ಮನೆ ದೇವಸ್ಥಾನ ಶ್ರೀನಗರದ ಶ್ರೀ ವೆಂಕಟರಮಣಸ್ವಾಮಿ ದೇವಾಲಯ

ಶ್ರೀನಗರದ ಶ್ರೀ ವೆಂಕಟರಮಣಸ್ವಾಮಿ ದೇವಾಲಯ

0

ಬೆಂಗಳೂರು ಮಹಾನಗರದ ಪುರಾತನ ಪ್ರದೇಶಗಳ ಪೈಕಿ ಈಗಿನ ಬನಶಂಕರಿ ಮೊದಲ ಹಂತದ ಶ್ರೀನಗರವೂ ಒಂದು. ನೂರಾರು ವರ್ಷಗಳಿಂದ 1970ರ ದಶಕದವರೆಗೆ  ದಾಸರಹಳ್ಳಿ ಎಂದೇ ಖ್ಯಾತವಾಗಿತ್ತು.

Join Our Whatsapp Group

ಕ್ರಿ.ಶ.1500ರ ಸುಮಾರಿನಲ್ಲಿ ಮಾಧ್ವಯತಿ ಶ್ರೀ ವ್ಯಾಸರಾಯರು ಸ್ಥಾಪಿಸಿ ಪೂಜಿಸಿದ್ದೆನ್ನಲಾದ ಶ್ರೀಆಂಜನೇಯಸ್ವಾಮಿಯ ಗಳಿಗಲ್ಲು ಇಲ್ಲಿತ್ತು. ಇದಕ್ಕೆ ನಿರ್ಮಿಸಿದ್ದ ಮಂಟಪದಂಥ ದೇವಾಲಯ ಶಿಥಿಲಾವಸ್ಥೆಯಲ್ಲಿತ್ತು. ಪಕ್ಕದಲ್ಲಿ ಕಲ್ಯಾಣಿ ಹಾಗೂ ಸಿಹಿನೀರ ಬಾವಿಯಿತ್ತು. ದಾಸರಹಳ್ಳಿ ಜನರು ಇಲ್ಲಿ ನೀರಿಗಾಗಿ ಬರುತ್ತಿದ್ದರು. ಕಲ್ಯಾಣಿಯಲ್ಲಿ ಮಿಂದು ದೇವರ ದರ್ಶನ ಮಾಡುತ್ತಿದ್ದರು.

1970ರ ಆಸುಪಾಸಿನಲ್ಲಿ ಇಲ್ಲಿದ್ದ ಕೃಷಿ ಜಮೀನುಗಳು ವಸತಿ ನಿವೇಶನಗಳಾಗಿ ಬೆಂಗಳೂರು ಬೆಳೆದಾಗ,  ಸ್ಥಳೀಯ ಮುಖಂಡರಾದ ಕೃಷ್ಣಪ್ಪನವರು, ಸೀತಾರಾಮರಾಜು, ದಿವಂಗತ ಮುನಿವೆಂಕಟಪ್ಪ ಸೇರಿದಂತೆ ಹತ್ತೂ ಸಮಸ್ತರ ನೇತೃತ್ವದಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ತೀರ್ಮಾನಿಸಲಾಯಿತು.  ಸರ್ಕಾರದ ಸಂಸ್ಥೆಗಳು, ಸ್ಥಳೀಯರು ಹಾಗೂ ಭಕ್ತರ ಸಹಕಾರ ನೆರವಿನಿಂದ ಜೀರ್ಣೋದ್ಧಾರ ಕಾರ್ಯ ನಡೆಯಿತು.

1978ರ ಏಪ್ರಿಲ್ 21ರಂದು ಹೊಸ ದೇವಾಲಯದಲ್ಲಿ, ಶ್ರೀ ವೆಂಕಟರಮಣ, ಪದ್ಮಾವತಿ, ಆಂಜನೇಯ, ಗಣಪತಿ ಹಾಗೂ ನವಗ್ರಹ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದರು. ಒಂಟಿಕೊಪ್ಪಲ್ ಶ್ರೀನಿವಾಸದೇವಾಲಯದ ಪ್ರಧಾನ ಅರ್ಚಕರಾದ ಶ್ರೀನಿವಾಸಭಟ್ಟರ ನೇತೃತ್ವದಲ್ಲಿ ಪೂಜಾವಿಧಿಗಳು ನೆರವೇರಿದವು.

2001ರಲ್ಲಿ ದೇವಾಲಯಕ್ಕೆ 5 ಅಂತಸ್ತುಗಳ ಭವ್ಯ ರಾಜಗೋಪುರ ನಿರ್ಮಾಣ, ಹಾಗೂ ಆವರಣ ಗೋಡೆ ನಿರ್ಮಾಣ ಮಾಡಲಾಯಿತು. ಈಗ ವಿಶಾಲವಾದ ಪ್ರಾಕರವಿರುವ ಸುಂದರ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ನಯನ ಮನೋಹರವಾದ ಶ್ರೀನಿವಾಸದೇವರ ಪ್ರತಿಮೆಯಿದೆ. ದ್ವಾರದಲ್ಲಿ ಜಯವಿಜಯರ ಪ್ರತಿಮೆಗಳಿವೆ.

ಬಲಭಾಗದಲ್ಲಿರುವ ಗರ್ಭಗುಡಿಯಲ್ಲಿ ಆಂಜನೇಯಸ್ವಾಮಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಶ್ರೀನಿವಾಸ ದೇವರ ಎಡಭಾಗದಲ್ಲಿರುವ ಮತ್ತೊಂದು ಗರ್ಭಗುಡಿಯಲ್ಲಿ ಆಂಡಾಳ್ ಅಮ್ಮನವರ ಹಾಗೂ ಪದ್ಮಾವತಿ ಅಮ್ಮನವರ ವಿಗ್ರಹಗಳಿವೆ.

ಶ್ರೀ ವೆಂಕಟರಮಣ ದೇವರ ಆವರಣದ ಹೊರ ಭಾಗದಲ್ಲಿ ಅಶ್ವತ್ಥಕಟ್ಟೆಯಿದ್ದು, ಇದರ ಬಳಿ ನವಗ್ರಹ ಹಾಗೂ ಗಣಪತಿ ದೇವಾಲಯವಿದೆ. ಪಕ್ಕದಲ್ಲಿ ಕಲ್ಯಾಣೋತ್ಸವ ಕಟ್ಟಡವನ್ನೂ ನಿರ್ಮಿಸಲಾಗಿದೆ. ಶ್ರೀನಿವಾಸದೇವರಿಗೆ ಪಂಚರಾತ್ರಾಗಮದಂತೆ ಪೂಜೆಗಳು ನಡೆದರೆ, ನವಗ್ರಹ ಹಾಗೂ ಗಣಪತಿಗೆ ಶೈವಾಗಮ ರೀತ್ಯ ನಿತ್ಯ ಪೂಜಾವಿಧಿಗಳು ಜರುಗುತ್ತವೆ.

ಪ್ರತಿ ತಿಂಗಳು ಇಲ್ಲಿ ಸಂಕಷ್ಟಹರ ಗಣಪತಿ ಪೂಜೆ ಮತ್ತು ಪ್ರತಿ ಪೂರ್ಣಿಮೆಯ ದಿನ ಶ್ರೀಸತ್ಯನಾರಾಯಣ ಪೂಜೆ ನಡೆಯುತ್ತದೆ. ಶ್ರೀ ವೆಂಕಟೇಶ್ವರಸ್ವಾಮಿ ಎದುರು ಗರುಡಗಂಬವಿದೆ. ಬಲಿ ಪೀಠವೂ ಇದೆ.

ಶ್ರೀರಾಮನವಮಿ, ನವರಾತ್ರಿ, ವರಸಿದ್ಧಿ ವಿನಾಯಕ ಚೌತಿ, ವೈಕುಂಠ ಏಕಾದಶಿ ಮತ್ತು  ಹನುಮ ಜಯಂತಿಯಂದು ಇಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಶ್ರಾವಣ ಮಾಸದ ಶನಿವಾರದ ಪೂಜೆ ವಿಜೃಂಭಣೆಯಿಂದ ನಡೆಯುತ್ತದೆ. ಪ್ರತಿವರ್ಷ ಏರ್ಪಿಲ್ ತಿಂಗಳಿನಲ್ಲಿ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವ ಜರುಗುತ್ತದೆ.

ದೇವಾಲಯದ ನಿರ್ವಹಣೆಗಾಗಿ ಶ್ರೀವೆಂಕಟರಮಣಸ್ವಾಮಿ ಟೆಂಪಲ್ ಟ್ರಸ್ಟ್ (ರಿ) ರಚಿಸಲಾಗಿದೆ.  ಟ್ರಸ್ಟ್ ವತಿಯಿಂದ ತ್ಯಾಗರಾಜರ ಆರಾಧನೆ ಹಾಗೂ ಸಾಂಸ್ಕೃತಿಕ ಮಹೋತ್ಸವಗಳೂ ನಡೆಯುತ್ತವೆ. ಹಬ್ಬ ಹರಿದಿನಗಳಲ್ಲಿ ಎಲ್ಲ ದೇವರುಗಳಿಗೆ ವಿಶೇಷ ಪೂಜೆ ಹಾಗೂ ರಾಜಬೀದಿ ಉತ್ಸವವೂ ಜರುಗುತ್ತದೆ.

ಧಾರ್ಮಿಕ ಆಚರಣೆಗಳ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಉಳ್ಳ ಟ್ರಸ್ಟ್, ಬಡಾವಣೆಯ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಪ್ರತಿ ವರ್ಷ ಉಚಿತ ನೋಟ್ ಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ ವಿತರಿಸುವ ಕಾರ್ಯವನ್ನೂ ಮಾಡುತ್ತಿದೆ. ಬಡಾವಣೆಯ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನೂ ಏರ್ಪಡಿಸುವ ಟ್ರಸ್ಟ್, ಬಡವರಿಗೆ ಉಚಿತ ಕನ್ನಡಕ ನೀಡುವುದರ ಜೊತೆಗೆ, ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯ ಪ್ರಕಾಶಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸುತ್ತಾ ಬಂದಿದೆ.

ಮಾರ್ಗ : ಹನುಮಂತನಗರದಿಂದ 50 ಅಡಿ ರಸ್ತೆಯಲ್ಲಿ ಬಂದರೆ ಅಪೆಕ್ಸ್ ಬ್ಯಾಂಕ್ ಬಸ್ ನಿಲ್ದಾಣದ ಬಳಿ 9ನೇ ಮುಖ್ಯರಸ್ತೆಯಲ್ಲಿ ಬಲಕ್ಕೆ ತಿರುಗಿದರೆ ದೇವಾಲಯ ಗೋಚರಿಸುತ್ತದೆ. ಶ್ರೀನಗರ ಬಸ್ ನಿಲ್ದಾಣದಲ್ಲಿ ಇಳಿದು ನಡೆದೇ ದೇವಾಲಯಕ್ಕೆ ಬರಬಹುದು.