ಮನೆ ಕಾನೂನು ಸಿಂಧೂರಿ ಹೂಡಿರುವ ಮಾನಹಾನಿ ದಾವೆ: ಐಪಿಎಸ್ ಅಧಿಕಾರಿ ರೂಪಾಗೆ ಜಾಮೀನು ನೀಡಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ

ಸಿಂಧೂರಿ ಹೂಡಿರುವ ಮಾನಹಾನಿ ದಾವೆ: ಐಪಿಎಸ್ ಅಧಿಕಾರಿ ರೂಪಾಗೆ ಜಾಮೀನು ನೀಡಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ

0

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರಿಗೆ ಬೆಂಗಳೂರಿನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.

Join Our Whatsapp Group

ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಮಾನಹಾನಿ ಪ್ರಕರಣ ವಿಚಾರಣೆಯನ್ನು 24ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಬಿ ಸಿ ಚಂದ್ರಶೇಖರ್ ಅವರು ನಡೆಸಿದರು. ಪ್ರಕರಣದ ಸಂಬಂಧ ರೂಪಾ ಅವರಿಗೆ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿತ್ತು.

ರೂಪಾ ಪರ ವಕೀಲರಾದ ಮಧುಕರ್ ದೇಶಪಾಂಡೆ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು 50,000 ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆ ನೀಡಲು ಆದೇಶಿಸಿ, ಜಾಮೀನು ಮಂಜೂರು ಮಾಡಿತು. ದೇಶಪಾಂಡೆ ಅವರು ರೂಪಾ ಅವರು ನಗದನ್ನು ಭದ್ರತೆ ನೀಡಲು ಸಿದ್ದರಿದ್ದಾರೆ ಎಂದರು. ಇದಕ್ಕೆ ಅನುಮತಿಸಿದ ನ್ಯಾಯಾಲಯವು 25,000 ರೂಪಾಯಿ ನಗದು ಭದ್ರತೆ ನೀಡಲು ಅನುಮತಿಸಿತು. ಅಲ್ಲದೇ, ಆರೋಪ ನಿಗದಿ ಮಾಡಲು ಪ್ರಕರಣವನ್ನು ಜೂನ್ 26ಕ್ಕೆ ಮುಂದೂಡಿತು.

ಮಾರ್ಚ್ 25ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು “ಆರೋಪಿ ರೂಪಾ ಅವರ ವಿರುದ್ಧ ಪ್ರಕ್ರಿಯೆ ಮುಂದುವರಿಸಲು ಸಾಕಷ್ಟು ದಾಖಲೆಗಳು ಇವೆ. ಹೀಗಾಗಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಪ್ರಕ್ರಿಯೆ ಮುಂದುವರಿಸುವುದು ಅಗತ್ಯ” ಎಂದು ಆದೇಶಿಸಿತ್ತು. ಇದರ ಬೆನ್ನಿಗೇ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಲಾಗಿತ್ತು.

ಡಿ ರೂಪಾ ಮೌದ್ಗಿಲ್ ಅವರು 2023ರ ಫೆಬ್ರವರಿ 18 ಮತ್ತು 19ರಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ರೂಪ ಈ ಕೃತ್ಯ ಎಸಗಿದೆ. ಅದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ಮಾರ್ಚ್ 3ರಂದು ಖಾಸಗಿ ದೂರು ದಾಖಲಿಸಿದ್ದರು.

ಅಲ್ಲದೇ, ಮಾನಹಾನಿ ಮಾಡಿ ಮಾನಸಿಕ ಯಾತನೆ ಉಂಟು ಮಾಡಿರುವುದಕ್ಕಾಗಿ ಡಿ ರೂಪಾ ಅವರಿಂದ ಒಂದು ಕೋಟಿ ರುಪಾಯಿಯನ್ನು ಪರಿಹಾರವಾಗಿ ಕೊಡಿಸಿಕೊಡಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು. ಇದನ್ನು ಆಧರಿಸಿ ನ್ಯಾಯಾಲಯವು ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿತ್ತು.

ಈ ಪ್ರಕರಣ ವಜಾ ಕೋರಿ ರೂಪಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.