ರಿ. ಎಸ್, ಕಶ್ವೀ ಗೌತಮ್, ಪಾರ್ಶವಿ ಚೋಪ್ರಾ, ಮನ್ನತ್ ಕಶ್ಯಪ್, ಬಿ. ಅನುಷಾ.