ಬೆಂಗಳೂರು: ರಾಜ್ಯದಲ್ಲಿ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡುವ ಪ್ರತಿಯೊಬ್ಬರ ಮನೆಗೆ ಸರ್ಕಾರದಿಂದ ನೀಡಲಾಗುವ ‘ಗೃಹಜ್ಯೋತಿ’ ಯೋಜನೆಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಈ ಕುರಿತು ಇಂಧನ ಸಚಿವ ಕೆ ಜೆ ಜಾರ್ಜ್ ಬೆಂಗಳೂರಿನ ಬೆಸ್ಕಾಂ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಗೃಹಜ್ಯೋತಿ ಯೋಜನೆಯನ್ನು ನಾಗರಿಕರು ಪಡೆಯುವುದು ಹೇಗೆ, ಯಾವ ರೀತಿ ಅರ್ಜಿ ಸಲ್ಲಿಸಬೇಕು, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಗೃಹ ಜ್ಯೋತಿ ಯೋಜನೆ ಜಾರಿಗೆ ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದೆ. 200 ಯೂನಿಟ್ ವರಗೆ ಉಚಿತ ನೀಡಲಾಗುತ್ತದೆ. ಗೃಹ ಬಳಕೆ ಬಳಕೆದಾರರು ಸರಾಸರಿ ಒಂದು ವರ್ಷ ಬಳಕೆ ಮಾಡಿದ ವಿದ್ಯುತ್ ಅಂಕಿ ಅಂಶಗಳನ್ನು ಪಡೆದುಕೊಂಡು ಉಚಿತವಾಗಿ ವಿದ್ಯುತ್ ನೀಡಲಾಗುತ್ತದೆ ಎಂದರು.
ಜೂನ್ 15 ರಿಂದ ಯೋಜನೆಯನ್ನು ಜಾರಿ ಮಾಡುತ್ತೇವೆ. ಗ್ರಾಹಕರು ಸರಾಸರಿ ಬಿಲ್ ಗಿಂತ ಹೆಚ್ಚು ಉಪಯೋಗ ಮಾಡಿದರೆ ಹೆಚ್ಚುವರಿ ಬಳಕೆಗೆ ಬಿಲ್ ಕಟ್ಟಬೇಕಿದೆ ಎಂದರು.
ರಾಜ್ಯದಲ್ಲಿ ಒಟ್ಟು 2. 16 ಕೋಟಿ ಗ್ರಾಹಕರು ಇದ್ದಾರೆ, ಈ ಪೈಕಿ 200 ಯೂನಿಟ್ ಗಿಂತ ಕಡಿಮೆ ಬಳಕೆ ಮಾಡುವ ಗ್ರಾಹಕರು 2.14 ಕೋಟಿ ಇದ್ದಾರೆ. ಈ ಗ್ರಾಹಕರು ಸರಾಸರಿ 53 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಾರೆ. ಎರಡು ಲಕ್ಷ ಜನರು 200 ಯೂನಿಟ್ ಹೆಚ್ಚು ಬಳಕೆ ಮಾಡುತ್ತಾರೆ ಎಂದು ತಿಳಿಸಿದರು.
ಉಚಿತ ಯೋಜನೆ ಅಡಿಯಲ್ಲಿ ಗ್ರಾಹಕರು ನಿಗದಿತ ಶುಲ್ಕವನ್ನು ಕಟ್ಟುವ ಹಾಗಿಲ್ಲ. ಅದರೆ ಸರಾಸರಿ ಬಳಕೆಗಿಂತ ಹೆಚ್ಚುವರಿ ಬಳಕೆ ಮಾಡಿದರೆ ಅಂತಹ ಗ್ರಾಹಕರು ನಿಗದಿತ ಶುಲ್ಕ ಕಟ್ಟಬೇಕಿದೆ ಎಂದು ತಿಳಿಸಿದರು.
ಅರ್ಜಿ ಸಲ್ಲಿಕೆ ಹೇಗೆ?
ವಾಸಿಂಧು ಪೋರ್ಟಲ್ ನಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಂಪ್ಯೂಟರ್, ಮೊಬೈಲ್ ನಿಂದ ಆಕ್ಸಸ್ ಪಡೆಯಬಹುದಾಗಿದೆ.
ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೆಂಟರ್ ಗಳಲ್ಲಿ ಅವಕಾಶ. ಜೂನ್ 15 ರಿಂದ ಪ್ರಾರಂಭ ಮಾಡುತ್ತೇವೆ.
ಸರ್ವರ್ ಸಮಸ್ಯೆ ಆಗದಂತೆಯೂ ಕ್ರಮ ಕೈಗೊಳ್ಳಲಾಗುವುದು.
ಬಾಡಿಗೆದಾರರು ಸೌಲಭ್ಯ ಹೇಗೆ ಪಡೆಯುವುದು?
ಬಾಡಿಗೆದಾರರು ಆಧಾರ್ ಹಾಗೂ ಆರ್ ಆರ್ ಕೊಡಬೇಕು ಅಥವಾ ಲೀಝ್ ಅಗ್ರಿಮೆಂಟ್, ಓಟರ್ ಐಡಿ ಅಥವಾ ಕರಾರು ಪತ್ರವನ್ನು ಕೊಡಬೇಕು. ನಾವು ಬಾಡಿಗೆ ಮನೆಯಲ್ಲಿ ಇದ್ದೇವೆ ಎಂಬ ಬಗ್ಗೆ ದಾಖಲೆ ಕೊಡಬೇಕಿದೆ.
ಜೂನ್ 15 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಅರ್ಜಿ ಸಲ್ಲಿಕೆಗೆ ಜುಲೈ 5 ಕೊನೆಯ ದಿನವಾಗಿದೆ.