ಬೆಂಗಳೂರು: ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಲಕ್ಷಾಂತರ ರೂ. ವಂಚಿಸಿದ ನಕಲಿ ಪೊಲೀಸ್ ಅಧಿಕಾರಿಯೊಬ್ಬನನ್ನು ಕಾಟನ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಿಶುಕುಮಾರ್ (45) ಬಂಧಿತ.
ಆರೋಪಿ ಮಲ್ಲೇಶ್ವರ ನಿವಾಸಿ ರಾಘವೇಂದ್ರ ಎಂಬವರಿಗೆ 25 ಲಕ್ಷ ರೂ. ವಂಚಿಸಿದ್ದಾನೆ. ಈ ಸಂಬಂಧ ರಾಘವೇಂದ್ರ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ದೂರುದಾರ ರಾಘವೇಂದ್ರ ಮಲ್ಲೇಶ್ವರದಲ್ಲಿ ಸ್ಟರಿಯಾಸ್ ಫೈನಾನ್ಸ್ ಸರ್ವೀಸ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾಗಿದ್ದಾರೆ. ಹೇಮಂತ್ ನಾಯ್ಡು ಎಂಬವರು ವಿಶುಕುಮಾರ್ ರನ್ನು ಸಿಸಿಬಿ ಡಿವೈಎಸ್ಪಿ ಎಂದು ಪರಿಚಯಿಸಿದ್ದರು. ಬಳಿಕ ಆಗಾಗ್ಗೆ ಕಚೇರಿಗೆ ಬಂದು ಪೊಲೀಸರ ಕಾರ್ಯಾಚರಣೆ, ಅವುಗಳ ಫೋಟೋಗಳನ್ನು ತೋರಿಸುತ್ತಿದ್ದ. ವಾಟ್ಸ್ ಆ್ಯಪ್ ಗಳ ಮೂಲಕ ಕಳುಹಿಸಿ ಬಿಲ್ಡಪ್ ಪಡೆಯುತ್ತಿದ್ದ.
ಈ ಮಧ್ಯೆ ತುರ್ತು 25 ಲಕ್ಷ ರೂ. ಬೇಕಿದೆ, ಮೂರು ತಿಂಗಳಲ್ಲಿ ವಾಪಸ್ ಕೊಡುವುದಾಗಿ ರಾಘವೇಂದ್ರ ಬಳಿ ಕೇಳಿದ್ದ. ಯಾವ ಕಾರಣಕ್ಕೆ ಹಣ ಎಂದು ಕೇಳಿದಾಗ, ತನ್ನ ಮದುವೆ ಇದೆ. ಅದಕ್ಕಾಗಿ ಬೇಕಿದೆ ಎಂದಿದ್ದ. ಹೀಗಾಗಿ ರಾಘವೇಂದ್ರ ಸ್ನೇಹಿತರ ಮೂಲಕ ಹಣ ಪಡೆದು 20 ಲಕ್ಷ ರೂ. ಬ್ಯಾಂಕ್ ಖಾತೆಗೆ ಬಳಿಕ 5 ಲಕ್ಷ ರೂ. ನಗದು ರೂಪದಲ್ಲಿ ನೀಡಿದ್ದರು. ಅಲ್ಲದೆ, 2022ರ ಡಿಸೆಂಬರ್ 9ರಂದು ಎಂ.ಎಸ್.ಬಿಲ್ಡಿಂಗ್ ಮುಂಭಾಗದ ಆಂಜನೇಸ್ವಾಮಿ ದೇವಸ್ಥಾನದಲ್ಲಿ ನಡೆದ ಆರೋಪಿಯ ಮದುವೆಗೂ ರಾಘವೇಂದ್ರ ಹಾಜರಾಗಿದ್ದರು. ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.
ಆ ನಂತರ 2023ರ ಫೆಬ್ರವರಿಯಲ್ಲಿ ಆರೋಪಿಗೆ ಹಣ ಕೇಳಿದಾಗ, ಇಲ್ಲದ ಸಬೂಬು ಹೇಳಿ ಆರೋಪಿ ಮುಂದೂಡುತ್ತಿದ್ದ. ಕರೆ ಮತ್ತು ಸಂದೇಶ ಕಳುಹಿಸಿದಾಗ, ತಾನೊಬ್ಬ ಪೊಲೀಸ್ ಅಧಿಕಾರಿಯಾಗಿದ್ದು, ಎಲ್ಲ ಸಂದರ್ಭದಲ್ಲಿ ಉತ್ತರ ನೀಡಲು ಸಾಧ್ಯವಿಲ್ಲ. ಬಳಿಕ ಮಾತನಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದ. ಆ ಬಳಿಕವೂ ಯಾವುದೇ ಸ್ಪಂದನೆ ನೀಡದಿದ್ದಾಗ, ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದು ರಾಘವೇಂದ್ರ ಹೇಳಿದ್ದರು. ಆಗ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಯಾವುದೇ ಠಾಣೆಗೆ ಹೋದರು ಪ್ರಯೋಜನವಿಲ್ಲ. ಕೊಟ್ಟಿರುವ ಖಾಲಿ ಚೆಕ್‌ಗಳನ್ನು ಹರಿದು ಹಾಕುವಂತೆ ಎಚ್ಚರಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.
ಕೆಲ ದಿನಗಳ ಬಳಿಕ ಈ ವಿಚಾರವನ್ನು ರಾಘವೇಂದ್ರ ತಮ್ಮ ಸ್ನೇಹಿತರ ಬಳಿ ವಿಚಾರಿಸಿದಾಗ, ಆತ ನಕಲಿ ಪೊಲೀಸ್ ಅಧಿಕಾರಿ ಎಂಬುದು ಗೊತ್ತಾಗಿದೆ. ಅಲ್ಲದೆ, ಈತ ಕೆಲವರಿಗೆ ತಾನು ಐಪಿಎಸ್ ಅರ್ಜನ್, ಇನ್ನು ಕೆಲವರಿಗೆ ಎಸಿಪಿ ವಿಶುಕುಮಾರ್ ಎಂದು ಹೇಳಿಕೊಂಡು ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ. ಈ ಸಂಬಂಧ ಸಿಸಿಬಿಗೆ ದೂರು ನೀಡಿದ್ದರು. ಬಳಿಕ ಕಾಟನ್ ಪೇಟೆ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಯಾವುದೇ ಕೆಲಸಕ್ಕೆ ಹೋಗದೆ ಇದೇ ರೀತಿ ವಂಚನೆ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆದರೆ, ಆರೋಪಿ ಪೊಲೀಸರ ಹೆಸರು ಬಳಸಿಕೊಂಡು ಕೋಟ್ಯಂತರ ರೂ. ವಂಚಿಸಿದ್ದರಿಂದ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ಪ್ರಕರಣ ವರ್ಗಾವಣೆಯಾಗಲಿದೆ. ಇದೇ ರೀತಿ ಎಷ್ಟು ಜನರಿಗೆ ವಂಚಿಸಿದ್ದಾನೆ? ಯಾರಿಗೆಲ್ಲ ವಂಚಿಸಿದ್ದಾನೆ? ಇತರೆ ಆಯಾಮಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.