ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಓರ್ವ ವೃದ್ಧೆ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
ಸೋಮವಾರ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಓರ್ವ ವೃದ್ಧೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಹೊನ್ನಮ್ಮ ಶಿವಪ್ಪ (65) ಎಂದು ಗುರುತಿಸಲಾಗಿದೆ.
ಇನ್ನು 10 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಚಿಕಿತ್ಸೆ ಮುಂದುವರೆದಿದೆ. ಅಸ್ವಸ್ಥರೆಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಕೆಲವರು ಇಂದು ಡಿಸ್ಚಾರ್ಜ್ ಆಗಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಗ್ರಾಮದಲ್ಲಿ ಸುಮಾರು ಮೂರು ದಿನಗಳಿಂದ ವಾಂತಿ- ಬೇದಿಯಿಂದ ಜನರು ಬಳಲುತ್ತಿದ್ದರು. ಕನಕಗಿರಿ ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗೆ ಜನ ದಾಖಲಾಗಿದ್ದು ಗ್ರಾಮಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಗ್ರಾಮ ಪಂಚಾಯತ್ ಕಲುಷಿತ ನೀರು ಪೂರೈಕೆ ಮಾಡುತ್ತಿದೆ ಎಂದಿದ್ದಾರೆ. ಇನ್ನು ವೃದ್ಧೆ ಸಾವು ಬಳಿಕ ದಿನದಿಂದ ದಿನಕ್ಕೆ ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಿದೆ. ಮೂರು ದಿನಗಳ ಹಿಂದೆ ವೃದ್ಧೆ ಮೃತಪಟ್ಟಿದ್ದು, ಅಸ್ವಸ್ಥರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಪ್ರಕರಣ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಯ ಗಮನಕ್ಕೆ ತರದೇ ಗ್ರಾಮ ಪಂಚಾಯತ್ ನಿರ್ಲಕ್ಷ್ಯ ವಹಿಸಿದೆ. ಈಗಾಗಲೇ ರಾಯಚೂರಿನಲ್ಲಿ ಈ ರೀತಿಯ ಘಟನೆ ನಡೆದು ಜನರ ಜೀವನದ ಜೊತೆ ಚೆಲ್ಲಾಟವಾಡಿದರೂ ಅಧಿಕಾರಿಗಳು ಮಾತ್ರ ಇನ್ನೂ ಎಚ್ಚೆತ್ತಿಲ್ಲ.
ಜಿಲ್ಲಾಡಳಿತದ ಅಧಿಕಾರಿಗಳ್ಯಾರೂ ಗ್ರಾಮಕ್ಕೆ ಬಂದು ಪರಿಶೀಲನೆ ಮಾಡಿಲ್ಲ. ಜೊತೆಗೆ, ಗ್ರಾಮಕ್ಕೆ ಶುದ್ಧ ಕುಡಿಯುವ ಪೂರೈಕೆಗೂ ವ್ಯವಸ್ಥೆ ಮಾಡಿಲ್ಲ. ಆರೋಗ್ಯ ಇಲಾಖೆಯ ಗಮನಕ್ಕೆ ತಾರದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಲಾಗಿದೆ.