ಮನೆ ಕಾನೂನು ವಂಶಪಾರಂಪರ್ಯವಾಗಿ ಅರ್ಚಕರಾಗಲು ಉತ್ತರಾದಾಯಿತ್ವವು ತಂದೆಯ ಕಡೆಯಿಂದ ಇರಬೇಕೆ ವಿನಾ ತಾಯಿ ಕಡೆಯಿಂದಲ್ಲ: ಹೈಕೋರ್ಟ್

ವಂಶಪಾರಂಪರ್ಯವಾಗಿ ಅರ್ಚಕರಾಗಲು ಉತ್ತರಾದಾಯಿತ್ವವು ತಂದೆಯ ಕಡೆಯಿಂದ ಇರಬೇಕೆ ವಿನಾ ತಾಯಿ ಕಡೆಯಿಂದಲ್ಲ: ಹೈಕೋರ್ಟ್

0

ವಂಶಪಾರಂಪರ್ಯವಾಗಿ ಅರ್ಚಕ ಹುದ್ದೆ ಪಡೆಯಲು ತಂದೆಯ ಕಡೆಯಿಂದ ಉತ್ತರಾಧಿಕಾರವಿರಬೇಕೇ ವಿನಾ ತಾಯಿಯ ಕಡೆಯಿಂದಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಮಹತ್ವದ ಆದೇಶ ಮಾಡಿದೆ.

Join Our Whatsapp Group

[ಎಂ ಎಸ್ ರವಿ ದೀಕ್ಷಿತ್ ಮತ್ತು ಇತರರು ವರ್ಸಸ್ ಕರ್ನಾಟಕ ರಾಜ್ಯ].

ಬೆಂಗಳೂರಿನ ಕೆ ಆರ್ ಪುರಂನ ಮಹಾಬಲೇಶ್ವರ ಸ್ವಾಮಿ ದೇವಾಲಯದಲ್ಲಿ ತಾಯಿಯ ತಂದೆ ಅರ್ಚಕರಾಗಿದ್ದು, ಅವರ ನಿಧನದ ಬಳಿಕ ಬಳಿಕ ತಂದೆಯನ್ನು ಅರ್ಚಕರನ್ನಾಗಿ ನಿಯೋಜಿಸಲಾಗಿತ್ತು. ಈಗ ಅವರೂ ನಿಧನರಾಗಿರುವುದರಿಂದ ವಂಶಪಾರಂಪರ್ಶಯವಾಗಿ ತಮ್ಮನ್ನು ಅರ್ಚಕರನ್ನಾಗಿ ನಿಯೋಜಿಸುವಂತೆ ಕೋರಿ ಎಂ ಎಸ್ ರವಿ ದೀಕ್ಷಿತ್ ಮತ್ತು ಎಂ ಎಸ್ ವೆಂಕಟೇಶ್ ದೀಕ್ಷಿತ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಅರ್ಜಿದಾರರ ತಾಯಿಯ ತಂದೆ ಅವರು 1980ರ ಡಿಸೆಂಬರ್ನಲ್ಲಿ ಕೆ ಆರ್ ಪುರಂ ತಹಶೀಲ್ದಾರ್ ಅವರಿಗೆ ಪತ್ರ ಬರೆದು, ಅಳಿಯನನ್ನು (ಅರ್ಜಿದಾರರ ತಂದೆ) ಪೂಜೆ ಕೈಂಕರ್ಯ ಮುಂದುವರಿಸಲು ಅನುಮತಿಸುವಂತೆ ಕೋರಿದ್ದರು. ತಾಯಿಯ ತಂದೆ ಅರ್ಚಕರಾಗಿದ್ದರು ಎಂಬ ಆಧಾರದಲ್ಲಿ ಅರ್ಜಿದಾರರು ಅರ್ಚಕ ಹಕ್ಕು ಕೋರುತ್ತಿದ್ದಾರೆ. ವಂಶಪಾರಂಪರ್ಯದ ಭಾಗವಾಗಿ ಅವರು ಅರ್ಚಕರಾಗಿ ಮುಂದುವರಿಯಲು ಕೋರಲಾಗದು” ಎಂದು ನ್ಯಾಯಾಲಯ ಹೇಳಿದೆ.

“ವಂಶಪಾರಂಪರ್ಯವಾಗಿ ಅರ್ಚಕರಾಗಲು ಉತ್ತರಾದಾಯಿತ್ವವು ತಂದೆಯ ಕಡೆಯಿಂದ ಇರಬೇಕೆ ವಿನಾ ತಾಯಿಯ ಕಡೆಯಿಂದಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ನಂಜುಂಡ ದೀಕ್ಷಿತ್ ಅವರು ಸುಮಾರು ನಾಲ್ಕೂವರೆ ದಶಕಗಳ ಮಹಾಬಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಆನಂತರ ಪುತ್ರಿಯ ಪತಿ ಅಂದರೆ ಅಳಿಯ ಎಂ ಎನ್ ಸುಬ್ರಹ್ಮಣ್ಯ ದೀಕ್ಷಿತ್ ಅವರನ್ನು ಅರ್ಚಕರನ್ನಾಗಿ ನೇಮಕ ಮಾಡುವಂತೆ ನಂಜುಂಡ ದೀಕ್ಷಿತ್ ಅವರು 1980ರ ಡಿಸೆಂಬರ್ ನಲ್ಲಿ ಕೆ ಆರ್ ಪುರಂ ತಹಶೀಲ್ದಾರ್ ಗೆ ಕೋರಿದ್ದರು. ಇದಕ್ಕೆ ತಾಲ್ಲೂಕು ಆಡಳಿತ ಅನುಮತಿಸಿತ್ತು. 2022ರಲ್ಲಿ ಸುಬ್ರಹ್ಮಣ್ಯ ದೀಕ್ಷಿತ್ ಅವರು ತೀರಿಕೊಂಡಿದ್ದು, 2014ರಲ್ಲಿ ತಮ್ಮನ್ನು ವಂಶಪಾರಂಪರ್ಯ ಹಕ್ಕಿನಡಿ ಅರ್ಚಕರಾಗಿ ಮುಂದುವರಿಸುವಂತೆ ಸುಬ್ರಮಣ್ಯ ದೀಕ್ಷಿತ್ ಅವರ ಪುತ್ರರಾದ ರವಿ ಮತ್ತು ವೆಂಕಟೇಶ್ ದೀಕ್ಷಿತ್ ಸಹೋದರರು ಕೋರಿದ್ದರು.

ಅರ್ಜಿದಾರರ ಪೂರ್ವಜರು ಹಿಂದಿನ ಮೂರು ತಲೆಮಾರು ದೇವಸ್ಥಾನದಲ್ಲಿ ಅರ್ಚಕ ವೃತ್ತಿ ನಡೆಸಿಕೊಂಡು ಬಂದಿರುವುದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳು ಇಲ್ಲ. ಆದ್ದರಿಂದ, ಅರ್ಜಿದಾರರನ್ನು ವಂಶಪಾರಂಪರ್ಯದ ಆಧಾರದಲ್ಲಿ ಅರ್ಚಕ ವೃತ್ತಿಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 2016ರ ಏಪ್ರಿಲ್ನಲ್ಲಿ ಆದೇಶಿಸಿದ್ದರು. ಇದನ್ನು ಸಹೋದರರನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಈಗ ನ್ಯಾಯಾಲಯವು ಆ ಅರ್ಜಿಯನ್ನು ವಜಾ ಮಾಡಿದೆ.