ಮನೆ ಸುದ್ದಿ ಜಾಲ ಪರೀಕ್ಷಾ ಪೇ ಚರ್ಚಾ ವೀಕ್ಷಣೆಗೆ ಮೈಸೂರು ವಿವಿಯಲ್ಲಿ ಎಲ್‌ ಇಡಿ ಸ್ಕ್ರೀನ್ ವ್ಯವಸ್ಥೆ

ಪರೀಕ್ಷಾ ಪೇ ಚರ್ಚಾ ವೀಕ್ಷಣೆಗೆ ಮೈಸೂರು ವಿವಿಯಲ್ಲಿ ಎಲ್‌ ಇಡಿ ಸ್ಕ್ರೀನ್ ವ್ಯವಸ್ಥೆ

0

ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಣೆಗೆ ಮೈಸೂರು ವಿಶ್ವವಿದ್ಯಾಲಯದ ಮೂರು ಕಡೆ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 800ಕ್ಕೂ ಹೆಚ್ಚು ಬೋಧಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮ ವೀಕ್ಷಿಸಿದರು.

ಮಾನಸ ಗಂಗೋತ್ರಿಯ ಕಂಪ್ಯೂಟರ್ ಸೈನ್ಸ್ ವಿಭಾಗ, ವಿಜ್ಞಾನ ಭವನ ಹಾಗೂ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಎಲ್‌ ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು. ಬೆಳಗ್ಗೆ ಹನ್ನೊಂದು ಗಂಟೆಗೆ ಆರಂಭವಾದ ಕಾರ್ಯಕ್ರಮವನ್ನು ಸಾಕಷ್ಟು ವಿದ್ಯಾರ್ಥಿಗಳು ವೀಕ್ಷಿಸಿದರು. ಮೈಸೂರು ತಾಲ್ಲೂಕಿನ ಜವಾಹರ ನವೋದಯ ವಿದ್ಯಾಲಯದ 11ನೇ ತರಗತಿಯ ಎಂ.ಬಿ. ತರುಣ್ ಏ. 1ರ ಬೆಳಗ್ಗೆ 11ಕ್ಕೆ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಜೊತೆ ಸಂವಾದದಲ್ಲಿ  ಭಾಗಿಯಾಗಿದ್ದನು.

ಶಾಲಾ ಮಕ್ಕಳಲ್ಲಿನ ಪರೀಕ್ಷೆಯೆಡೆಗಿನ ಭಯ ಹಾಗೂ ಒತ್ತಡವನ್ನು ಹೋಗಲಾಡಿಸಿ, ಆತ್ಮವಿಶ್ವಾಸವನ್ನು ವೃದ್ಧಿಸುವ ಸಲುವಾಗಿ 2018ರಿಂದ ದೇಶದ ವಿವಿಧ ಶಾಲಾ ವಿದ್ಯಾರ್ಥಿಗಳ ಜೊತೆ ಪರೀಕ್ಷಾ ಪೆ ಚರ್ಚೆ ಎಂಬ ಪರಿಕಲ್ಪನೆಯಲ್ಲಿ ಪ್ರಧಾನಿಯವರು ಸಂವಾದ ನಡೆಸುತ್ತಿದ್ದು, ಇದು ಐದನೇ ಆವೃತ್ತಿಯಾಗಿದೆ. ಈ ಬಾರಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿಯವರ ಜೊತೆ ಸಂವಾದ ನಡೆಸಲು ಶಾಲೆಯ 11ನೇ ತರಗತಿಯ ತರುಣ್ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ವಿದ್ಯಾರ್ಥಿಯಾಗಿದ್ದು, ಶಾಲೆ ಹಾಗೂ ಇಡೀ ಜಿಲ್ಲೆಗೆ ಹೆಮ್ಮೆ ತಂದಿದ್ದಾನೆ.

ಆರರಿಂದ ದ್ವಿತೀಯ ಪಿಯುವರೆಗಿನ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಧಾನಿಯವರ ಪರೀಕ್ಷಾ ಪೇ ಚರ್ಚಾ ಸಂವಾದ ವೀಕ್ಷಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರಿಗೆ ವಿದ್ಯಾರ್ಥಿಗಳ ಸಂವಾದ ವೀಕ್ಷಣೆಗೆ ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆ  ಮಾಡಿಕೊಳ್ಳಲಾಗಿತ್ತು.