ಮನೆ ರಾಜಕೀಯ ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯ ಟೋಲ್ ದರ ಹೆಚ್ಚಳಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯ ಟೋಲ್ ದರ ಹೆಚ್ಚಳಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಜನರ ಮೇಲೆ ಭಾರ ಹೊರೆಸುತ್ತಿವೆ ಎಂದು ಕಿಡಿ

0

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯ ಟೋಲ್ ದರವನ್ನು ಯಾರಿಗೂ ಗೊತ್ತಿಲ್ಲದಂತೆ ಶೇ.22ರಷ್ಟು ಏರಿಸಿರುವುದು ಅನ್ಯಾಯದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Our Whatsapp Group

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರ, ಟೋಲ್ ದರ ಏರಿಕೆ ಖಂಡನೀಯ. ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳೆರಡೂ ಸೇರಿ ಜನರ ಮೇಲೆ ಮತ್ತಷ್ಟು ಭಾರ ಹೊರೆಸಿವೆ ಎಂದು ಆರೋಪಿಸಿದ್ದಾರೆ ಹಾಗೂ ಹೆದ್ದಾರಿಯಲ್ಲಿ ಹಗಲು ದರೋಡೆ ಎಂದು ಹ್ಯಾಷ್ ಟ್ಯಾಗ್ ಮಾಡಿದ್ದಾರೆ.

ಏಕಾಏಕಿ ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ 30ರಿಂದ 200 ರೂ.ವರೆಗೆ ಟೋಲ್ ದರ ಹೆಚ್ಚಳ ಮಾಡಿರುವುದು ಸರಿಯಲ್ಲ, ಸಮರ್ಥನಿಯವೂ ಅಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಟೋಲ್ ದರ ಹೆಚ್ಚಿಸಿರುವುದು ಹೆದ್ದಾರಿಯಲ್ಲಿ ಹಗಲು ದರೋಡೆಯಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಕ್ಸ್ ಪ್ರೆಸ್ ಹೆದ್ದಾರಿಗೆ ಭೂಮಿ ಕೊಟ್ಟಿದ್ದು ಕರ್ನಾಟಕ ಸರ್ಕಾರ. ಇದ್ದ ನೆಲೆ ಕಳೆದುಕೊಂಡವರು ನಮ್ಮ ರೈತರು. ಈಗ ಶೇ.20 ರಷ್ಟು ಸುಲಿಗೆಗೆ ಒಳಗಾಗುತ್ತಿರುವವರು ಕೂಡ ಕನ್ನಡಿಗರೇ. ಕನ್ನಡಿಗರನ್ನು ಕೊಳ್ಳೆ ಹೊಡೆಯುವ ಧೂರ್ತ ನಡೆಗೆ ನಮ್ಮ ಧಿಕ್ಕಾರ ಎಂದಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನೇ ಅಧಿಕೃತ ವ್ಯವಹಾರ ಮಾಡಿಕೊಂಡಿವೆ. ಇನ್ನೂ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳೆಂಬ ತುಪ್ಪ ಸವರಿ, ಅದೇ ಗ್ಯಾರಂಟಿಗಳನ್ನು ಇಲಾಖೆಗಳ ಮೂಲಕವೇ ಜನರ ಮೇಲೆ ಮಣಭಾರ ಹೇರುತ್ತಿದೆ. ಒಂದು ಕೈಯ್ಯಲ್ಲಿ ಕೊಟ್ಟು ಎರಡು ಕೈಗಳಲ್ಲಿ ಬರೆ ಎಳೆಯುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಹೆದ್ದಾರಿ ಪ್ರಾಧಿಕಾರವು ಹೆಚ್ಚಳ ಮಾಡಿರುವ ಟೋಲ್ ದರವನ್ನು ಕೂಡಲೇ ಹಿಂಪಡೆಯಬೇಕು. ಹೆದ್ದಾರಿ ಪ್ರಾಧಿಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕಬೇಕು ಆಗ್ರಹಿಸಿದ್ದಾರೆ.

ಬೆಲೆಬರೆ ಬವಣೆಯಿಂದ ಬಸವಳಿದಿರುವ ಜನರು ರೊಚ್ಚಿಗೇಳುವ ಮುನ್ನ ಟೋಲ್ ದರ ಇಳಿಯಬೇಕು. ಪ್ರತಿಪಕ್ಷವಾಗಿದ್ದಾಗ ಬೆಲೆ ಏರಿಕೆ ವಿರುದ್ಧ, ಆಡಳಿತ ಪಕ್ಷವಾದ ಮೇಲೆ ಬೆಲೆ ಏರಿಕೆ ಪರ ಇದ್ದರೆ, ಜನರು ತಕ್ಕಪಾಠ ಕಲಿಸುತ್ತಾರೆ. ಊಸರವಳ್ಳಿ ವೈಖರಿ ಸಂಶಯಕ್ಕೆ ದಾರಿ. ಹಿಂದಿನ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರದ ದಾರಿಯಲ್ಲಿಯೇ ಈ ಸರಗಕಾರವೂ ನಡೆಯುತ್ತಿದೆಯಾ? ಎನ್ನುವ ಅನುಮಾನ ಆರಂಭದಲ್ಲಿಯೇ ಬರುತ್ತಿದೆ ಎಂದು ಅವರು ಹೇಳಿದ್ದಾರೆ.