ಮನೆ ಮನರಂಜನೆ ಗ್ರಾಫಿಕ್ಸ್​ ನಂಬಿಕೊಂಡು ಯುದ್ಧ ಮಾಡಿದ ರಾಮ-ರಾವಣ: ‘ಆದಿಪುರುಷ್’ ಚಿತ್ರ ವಿಮರ್ಶೆ

ಗ್ರಾಫಿಕ್ಸ್​ ನಂಬಿಕೊಂಡು ಯುದ್ಧ ಮಾಡಿದ ರಾಮ-ರಾವಣ: ‘ಆದಿಪುರುಷ್’ ಚಿತ್ರ ವಿಮರ್ಶೆ

0

ನಿರ್ದೇಶಕ ಓಂ ರಾವತ್​ ಅವರಿಗೆ ‘ತಾನಾಜಿ’ ಸಿನಿಮಾದಿಂದ ಭಾರಿ ಜನಪ್ರಿಯತೆ ಸಿಕ್ಕಿತ್ತು. ಬಿಗ್​ ಬಜೆಟ್​ನಲ್ಲಿ ಸಿನಿಮಾ ಮಾಡುವುದು ಹೇಗೆ ಎಂಬುದು ಅವರಿಗೆ ಕರಗತ ಆಗಿತ್ತು. ಅವರ ಮೇಲೆ ನಂಬಿಕೆ ಇಟ್ಟು ‘ಆದಿಪುರುಷ್​’ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ನೀಡಲಾಯಿತು. ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಅವರು ಈ ಚಿತ್ರಕ್ಕೆ ಹೀರೋ ಎಂದಾಗ ಸಹಜವಾಗಿಯೇ ನಿರೀಕ್ಷೆ ಜೋರಾಗಿತ್ತು. ಹಾಗಾದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪಲು ‘ಆದಿಪುರುಷ್​’ ಚಿತ್ರಕ್ಕೆ ಸಾಧ್ಯವಾಗಿದೆಯೇ? ರಾಮಾಯಣದ ಕಥೆಯನ್ನು ಪ್ರೇಕ್ಷಕರಿಗೆ ದಾಟಿಸಿರುವ ರೀತಿ ಹೇಗಿದೆ? ಪೌರಾಣಿಕ ಪಾತ್ರಗಳನ್ನು ಕಲಾವಿದರು ಹೇಗೆ ನಿಭಾಯಿಸಿದ್ದಾರೆ. ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಈ ವಿಮರ್ಶೆ ಓದಿ..

Join Our Whatsapp Group

ರಾಮಾಯಣದ ಕಥೆ ಇಟ್ಟುಕೊಂಡು ಸಿನಿಮಾ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಎಲ್ಲರಿಗೂ ಇದರ ಕಥೆ ಗೊತ್ತಿದೆ. ಗೊತ್ತಿರುವ ಕಥೆಯನ್ನೇ ಮತ್ತೆ ಹೇಳಲು ಹೊರಟಾಗ ಹೊಸತನದ ಅವಕಶ್ಯಕತೆ ಇರುತ್ತದೆ. ಇನ್ನು, ಈಗಾಗಲೇ ಬಂದಿರುವ ರಾಮಾಯಣ ಆಧಾರಿತ ಸೀರಿಯಲ್​ ಮತ್ತು ಸಿನಿಮಾಗಳ ಛಾಯೆಯನ್ನು ಮೀರಿ ಬೇರೆ ಏನನ್ನಾದರೂ ಕಟ್ಟಿಕೊಡಬೇಕಾಗುತ್ತದೆ. ಅದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ‘ಆದಿಪುರುಷ್​’ ಸಿನಿಮಾ ಮಾಡಲಾಗಿದೆ. ಆದರೆ ಕೇವಲ ಗ್ರಾಫಿಕ್ಸ್​ ಮತ್ತು ತಂತ್ರಜ್ಞಾನದಲ್ಲಿ ಮಾತ್ರವೇ ಇಲ್ಲಿ ಹೊಸತನವನ್ನು ಪ್ರಯತ್ನಿಸಲಾಗಿದೆ. ಪಾತ್ರಗಳ ಗೆಟಪ್​ ಗಳನ್ನು ಬದಲಾಯಿಸುವಲ್ಲಿ ಅಲ್ಪ ಸ್ವಲ್ಪ ಪ್ರಯೋಗ ಮಾಡಲಾಗಿದೆ. ಎಲ್ಲ ವರ್ಗದ ಪ್ರೇಕ್ಷಕರು ಇದನ್ನು ಇಷ್ಟಪಡುವುದು ಅನುಮಾನ. ಉಳಿದಂತೆ ಕಥೆಯನ್ನು ನಿರೂಪಿಸುವ ಶೈಲಿಯಲ್ಲಿ ಯಾವುದೇ ಹೊಸತನ ಕಾಣಿಸದು.

ಶ್ರೀರಾಮನು ವನವಾಸಕ್ಕೆ ಹೊರಡುವ ಸನ್ನಿವೇಶದಿಂದ ಶುರುವಾಗುವ ‘ಆದಿಪುರುಷ್​’ ಚಿತ್ರದ ಕಥೆ, ರಾವಣನ ಸಂಹಾರದಲ್ಲಿ ಅಂತ್ಯವಾಗುತ್ತದೆ. ಇದರ ನಡುವೆ ಬರುವ ಎಲ್ಲ ಪ್ರಮುಖ ಸನ್ನಿವೇಶಗಳನ್ನು ತೆರೆಗೆ ತರಲು ಪ್ರಯತ್ನಿಸಲಾಗಿದೆ. ಶೂರ್ಪನಕಿಯ ಮೂಗನ್ನು ಲಕ್ಷ್ಮಣ ಕೊಯ್ದಿದ್ದು, ಸೀತೆಯನ್ನು ರಾವಣ ಅಪಹರಿಸಿದ್ದು, ರಾಮನನ್ನು ಶಬರಿ ಭೇಟಿ ಆಗಿದ್ದು, ವಾಲಿ-ಸುಗ್ರೀವರ ಯುದ್ಧ, ರಾಮಸೇತು ನಿರ್ಮಾಣ, ಆಂಜನೇಯ ಲಂಕಾ ದಹನ ಮಾಡಿದ್ದು, ಯುದ್ಧದಲ್ಲಿ ಲಕ್ಷ್ಮಣ ಗಾಯಗೊಂಡಿದ್ದು, ಸಂಜೀವಿನಿಗಾಗಿ ಹನುಮಂತನು ಪರ್ವತವನ್ನೇ ಹೊತ್ತು ತಂದಿದ್ದು, ರಾಮ-ರಾವಣನ ನಡುವಿನ ಯುದ್ಧ ನಡೆದಿದ್ದು, ಸೀತೆಯನ್ನು ರಾಮ ಮರಳಿ ಪಡೆದಿದ್ದು.. ಸೇರಿದಂತೆ ಅನೇಕ ಸನ್ನಿವೇಶಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ಎಲ್ಲ ದೃಶ್ಯವನ್ನು ಮೇಲ್ಮಟ್ಟದಲ್ಲೇ ತೋರಿಸಲಾಗಿದೆಯೇ ಹೊರತು ಯಾವುದರಲ್ಲೂ ಆಳವಾದ ವಿವರಣೆಗಳು ದಕ್ಕುವುದಿಲ್ಲ. ಹೊಸ ಹೊಳವುಗಳಿಗೂ ಜಾಗವಿಲ್ಲ.

ರಾಮಾಯಣದ ಕಥೆಯ ಮೇಲಾಗಲಿ, ಅದರ ಆಶಯದ ಮೇಲಾಗಲಿ ನಿರ್ದೇಶಕ ಓಂ ರಾವತ್​ ಅವರು ಹೆಚ್ಚು ಗಮನ ಹರಿಸಿದಂತಿಲ್ಲ. ಅವರು ಸಂಪೂರ್ಣ ಒತ್ತು ನೀಡಿರುವುದು ಗ್ರಾಫಿಕ್ಸ್​ ಮೇಲೆ! ವಿಎಫ್​ ಎಕ್ಸ್​ ಬಲನ್ನೇ ನಂಬಿಕೊಂಡು ಅವರು ಸಿನಿಮಾ ಮಾಡಿದ್ದಾರೆ. ರಾವಣನ ಸಾಮ್ರಾಜ್ಯವನ್ನು ತಮ್ಮದೇ ರೀತಿಯಲ್ಲಿ ಚಿತ್ರಿಸುವ ಪ್ರಯತ್ನವನ್ನು ಓಂ ರಾವತ್​ ಮಾಡಿದ್ದಾರೆ. ಅದಕ್ಕಾಗಿ ಅವರು ಬೃಹತ್​ ಸೆಟ್​ ಗಳ ಮೊರೆ ಹೋಗಿದ್ದಾರೆ. ಲಂಕೆಯ ಮೇಲೆ ವಾನರ ಸೇನೆಯ ಜೊತೆ ರಾಮ ಯುದ್ಧ ಮಾಡಿದ ಸನ್ನಿವೇಶವನ್ನು ತೆರೆಗೆ ತರಲು ಗ್ರಾಫಿಕ್ಸ್​ ಅಲ್ಲದೇ ಬೇರೆ ಯಾವುದರಿಂದಲೂ ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಅವರು ಬಂದಂತಿದೆ. ರಣರಂಗದ ಪ್ರದೇಶ, ಅಲ್ಲಿನ ಬೆಳಕು, ರಾವಣನ ಕೋಟೆ ಇತ್ಯಾದಿ ಲೊಕೇಷನ್ ​ಗಳನ್ನು ನೋಡಿದರೆ ಅಕ್ಷರಶಃ ಯಾವುದೋ ವಿಡಿಯೋ ಗೇಮ್​ ನೋಡಿದಂತೆ ಭಾಸವಾಗುತ್ತದೆ. ರಾವಣನ ಸೇನೆಯಲ್ಲಿನ ರಾಕ್ಷಸರಂತೂ ಬೇರೆ ಗ್ರಹದ ಪ್ರಾಣಿಗಳ ರೀತಿ ಕಾಣಿಸಿಕೊಳ್ಳುತ್ತಾರೆ. ನಿರ್ದೇಶಕರ ಈ ಕಲ್ಪನೆ ಸಂಪೂರ್ಣ ಭಿನ್ನವೇ ಆಗಿದೆ.

ಸಾಕಷ್ಟು ಸನ್ನಿವೇಶಗಳನ್ನು ಒಂದೇ ಸಿನಿಮಾದಲ್ಲಿ ಹೇಳಲು ಹೊರಟಿರುವುದರಿಂದ ಯಾವುದಕ್ಕೂ ಹೆಚ್ಚಿನ ಮಹತ್ವ ನೀಡಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ. ರಾಮನನ್ನು ನೋಡುವುದೋ? ಆಂಜನೇಯಯನ್ನು ನೋಡುವುದೋ? ರಾವಣನ ಆರ್ಭಟವನ್ನು ನೋಡುವುದೋ? ಸೀತೆಯ ಕಷ್ಟದ ಪರಿಸ್ಥಿತಿಗೆ ಮರುಗುವುದೋ? ವಾಲಿ-ಸುಗ್ರೀವರ ಯುದ್ಧದ ಕಡೆ ಗಮನ ಕೊಡುವುದೋ? ಪ್ರೇಕ್ಷಕನಿಗೆ ಗೊಂದಲ ಖಚಿತ. ಅದೂ ಸಾಲದೆಂಬಂತೆ ರಾಮ-ಸೀತೆಯ ನಡುವಿನ ಒಂದು ಕಾಲ್ಪನಿಕ ಹಾಡಿಗೂ ಅವರು ಜಾಗ ನೀಡಿದ್ದಾರೆ! ಎಲ್ಲವೂ ಇದ್ದರೂ ಯಾವುದೂ ಪೂರ್ಣ ಎನಿಸದಂತಹ ಸ್ಥಿತಿ ‘ಆದಿಪುರುಷ್​’ ಚಿತ್ರದ್ದಾಗಿದೆ.

ರಾಮನ ಪಾತ್ರದಲ್ಲಿ ಪ್ರಭಾಸ್​ ನಟಿಸಿದ್ದಾರೆ. ಅವರಿಂದ ಗಮನ ಸೆಳೆಯುವಂತಹ ಅಭಿನಯ ಸಾಧ್ಯವಾಗಿಲ್ಲ. ಸಿನಿಮಾದ ಶೀರ್ಷಿಕೆ ‘ಆದಿಪುರುಷ್​’ ಎಂದಿದ್ದರೂ ಕೂಡ ರಾಮನ ಪಾತ್ರವನ್ನು ಸಮರ್ಥವಾಗಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದಂತಿಲ್ಲ. ಸೀತೆ ಪಾತ್ರದಲ್ಲಿರುವ ಕೃತಿ ಸನೋನ್​ ಅವರಿಗೆ ಅಷ್ಟೋ ಇಷ್ಟೋ ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ ಅಷ್ಟೇ. ಆಂಜನೇಯನ ಪಾತ್ರ ಮಾಡಿರುವ ದೇವದತ್ತ ನಾಗೆ ಅವರು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುತ್ತಾರೆ. ಸೈಫ್​ ಅಲಿ ಖಾನ್​ ಅವರು ಬೇರೆಯದೇ ಮ್ಯಾನರಿಸಂ ಮೂಲಕ ರಾವಣನಾಗಿ ಆರ್ಭಟಿಸುತ್ತಾರೆ. ರಾವಣನ ಹತ್ತು ತಲೆಯ ವಿನ್ಯಾಸ ಎತ್ತೆತ್ತಲೋ ಸಾಗಿದೆ! ‘ರಾಮ್​.. ಸಿಯಾ ರಾಮ್​..’ ಹಾಗೂ ‘ಜೈಶ್ರೀರಾಮ್​..’ ಹಾಡು ಗುಂಗು ಹಿಡಿಸುತ್ತದೆ.