ಮನೆ ಕಾನೂನು ಸಿಂಧೂರಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಜಾ ಕೋರಿ ಹೈಕೋರ್ಟ್ ಕದತಟ್ಟಿದ ರೂಪಾ

ಸಿಂಧೂರಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಜಾ ಕೋರಿ ಹೈಕೋರ್ಟ್ ಕದತಟ್ಟಿದ ರೂಪಾ

0

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ವಿರುದ್ಧ ಹೂಡಿರುವ ಕ್ರಿಮಿನಲ್ ಮಾನನಷ್ಟ ದಾವೆಯನ್ನು ವಜಾ ಮಾಡುವಂತೆ ಕೋರಿ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರು ಸೋಮವಾರ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Join Our Whatsapp Group

ಡಿ ರೂಪಾ ಅವರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು. ಪ್ರಕರಣದ ಬಗ್ಗೆ ಮಾಹಿತಿ ಪಡೆದ ನ್ಯಾಯಮೂರ್ತಿಗಳು ಈ ಹಿಂದೆ ವಕೀಲನಾಗಿ ತಾನು ರೋಹಿಣಿ ಸಿಂಧೂರಿ ಅವರನ್ನು ಬೇರೊಂದು ಪ್ರಕರಣದಲ್ಲಿ ಪ್ರತಿನಿಧಿಸಿರುವುದರಿಂದ ಈ ಪ್ರಕರಣದ ವಿಚಾರಣೆ ನಡೆಸುವುದಿಲ್ಲ ಎಂದು ಹಿಂದೆ ಸರಿದರು. ಸೂಕ್ತ ಆದೇಶಕ್ಕೆ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಮಂಡಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿದರು.

2023ರ ಮಾರ್ಚ್ 24ರಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೂಡಿದ್ದ ಖಾಸಗಿ ಮೊಕದ್ದಮೆಯನ್ನು ಪರಿಗಣಿಸಿದ್ದ ಬೆಂಗಳೂರಿನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ಆದೇಶಿಸಿತ್ತು. ಅಲ್ಲದೇ, ರೂಪಾ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ವಜಾ ಮಾಡಬೇಕು ಎಂದು ರೂಪಾ ಕೋರಿದ್ದಾರೆ.

ಅಲ್ಲದೇ, ರೋಹಿಣಿ ಸಿಂಧೂರಿ ಅವರ ಖಾಸಗಿ ದೂರಿನ ಅನ್ವಯ ಭಾರತೀಯ ದಂಡ ಸಂಹಿತೆ ಸೆಕ್ಷನ್ 500ರ ಅಡಿ ಸಂಜ್ಞೇಯ ಪರಿಗಣಿಸಿ, 2023ರ ಮಾರ್ಚ್ 4ರಂದು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಮಾಡಿರುವ ಆದೇಶವನ್ನು ಬದಿಗೆ ಸರಿಸಬೇಕು. 2023ರ ಫೆಬ್ರವರಿ 28ರಂದು ರೋಹಿಣಿ ಸಿಂಧೂರಿ ಅವರು ದಾಖಲಿಸಿರುವ ಖಾಸಗಿ ದೂರು ಹಾಗೂ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಬಾಕಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಬೇಕು ಎಂದೂ ಕೋರಲಾಗಿದೆ.

ರೂಪಾ ಮೌದ್ಗಿಲ್ ಅವರು 2023ರ ಫೆಬ್ರವರಿ 18 ಮತ್ತು 19ರಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ರೂಪ ಈ ಕೃತ್ಯ ಎಸಗಿದೆ. ಅದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ಮಾರ್ಚ್ 3ರಂದು ಖಾಸಗಿ ದೂರು ದಾಖಲಿಸಿದ್ದರು.

ಅಲ್ಲದೆ, ಮಾನಹಾನಿ ಮಾಡಿ ಮಾನಸಿಕ ಯಾತೆ ಉಂಟು ಮಾಡಿರುವುದಕ್ಕಾಗಿ ರೂಪಾ ಅವರಿಂದ ಒಂದು ಕೋಟಿ ರೂಪಾಯಿಯನ್ನು ಪರಿಹಾರವಾಗಿ ಕೊಡಿಸಿಕೊಡಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು. ಇದನ್ನು ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರೂಪಾ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಲು ಆದೇಶಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ರೂಪಾ ಅವರು ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ರೂಪಾ ಅವರನ್ನು ವಕೀಲರಾದ ಮಧುಕರ್ ದೇಶಪಾಂಡೆ ಅವರು ಪ್ರತಿನಿಧಿಸಿದ್ದಾರೆ. ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಯಾವುದೇ ತೆರನಾದ ಮಾನಹಾನಿ ಹೇಳಿಕೆ ನೀಡದಂತೆ ವಿಚಾರಣಾಧೀನ ನ್ಯಾಯಾಲಯ ಮಾಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಏಪ್ರಿಲ್ 11ರಂದು ರದ್ದುಪಡಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.