ಹೆಗ್ಗಡದೇವನ ಕೋಟೆ: ತಾಲೂಕಿನ ಡಿ ಬಿ ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾನಿಮೂಲೆ ಆದಿವಾಸಿ ಹಾಡಿಯ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲು ಆಗ್ರಹಿಸಿ ಇಂದು ಪ್ರತಿಭಟಿಸಲಾಯಿತು.
ಕಳೆದ ಹಲವಾರು ವರ್ಷಗಳಿಂದ ಶಾಶ್ವತ ಅಂಗನವಾಡಿ ಕಟ್ಟಡಕ್ಕೆ ಆಗ್ರಹಿಸಿ ಹಲವು ಬಾರಿ ಮನವಿ ಪತ್ರ ಸಲ್ಲಿಸಿ, ಪ್ರತಿಭಟನೆಯನ್ನು ಮಾಡಿದ್ದರು ಸಹ ಇದುವರೆಗೂ ಅರಣ್ಯ ಇಲಾಖೆಯಾಗಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಾಗಲಿ ಇದುವರೆಗೂ ಕ್ರಮ ಕೈಗೊಂಡಿಲ್ಲ, ಅರಣ್ಯ ಇಲಾಖೆಯ ನಿರ್ಲಕ್ಷ ಧೋರಣೆಯಿಂದಾಗಿ ಮಾನಿಮೂಲೆ,ಬಾವಲಿ ಹಾಡಿ ಅಂಗನವಾಡಿ ಹಾಗೂ ಬಳ್ಳೆ ಹಾಡಿ,ಗೊಳೂರು ಹಾಡಿ,ಆನೆಮಾಳ ಹಾಡಿ ಶಾಲಾ ಕಟ್ಟಡಗಳು ಇಂದೊ,ನಾಳೆಯೋ ಬಿದ್ದು ಹೋಗುವ ದುಸ್ಥಿತಿಯಲ್ಲಿ ಇರುವುದರಿಂದ ಇಲ್ಲಿ ಆದಿವಾಸಿ ಮಕ್ಕಳು ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಇದುವರೆಗೂ ಇಲ್ಲಿ ಅಂಗನವಾಡಿ ಕಟ್ಟಡವನ್ನು ಕಟ್ಟಲು ಅನುಮತಿ ನೀಡದೇ ಇರುವ ಕಾರಣ ಕಟ್ಟಡ ಕಟ್ಟಲು ಬಂದ ಅನುದಾನವು ಸಹ ಬಳಕೆ ಆಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಸಮಸ್ಯೆ ಹೆಚ್ಚಾಗಿದ್ದು. ಆನೆ ದಾಳಿ , ಮಳೆಯಿಂದಾಗಿ ಅಂಗನವಾಡಿ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿದ್ದು. ಕಳೆದ ಎರಡು ವರ್ಷಗಳಿಂದ ಇಲ್ಲಿಯ ಸಣ್ಣ ಮಕ್ಕಳು ಅಂಗನವಾಡಿಯಲ್ಲಿ ಕುಳಿತು ಆಟ,ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ. ನೂರಾರು ಕೋಟಿ ಪೋಷಣ್ ಅಭಿಯಾನದ ಹೆಸರಿನಲ್ಲಿ ಕೇವಲ ಜಾಹೀರಾತು ಪ್ರಚಾರಗಳಿಗೆ ಖರ್ಚು ಮಾಡುವ ಸರ್ಕಾರಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಆದಿವಾಸಿ ಮಕ್ಕಳ ಅಭಿವೃದ್ಧಿಯನ್ನು ಕಡೆಗಣಿಸುತ್ತಿರುವುದನ್ನು ಖಂಡಿಸುವುದಾಗಿ ತಿಳಿಸಿದರು.
ಈ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಶಾಶ್ವತ ಅಂಗನವಾಡಿ ಕಟ್ಟಡವನ್ನು ನಿರ್ಮಿಸಬೇಕು. ಅಲ್ಲಿಯವರೆಗೆ ತಾತ್ಕಾಲಿಕ ವ್ಯವಸ್ಥೆಯನ್ನು ಈ ಕೂಡಲೇ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಮಾನಿಮೂಲೆ ಅಂಗನವಾಡಿಯ ಹಾಡಿಯ ಮಹಿಳೆಯರಾದ ಗಂಗೆ, ಸರೋಜ, ಮಂಜುಳ, ಜಯ, ಮೀನಾ, ರತ್ನ, ಚಂದ್ರ ಹಾಗೂ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿಯ ಮುಖಂಡರಾದ ಸುನಿಲ್ ಟಿ ಆರ್ ಇದ್ದರು.