ಮನೆ ಪ್ರಕೃತಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವಿಭಾಗ ವ್ಯಾಪ್ತಿಯ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವಿಭಾಗ ವ್ಯಾಪ್ತಿಯ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ

0

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವಿಭಾಗ ವ್ಯಾಪ್ತಿಯ ಗ್ರಾಮಗಳಲ್ಲಿ  ಕಳೆದ ಕೆಲವು ವರ್ಷದಿಂದ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ.

Join Our Whatsapp Group

ಕುಂದುಕೆರೆ ಹಾಗೂ ಜಿಎಸ್ ಬೆಟ್ಟ  ವಲಯದ ವ್ಯಾಪ್ತಿಯಲ್ಲಿನ ಜನವಸತಿ ಪ್ರದೇಶಗಳಾದ ಕೆಬ್ಬೆಪುರ, ಹುಂಡಿಪುರ, ಚೌಡಹಳ್ಳಿ, ಜಕ್ಕಹಳ್ಳಿ  ಮಂಗಲ, ಎಲಚೆಟ್ಟಿ, ಚಿಕ್ಕಎಲಚೆಟ್ಟಿಗಳಲ್ಲಿ ದಿನಂಪ್ರತಿ ರೈತರ ಜಮೀನುಗಳಿಗೆ ಕಾಡಾನೆ ದಾಳಿ ಮಾಡಿ, ಫಸಲು, ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡಿತ್ತು.

ಶಿವಪುರ ಗ್ರಾಮದಲ್ಲಿ ಕಾಡಾನೆ  ದಾಳಿಯಿಂದ ವ್ಯಕ್ತಿಯೋರ್ವರು ಮೃತಪಟ್ಟಿದ್ದರು. ಇದರಿಂದ ಬೇಸತ್ತ ಗ್ರಾಮಸ್ಥರು ಪ್ರಾಣಭಯದಿಂದ  ಜಮೀನುಗಳಲ್ಲಿ ವಾಸ ಮಾಡಲು ಹಾಗೂ ಜಮೀನುಗಳಿಗೆ ಕೆಲಸ ಕಾರ್ಯಗಳಿಗೆ ತೆರಳಲು  ಹಿಂಜರಿಯುತ್ತಿದ್ದರು.

ಈ ಕಾಡಾನೆಯ  ದಾಳಿಯಿಂದಾಗಿ ಸಾರ್ವಜನಿಕರು ಹಾಗೂ ಗ್ರಾಮಸ್ಥರು ಬೇಸತ್ತು ಮೇ  ೩೧ ರಂದು  ಹುಂಡೀಪುರ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿ, ಬಂಡೀಪುರ ಹಾಗೂ ಗುಂಡ್ಲುಪೇಟೆ  ಉಪ-ವಿಭಾಗಗಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳನ್ನು  ಸ್ಥಳಕ್ಕೆ ಬರಮಾಡಿಕೊಂಡು, ತಮ್ಮ ಕುಂದುಕೊರತೆಗಳನ್ನು ತಿಳಿಸಿ, ಕೂಡಲೇ ಕಾಡಾನೆಯನ್ನು  ಸೆರೆಹಿಡಿಯುವಂತೆ ಮನವಿ ಮಾಡಿದ್ದರು.

ಈ ಕುರಿತು ಅರಣ್ಯ ಸಂರಕ್ಷಣಾಧಿಕಾರಿಗಳು ಕಾಡಾನೆ ಸೆರೆಗೆ  ಮೇಲಾಧಿಕಾರಿಗಳೊಂದಿಗೆ ಪತ್ರ  ವ್ಯವಹಾರ ನಡೆಸಲಾಗಿ, ಕಾಡಾನೆಯನ್ನು ಸೆರೆ ಹಿಡಿಯಲು ಮಾನ್ಯ ಪ್ರಧಾನ ಮುಖ್ಯ ಅರಣ್ಯ  ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು, ಬೆಂಗಳೂರು ರವರು  ಕಾಡಾನೆಯನ್ನು ಸೆರೆಹಿಡಿಯಲು ಅನುಮತಿಯನ್ನು ನೀಡಿರುತ್ತಾರೆ. 

ಮುಂದುವರೆದು ಸಿಬ್ಬಂದಿಗಳ ತಂಡಗಳನ್ನು ರಚಿಸಲಾಗಿತ್ತು. ಮಡಿಕೇರಿ ಪ್ರಾದೇಶಿಕ ವಿಭಾಗದ ದುಬಾರೆ ಸಾಕಾನೆ ಶಿಬಿರದಿಂದ ಹರ್ಷ ಮತ್ತು ಧನಂಜಯ ಹಾಗೂ  ಬಿಆರ್‌ಟಿ ವಿಭಾಗದ ಕೆ ಗುಡಿ ಸಾಕಾನೆ ಶಿಬಿರದಿಂದ ಗಜೇಂದ್ರ ಮತ್ತು ಬಂಡೀಪುರ ಹುಲಿ ಸಂರಕ್ಷಿತ  ಪ್ರದೇಶದ ರಾಂಪುರ ಸಾಕಾನೆ ಶಿಬಿರದಿಂದ ಪಾರ್ಥಸಾರಥಿ ಮತ್ತು ಜಯಪ್ರಕಾಶ ಇಲಾಖಾ ಕುಮ್ಕಿ  ಆನೆಗಳನ್ನು ಹಾಗೂ ಸಾಕಾನೆಗಳ ಮಾವುತರು ಹಾಗೂ ಕಾವಾಡಿಗಳನ್ನು ಬರಮಾಡಿಕೊಂಡು  ಕಾರ್ಯಚರಣೆಯಲ್ಲಿ ತೊಡಗಿಸಿಕೊಳ್ಳಲಾಗಿರುತ್ತದೆ.

ಈ ಕಾರ್ಯಚರಣೆಯಲ್ಲಿ ನುರಿತ ಇಲಾಖಾ  ಪಶುವೈಧ್ಯಾಧಿಕಾರಿಗಳಾದ ಡಾ. ಮಿರ್ಜಾ ವಾಸೀಂ, ಬಂಡೀಪುರ ವಿಭಾಗ ಹಾಗೂ ಸತ್ಯಮಂಗಲ ಹುಲಿ  ಸಂರಕ್ಷಿತ ಪ್ರದೇಶದ ಡಾ.ಸದಾಶಿವನ್, ಪಶುವೈಧ್ಯಾಧಿಕಾರಿಗಳು ಹಾಗೂ ಸಹಾಯಕರು  ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ. 

ಕಾರ್ಯಚರಣೆಯ ವೇಳೆ ಕುಂದುಕೆರೆ ವಲಯದ ಎಲಚೆಟ್ಟಿ ಶಾಖೆಯ ಲೊಕ್ಕೆರೆ ಗಸ್ತಿನ ಗುಡ್ಡೆಕೆರೆ  ಅರಣ್ಯ ಪ್ರದೇಶದಲ್ಲಿ ಕಾಡಾನೆ ಇರುವುದು ತಿಳಿದುಬಂದಿದ್ದು, ೦೫ ದಿನಗಳ ಸತತ ಪರಿಶ್ರಮದ ಫಲವಾಗಿ,  ಕಾಡಾನೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ.

ಪ್ರಧಾನ ಮುಖ್ಯ ಅರಣ್ಯ  ಸಂರಕ್ಷಣಾಧಿಕಾರಿಗಳು, (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು, ಕರ್ನಾಟಕ, ಅರಣ್ಯ  ಭವನ, ಮಲ್ಲೇಶ್ವರಂ ಬೆಂಗಳೂರು ರವರ ಆದೇಶದಂತೆ ಸೆರೆ ಸಿಕ್ಕಿರುವ ಪುಂಡಾನೆಯನ್ನು ಬಂಡೀಪುರ  ವಿಭಾಗ ವ್ಯಾಪ್ತಿಯ ಐನೂರು ಮಾರಿಗುಡಿ ವಲಯದ ರಾಂಪುರ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲು  ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ.