ಮನೆ ರಾಜಕೀಯ ಟ್ರಸ್ಟ್ ಗಳ ಕಾರ್ಯನಿರ್ವಹಣೆಗೆ ಹೆಚ್ಚಿನ ಬಲ: ಸಚಿವ ಶಿವರಾಜ್  ತಂಗಡಗಿ

ಟ್ರಸ್ಟ್ ಗಳ ಕಾರ್ಯನಿರ್ವಹಣೆಗೆ ಹೆಚ್ಚಿನ ಬಲ: ಸಚಿವ ಶಿವರಾಜ್  ತಂಗಡಗಿ

0

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ  ವಿವಿಧ ಟ್ರಸ್ಟ್ ಗಳ ಕಾರ್ಯನಿರ್ವಹಣೆಗೆ ಹೆಚ್ಚಿನ ಬಲ ತುಂಬಲು  ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

Join Our Whatsapp Group

ಅವರು ಕನ್ನಡ ಭವನದ ಅಂತರಂಗದಲ್ಲಿ ವಿವಿಧ ಟ್ರಸ್ಟ್ ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳೊಂದಿಗೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಈ ಕುರಿತು ಮಾತನಾಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ 24 ಟ್ರಸ್ಟ್ ಗಳು ಕಾರ್ಯ ನಿರ್ವಹಿಸುತ್ತಿದ್ದು ಪ್ರತಿವರ್ಷ ಈ ಟ್ರಸ್ಟ್ ಗಳ ಕಾರ್ಯ ಚಟುವಟಿಕೆಗಾಗಿ ಅನುದಾನ ಒದಗಿಸಲಾಗುತ್ತಿದೆ. ಈ ಟ್ರಸ್ಟ್ ಗಳು ನಡೆಸುವ ಕಾರ್ಯ ಚಟುವಟಿಕೆಗಳು ಮತ್ತು ಅವುಗಳ ಕುಂದು ಕೊರತೆ ಹಾಗೂ ಅವುಗಳ ಪರಿಹಾರಗಳನ್ನು ಕುರಿತಂತೆ ಈ ಸಮಾಲೋಚನಾ ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಯಿತು.

ಪ್ರತಿಯೊಂದು ಟ್ರಸ್ಟ್ ಗಳ ಬಗ್ಗೆ ಮಾಹಿತಿ ಪಡೆದ ಸಚಿವರು ಜಿಲ್ಲಾ ಪ್ರವಾಸ ಮಾಡುವ ವೇಳೆ ಆಯಾ ಜಿಲ್ಲೆಗಳಲ್ಲಿರುವ ಟ್ರಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಬೆಟಗೇರಿ ಕೃಷ್ಣಶರ್ಮರ ಮನೆಯನ್ನು ಸ್ಮಾರಕವಾಗಿಸುವುದರ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು. ಸಚಿವರು ಅದಕ್ಕೆ ಪೂರಕವಾಗಿ ಸ್ಪಂದಿಸಿ ಈ ಬಗ್ಗೆ ವಿವರಗಳನ್ನು ತರಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಗುಬ್ಬಿ ವೀರಣ್ಣ ರಂಗಮಂದಿರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಂಸದೆ  ಬಿ.ಜಯಶ್ರೀ ಅವರು ಅನುದಾನ ಹೆಚ್ಚಳಕ್ಕೆ ಮನವಿ ಮಾಡಿದರು ಹಾಗೂ ಅದರ ಕಾರ್ಯ ಚಟುವಟಿಕೆ ವೀಕ್ಷಿಸಲು ಮಾನ್ಯ ಸಚಿವರನ್ನು ಆಹ್ವಾನಿಸಿದರು. ಅವರಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು ಭೇಟಿಗೆ ಒಪ್ಪಿಗೆ ಸೂಚಿಸಿ ಅನುದಾನ ಹೆಚ್ಚಳ ಕುರಿತಂತೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಗಳದನಾಥ ಮತ್ತು ರಾಜ ಪುರೋಹಿತ ಟ್ರಸ್ಟ್ ಗಳು ಕಟ್ಟಡ ನಿರ್ಮಾಣಕ್ಕೆ ಎರಡು ಕೋಟಿ ಪ್ರಸ್ತಾವನೆ ಸಲ್ಲಿಸಿರುವುದಾಗಿ ಸಚಿವರ ಗಮನಕ್ಕೆ ತಂದರು.

ಹಾಲಬಾವಿ ಟ್ರಸ್ಟ್ ನವರು ಹಲಭಾವಿ ಅವರ ಹೆಸರಿನಲ್ಲಿ ಆರ್ಟ್ ಗ್ಯಾಲರಿ ಒಂದನ್ನು ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯನ್ನು ಸಚಿವರ ಮುಂದಿಟ್ಟರು.

ನಿಜಲಿಂಗಪ್ಪ ಟ್ರಸ್ಟ್ ಪರವಾಗಿ ಮಾಜಿ ಸಂಸದ ಹನುಮಂತಪ್ಪ ಮಾತನಾಡಿ, ಸರ್ಕಾರಿ ಅಧಿಕಾರಿಗಳ ನೇಮಕದ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಕೋರಿದರು.

ಕುವೆಂಪು ಟ್ರಸ್ಟ್ ನ ಕಾರ್ಯದರ್ಶಿ ಕಡಿದಾಳ್ ರಮೇಶ್ ಅವರು ಮಾತನಾಡಿ ಕುವೆಂಪು ಅವರ ಮನೆಯನ್ನು ರಾಷ್ಟ್ರದ ಅತ್ಯುತ್ತಮ ಕವಿಮನೆಯನ್ನಾಗಿ ಮಾಡಿದ್ದೇವೆ. ಇದು ಇಡೀ ರಾಷ್ಟ್ರದ ಗಮನ ಸೆಳೆಯುವಂತೆ ಮಾಡಲು ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಸಂದರ್ಭಗಳಲ್ಲಿ ಮತ್ತು ದಸರಾ ಪ್ರದರ್ಶನಗಳಲ್ಲಿ ಕುವೆಂಪು ಅವರ ಮನೆಯ ಟ್ಯಾಬ್ಲೋ ಮಾಡಿ ಪ್ರದರ್ಶಿಸಿದರೆ ಒಳ್ಳೆಯ ಪ್ರಚಾರ ಸಿಗುತ್ತದೆ , ಅಲ್ಲದೆ ಲಾಲ್ ಬಾಗ್ ನಲ್ಲಿ ಪ್ರತಿವರ್ಷ ಆಯೋಜಿಸುವ ಪುಷ್ಪ ಪ್ರದರ್ಶನದಲ್ಲಿ ಕುವೆಂಪು ಅವರ ಮನೆಯ ಮಾದರಿಯನ್ನು ಮಾಡಿದರೆ ಅದು ಅಸಂಖ್ಯಜನರ ಗಮನ ಸೆಳೆಯುತ್ತದೆ ಎಂದು ಮನವಿ ಮಾಡಿದರು.

ಬೇಂದ್ರೆ ಟ್ರಸ್ಟ್ ವತಿಯಿಂದ ಬೇಂದ್ರೆ  ಅವರ ಜನ್ಮದಿನವನ್ನು ವಿಶ್ವಕವಿ ದಿನಾಚರಣೆ ಎಂದು ಆಚರಿಸುವಂತೆ  ಕೋರಲಾಯಿತು.

ನಂತರ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಅವರು, ಎಲ್ಲಾ ಟ್ರಸ್ಟ್ ಗಳ ಮನವಿಗಳನ್ನು ತಾವು ಅತ್ಯಂತ ಸಕಾರಾತ್ಮಕ ದೃಷ್ಟಿಯಿಂದಲೇ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಟ್ರಸ್ಟ್ ಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ಅನುದಾನ ಹೆಚ್ಚಿಸಲು ತಾವು ಮುಂಬರುವ ಆಯವ್ಯಯದಲ್ಲಿ ಹೆಚ್ಚಿನ ಅನುದಾನವನ್ನು ಕೊಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.