‘ಮತ್ಸ್ಯಾ’ ಎಂದರೆ ಸಂಸ್ಕೃತದಲ್ಲಿ ಮೀನು. ಮೀನಿನಂತೆ ಮನುಷ್ಯನು ಸಹ ತನ್ನ ಶರೀರದ ಅಂಗಗಳ ಮೇಲೆ ಹಿಡಿತವಿಟ್ಟುಕೊಂಡು, ಅವುಗಳ ಉಪಯೋಗವನ್ನು ಪಡೆಯಬೇಕು. ಇಲ್ಲದಿದ್ದಲ್ಲಿ ಕಲೆಮೊಮ್ಮೆ ಅಪಾಯ ಸಂಭವಿಸುವ ಸಂದರ್ಭಗಳೂ ಉಂಟು.
ಮಾಡುವ ಕ್ರಮ
ಪ್ರಾರಂಭದಲ್ಲಿ ಪದ್ಮಾಸನದಲ್ಲಿ ಕುಳಿತುಕೊಳ‍್ಳಬೇಕು. ಅನಂತರ ಬಲಗೈ ಸಹಾಯದಿಂದ ಬಲಗಡೆಯಿಂದ ಅಂಗಾತ ಮಲಗಬೇಕು. ಈ ಸ್ಥಿತಿಯಲ್ಲಿ ತಲೆ, ಬೆನ್ನು ಮತ್ತು ತೊಡೆ ಹಾಗೂ ಮಂಡಿ ನೆಲವನ್ನು ಸ್ಪರ್ಶಿಸಿರಬೇಕು. ನಿಧನವಾಗಿ ಸೊಂಟ, ಬೆನ್ನು ಮತ್ತು ಕತ್ತನ್ನು ಸ್ವಲ್ಪ ಮೇಲಕ್ಕೆತ್ತಿ ತಲೆಯನ್ನು ಚಿತ್ರದಲ್ಲಿ ತೋರಿಸುವಂತೆ ಹಿಂದಕ್ಕೆ ಬಗ್ಗಿಸಬೇಕು. ಒಮ್ಮೆ ಈ ಸ್ಥಿತಿಯಲ್ಲಿ ಸ್ಥಿರವಾಗಿರುವುದು ಅಭ್ಯಾಸವಾದ ನಂತರ ಎರಡೂ ಕೈಗಳಿಂದ ಅಂದರೆ ಎಡಗೈಯಿಂದ ಬಲಗಾಲಿನ ಹೆಬ್ಬೆರಳನ್ನು, ಬಲಗೈಯಿಂದ ಎಡಗಾಲಿನ ಹೆಬ್ಬೆರಳನ್ನು ಭದ್ರವಾಗಿ ಹಿಡಿದುಕೊಳ್ಳಬೇಕು.
ಕ್ರಮೇಣ ಕಾಲುಗಳನ್ನು ಮೇಲಕ್ಕೆ ಎಳೆಯುತ್ತ ಮೊಣಕೈಗಳನ್ನು ಭೂಮಿಗೆ ತಗ್ಗಿಸಲು ಪ್ರಯತ್ನಿಸಬೇಕು. ಹೀಗೆ ಪ್ರಯತ್ನಿಸುವುದರಿಂದ ಬೆನ್ನು ಮತ್ತಷ್ಟು ಬಾಗಿ, ಕಮಾನಿನಂತಾಗುವುದು. ಪ್ರಾರಂಭದಲ್ಲಿ ಈ ಸ್ಥಿತಿಗೆ ಬರುವುದು ಕಷ್ಟವಾದರೂ, ಕ್ರಮೇಣ ಈ ಸ್ಥಿತಿ ಮುಟ್ಟ ಬೇಕು. ಬೆನ್ನಿನ ಕಮಾನು ಹೆಚ್ಚಿದಷ್ಟೂ ಶರೀರದಲ್ಲಿ ಲವಲವಿಕೆ ಹೆಚ್ಚಾಗುವುದು. ಈ ಸ್ಥಿತಿಯಲ್ಲಿ 1ರಿಂದ 2 ನಿಮಿಷಗಳವರೆಗೆ ಇದ್ದು ನಂತರ ಕಾಳುಗಳನ್ನು ಬದಲಾಯಿಸಬಹುದು. ಯಾವುದೇ ಆಸನ ಮಾಡಲು ಪ್ರಾರಂಭಿಸಿದರೂ ಆಸನ ಹಾಕಲು ತೆಗೆದುಕೊಂಡ ಅವಧಿಯಷ್ಟೇ ಸಮಯವನ್ನು ಆಸನವನ್ನು ಬಿಚ್ಚಲು ಸಹ ತೆಗೆದುಕೊಳ್ಳಬೇಕು. ಇದನ್ನು ನೆನಪಿನಲ್ಲಿಡುವುದು ಅವಶ್ಯಕ.
ಲಾಭಗಳು
ಮತ್ಸ್ಯಾಸನ ಅಭ್ಯಾಸದಿಂದ ಕುತ್ತಿಗೆ, ಹೊಟ್ಟೆ ಮತ್ತು ಅನೇಕ ವಿಕಾರಗಳು ದೂರವಾಗುವುವು. ಕಣ್ಣಿನ ಕಾಂತಿ ಹೆಚ್ಚುವುದು. ಕೆಲವರಿಗೆ ಹಸಿವಿ ಹೆಚ್ಚು ಸಾಧ್ಯತೆಗಳುಂಟು. ಕತ್ತಿನ ಭಾಗಕ್ಕೆ ಆ ಆಸನದಿಂದ ಹೆಚ್ಚು ಲಾಭ ದೊರೆಯುವುದು. ಕಂಠ ಮಣಿಯು ಸಾಕಷ್ಟು ಚೈತನ್ಯ ಪಡೆಯಲು ಮತ್ಸ್ಯಾಸನ ಉತ್ತಮ ಮಾಧ್ಯಮ. ಮತ್ಸ್ಯಾಸನ ಅಭ್ಯಾಸವು ಮೂಳೆರೋಗಿಗಳಿಗೆ ಉಪಕಾರಿ.