ಮನೆ ದೇವಸ್ಥಾನ ಹನುಮಂತನಗರ ಪಂಚಮುಖಿ ಗಣಪತಿ ದೇವಾಲಯ

ಹನುಮಂತನಗರ ಪಂಚಮುಖಿ ಗಣಪತಿ ದೇವಾಲಯ

0

ಬೆಂಗಳೂರು ಮಹಾ ನಗರದ ಹಳೆಯ ಬಡಾವಣೆಗಳಲ್ಲಿ ಒಂದಾದ ಬಸವನಗುಡಿಗೆ ಹೊಂದಿಕೊಂಡಿರುವ ಹನುಮಂತನಗರ ಹಲವು ಪುರಾತನ ದೇವಾಲಯಗಳ ಬೀಡು. ಇಲ್ಲಿನ ನರಹರಿರಾಯರ ಗುಡ್ಡದಲ್ಲಿ ಪಂಚಮುಖಿ ಗಣಪತಿ ಹಾಗೂ ಹರೋಹರ (ಸುಬ್ರಹ್ಮಣ್ಯ) ದೇವಾಲಯಗಳಿವೆ.

Join Our Whatsapp Group

ದೊಡ್ಡ ಗಣಪ ಹಾಗೂ ದೊಡ್ಡ ಬಸವನಗುಡಿಗೆ ಒಂದು ಕಿಲೋ ಮೀಟರ್ ದೂರದಲ್ಲಿರುವ ನರಹರಿರಾಯನ ಗುಡ್ಡ  ಹಿಂದೆ ಕಾಡು, ಮೇಡುಗಳಿಂದ ಕೂಡಿದ ಗುಡ್ಡವಾಗಿತ್ತು. ಈ ಪ್ರದೇಶದಲ್ಲಿ ಮಾಗಡಿ ಕೆಂಪೇಗೌಡರ ಕಾಲದಲ್ಲಿಯೇ ಪುಟ್ಟದೊಂದು ದೇವಾಲಯ ನಿರ್ಮಾಣವಾಗಿತ್ತು ಎಂದು ಹೇಳಲಾಗುತ್ತದೆ.

ನರಹರಿರಾಯ ಎಂಬುವವರು ಈ ದೇವಾಲಯ ಪ್ರದೇಶ ಹಾಗೂ ದೇವಾಲಯಗಳನ್ನು ಅಭಿವೃದ್ಧಿ ಪಡಿಸಿದ ಕಾರಣ ಈ ಬೆಟ್ಟ ನರಹರಿರಾಯರ ಗುಡ್ಡ ಎಂದು ಖ್ಯಾತವಾಯಿತು ಎಂದು ತಿಳಿದುಬರುತ್ತದೆ.

ಈ ಗುಡ್ಡಕ್ಕೆ  ಒಮ್ಮೆ ಆಗಮಿಸಿದ್ದ ಮೈಸೂರು ಅರಮನೆಯ ಆಸ್ಥಾನ ವಿದ್ವಾಂಸರಾದ ಸಿದ್ಧಾಂತಿ ಶಿವಶಂಕರ ಶಾಸ್ತ್ರೀಗಳು, ಇಲ್ಲಿನ ಪ್ರಶಾಂತತೆಗೆ ಮಾರುಹೋಗಿ ಇಲ್ಲಿ ಧ್ಯಾನವನ್ನಾಚರಿಸಿದರಂತೆ. ಇವರೇ 1924ರಲ್ಲಿ ಬೆಟ್ಟದ ತಪ್ಪಲಿನಲ್ಲಿ ಪುಟ್ಟ ಗುಡ್ಡದ ಮೇಲೆ ಪಂಚಮುಖಿ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸಿ, ಈ ಬೆಟ್ಟ ಪ್ರದೇಶಕ್ಕೆ ಕುಮಾರಶೈಲವೆಂದು ಮರು ನಾಮಕರಣ ಮಾಡಿದರು ಎಂದು ಪಂಚಮುಖಿ ದೇವಾಲಯದ ಅರ್ಚಕರಾದ ಶ್ರೀ. ವಿಷ್ಣು ಭಟ್ ತಿಳಿಸುತ್ತಾರೆ.

ಪಂಚಮುಖಿ ವಿನಾಯಕನ ದೇವಾಲಯ ಕೆಲವೇ ವರ್ಷಗಳ ಹಿಂದೆ ಗುಡ್ಡದ ಮೇಲಿನ ಪುಟ್ಟ ಪ್ರಾಕಾರದಲ್ಲಿತ್ತು. ಆದರೆ ಇಂದು ಭವ್ಯವಾದ ದೇವಾಲಯವೇ ನಿರ್ಮಾಣವಾಗಿದೆ. ದೇವಾಲಯದ ಗರ್ಭಗೃಹದ ಮೇಲೆ ಕಳಶವುಳ್ಳ ಸುಂದ ಗೋಪುರಗಳಿವೆ. ಗೋಪುರದಲ್ಲಿರುವ ಗಾರೆಗಚ್ಚಿನ ಗೂಡಿನಲ್ಲಿ ಮೂಷಿಕವಾಹನನಾದ ಗಣಪತಿಯ ಗಾರೆಯ ಪ್ರತಿಮೆ ಇದೆ. ದೇವಾಲಯದ ಪ್ರಾಕಾರವನ್ನು ವಿಸ್ತರಣೆ ಮಾಡಲಾಗಿದೆ. ಗುಡ್ಡದ ಮೇಲಿರುವ ದೇವಾಲಯಕ್ಕೆ ಆಬಾಲವೃದ್ಧರಾಗಿ ಎಲ್ಲರೂ ಹತ್ತಿ ಇಳಿಯಲು ಅನುಕೂಲವಾಗುವಂತೆ ವಿಶಾಲವಾದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.

ಮುಖ್ಯ ಪ್ರವೇಶ ದ್ವಾರದ ಎದುರು ಇರುವ ಗರ್ಭಗೃಹದಲ್ಲಿ  ಸುಂದರವಾದ ಎರಡೂ ಕಾಲು ಅಡಿಯ ಪಂಚಮುಖಿ ಗಣಪತಿಯ ವಿಗ್ರಹವಿದೆ. ಈ ಗಣಪತಿಗೆ ನಾನಾ ರೀತಿಯ ಅಲಂಕಾರ ಮಾಡುತ್ತಾರೆ. ಬೆಣ್ಣೆ ಅಲಂಕಾರ, ಹರಿಶಿನ ಅಲಂಕಾರ, ಧಾನ್ಯಗಳ ಅಲಂಕಾರದಲ್ಲಿ ಪಂಚ ಮುಖಿ ಗಣಪತಿಯನ್ನು ನೋಡಲು ನೂರು ಕಣ್ಣು ಸಾಲದು ಎಂದರೆ ಅತಿಶಯೋಕ್ತಿಯಲ್ಲ.  ಮಂಗಳವಾರಗಳಂದು ಇಲ್ಲಿ ಪುಟ್ಟ ದೋಸೆಯ ಪ್ರಸಾದ ನೀಡುವುದು ವಿಶೇಷ.

ಈ ದೇವಾಲಯದಲ್ಲಿ ಸಂಕಷ್ಟ ಹರ ಚತುರ್ಥಿಯ ದಿನ ವಿಶೇಷ ಪೂಜೆ ನಡೆಯುತ್ತದೆ. ದಕ್ಷಿಣ ಬೆಂಗಳೂರಿನಲ್ಲಿ ಸಂಕಷ್ಟ ಹರ ಚತುರ್ಥಿ ಖ್ಯಾತಿ ಪಡೆದಿದ್ದೇ ಪಂಚಮುಖಿ ವಿನಾಯಕನ ಗುಡಿಯಿಂದ ಎಂದರೂ ತಪ್ಪಿಲ್ಲ. ಹಿಂದೆ ಇಲ್ಲಿಗೆ ಮಲ್ಲೇಶ್ವರ, ರಾಜಾಜಿನಗರಗಳಿಂದಲೂ ಭಕ್ತರು ಬಂದು ಸಂಕಷ್ಟ ಹರ ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗ ಬಹುತೇಕ ಎಲ್ಲ ಗಣಪತಿಯ ದೇವಾಲಯಗಳಲ್ಲೂ ಸಂಕಷ್ಟ ಹರ ಚತುರ್ಥಿ ಹಾಗೂ ಪೌರ್ಣಿಮೆಯಂದು ಸತ್ಯನಾರಾಯಣ ಪೂಜೆ ನಡೆಯುತ್ತದೆ.

ಈ ದೇವಾಲಯದ ಪಕ್ಕದ ಗುಡ್ಡದ ಮೇಲೆ ಕುಮಾರಸ್ವಾಮಿ ಹಾಗೂ ಆದಿಶೇಷನ ದೇವಾಲಯವಿದೆ. ಈ ದೇವಾಲಯಕ್ಕೆ ಹೋಗಲು ಮೆಟ್ಟಿಲುಗಳು ಮತ್ತು ನಯವಾದ ಕೈಹಿಡಿ ಹಾಕಲಾಗಿದೆ. ರಾತ್ರಿಯ ವೇಳೆ ಬೆಟ್ಟದ ಮೇಲೆ ನಿಂತು ನೋಡಿದರೆ ದೀಪಾಲಂಕಾರದಲ್ಲಿ ಝಗಮಗಿಸುವ ಬೆಂಗಳೂರು ದರ್ಶನವಾಗುತ್ತದೆ.  ಚಾಮುಂಡಿ ಬೆಟ್ಟದ ಮೇಲೆ ನಿಂತು ಮೈಸೂರು ನೋಡುತ್ತಿದ್ದ ನೆನಪುಗಳು ಮರುಕಳಿಸುತ್ತವೆ.

ಈ ಗಣಪನಿಗೆ ಹರಕೆ ಹೊತ್ತರೆ ಅದು ನೆರವೇರುತ್ತದೆ  ಎಂಬ ನಂಬಿಕೆ ಇದೆ. ಪರೀಕ್ಷಾ ಸಮಯದಲ್ಲಂತೂ ವಿದ್ಯಾರ್ಥಿಗಳು ಇಲ್ಲಿ ಬಂದು ತಮ್ಮ ಪ್ರವೇಶಪತ್ರವನ್ನು ದೇವರ ಮುಂದಿಟ್ಟು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ.