ಮನೆ ಮನರಂಜನೆ ‘ಬೇರ’ ಚಿತ್ರ ವಿಮರ್ಶೆ

‘ಬೇರ’ ಚಿತ್ರ ವಿಮರ್ಶೆ

0

ಸಿನಿಮಾ: ಬೇರ (ಕನ್ನಡ)

ನಿರ್ದೇಶನ: ವಿನು ಬಳಂಜ

ನಿರ್ಮಾಪಕ: ದಿವಾಕರ ದಾಸ ನೇರ್ಲಾಜೆ

ತಾರಾಗಣ: ಯಶ್ ಶೆಟ್ಟಿ, ರಾಕೇಶ್ ಮಯ್ಯ, ಅಶ್ವಿನ್ ಹಾಸನ್, ಸುಮನ್, ಮಂಜುನಾಥ ಹೆಗಡೆ ಮತ್ತಿತರರು.

Join Our Whatsapp Group

ಕೋಮು ಗಲಭೆಗಳಿಂದಾಗಿ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡದ ಕಲ್ಲಡ್ಕ ಪ್ರದೇಶ ಹಾಗೂ ಅಲ್ಲಿರುವ ಒಂದು ವಸ್ತುಸಂಗ್ರಹಾಲಯವನ್ನು ವೇದಿಕೆಯಾಗಿಸಿಕೊಂಡು, ಹಿಂದೂ–ಮುಸ್ಲಿಂ ಸಹಬಾಳ್ವೆಯ ಆಶಯದ ಎಳೆಗೆ ಕಥೆಯ ರೂಪ ನೀಡಿ ‘ಬೇರ’ವನ್ನು ‘ಸುದೀರ್ಘ’ವಾಗಿ ಹೆಣೆದಿದ್ದಾರೆ ನಿರ್ದೇಶಕ ವಿನು ಬಳಂಜ.

 ‘ಬೇರ’ ಎಂದರೆ ತುಳು ಭಾಷೆಯಲ್ಲಿ ವ್ಯಾಪಾರ ಎಂದರ್ಥ. ‘ಮರ್ಚೆಂಟ್ ಆಫ್ ದಿ ಡೆತ್’ ಎಂಬ ಶೀರ್ಷಿಕೆಯ ಅಡಿಬರಹದಲ್ಲೇ ಚಿತ್ರದ ಸಾರಾಂಶವನ್ನು ಬಳಂಜ ಹೇಳಿದ್ದಾರೆ. ಹೇಗೆ ಕೆಲ ಅಜೆಂಡಾಗಳಿಗೆ, ರಾಜಕೀಯ ಪಿತೂರಿ ಹಾಗೂ ಸ್ಲೀಪರ್ ಸೆಲ್ ಎಂಬ ದುಷ್ಕೃತ್ಯಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ ಎನ್ನುವ ವಾಸ್ತವವನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ. ಕಲ್ಲಡ್ಕದಲ್ಲಿರುವ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಸೇರಿದ ಮ್ಯೂಸಿಯಂನಲ್ಲಿ ಇರುವ ದೇವಸ್ಥಾನದೊಳಗಿನ ಕಂಬಗಳ ಮೇಲೆ ಇಡೀ ಕಥೆ ಹೆಣೆಯಲಾಗಿದೆ.

ಗೇಟ್ ಎಂಬ ಪ್ರದೇಶ; ಅಲ್ಲಿನ ನಾಯಕತ್ವಕ್ಕೆ ಹಿಂದೂ ಮುಖಂಡ ಕೇಶವಾನಂದ ಹಾಗೂ ಮುಸ್ಲಿಂ ಮುಖಂಡ ಅಸಾದುಲ್ಲ ಇಸ್ಮಾಯಿಲ್ ನಡುವೆ ಒಳಜಗಳ. ಇದರ ಹಿಂದೆ ಕಾಣದ ಕೈಗಳ ಪಿತೂರಿ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ನಡೆಯುವ ಕೊಲೆಯೊಂದು, ಕೋಮುಗಲಭೆಗೆ ಕಾರಣವಾಗುತ್ತದೆ. ಹೀಗಿದ್ದರೂ ಅಲ್ಲೊಂದು ಸಹಬಾಳ್ವೆಯ ಜೋಡಿಯಿದೆ. ಅದುವೇ ವಿಷ್ಣು–ಸಲೀಂ ಜೋಡಿ. ಸಲೀಂ(ಯಶ್ ಶೆಟ್ಟಿ) ವಸ್ತುಸಂಗ್ರಹಾಲಯದ ಮಾಲೀಕ. ವಿಷ್ಣು(ರಾಕೇಶ್ ಮಯ್ಯ) ಅದೇ ಊರಿನ ಅರ್ಚಕ ಗೋಪಾಲಕೃಷ್ಣ ಭಟ್(ಮಂಜುನಾಥ ಹೆಗಡೆ) ಪುತ್ರ. ಇಬ್ಬರೂ ಸ್ನೇಹಿತರು ಹಾಗೂ ವಸ್ತುಸಂಗ್ರಹಾಲಯ ಹಾಗೂ ಗೋಶಾಲೆಯನ್ನು ಜೊತೆಗೂಡಿ ನಡೆಸುತ್ತಿರುವವರು. ಇಂತಹ ಸ್ನೇಹಕ್ಕೆ ವಸ್ತುಸಂಗ್ರಹಾಲಯದಲ್ಲಿರುವ ದೇವರ ಕಲ್ಲುಗಳೇ ಅಡ್ಡಿಯಾಗುತ್ತವೆ. ಇಬ್ಬರಲ್ಲೊಬ್ಬರು ಕೊಲೆಯಾಗುವ ಮುನ್ಸೂಚನೆ ಸಿಗುತ್ತಿದ್ದಂತೇ ಕಥೆ ‘ನಿಧಾನ’ವಾಗಿ ಮುಂದಡಿ ಇಡುತ್ತದೆ.

ಸಿನಿಮಾದ ಆರಂಭಿಕ ಸ್ಕ್ರೀನ್ಪ್ಲೇ ಗೊಂದಲಮಯವಾಗಿದ್ದು, ಕಥೆಯನ್ನು ಅರ್ಥ ಮಾಡಿಕೊಳ್ಳಲು; ಮನಸ್ಸಿನಲ್ಲಿ ಹಿಡಿದಿಟ್ಟುಕೊಳ್ಳಲು ಪ್ರೇಕ್ಷಕ ಹೆಣಗಾಡುತ್ತಾನೆ. ವಿಷ್ಣು ಹಾಗೂ ಸಲೀಂ ಪಾತ್ರಗಳ ಪ್ರವೇಶದ ಬಳಿಕವಷ್ಟೇ ಇಡೀ ಕಥೆಗೆ ಒಂದು ರೂಪ ಸಿಗುತ್ತದೆ. ಮಧ್ಯಂತರದ ವೇಳೆಗೆ ಕಥೆಯಲ್ಲಿ ಕುತೂಹಲ ಹುಟ್ಟಿಸುವ ತಿರುವು ಇದ್ದರೂ, ಅದನ್ನು ಸಮರ್ಥವಾಗಿ ಮುಂದುವರಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಚಿತ್ರದ ಹೆಚ್ಚಿನ ಭಾಗ ಉಪದೇಶವೇ ಆದಂತಿದೆ. ಸಾಕು…ಎನ್ನುವಷ್ಟು ಸಂಭಾಷಣೆ ಹರಿದಿದೆ. ವಸ್ತುಸಂಗ್ರಹಾಲಯವನ್ನು ತೋರಿಸುವ ಸಾಕ್ಷ್ಯಚಿತ್ರದಂತೆ ಕೆಲವೆಡೆ ಚಿತ್ರ ಭಾಸವಾಗುತ್ತದೆ. ಕೆಲ ಧಾರಾವಾಹಿಗಳಲ್ಲಿ ಇರುವಂತೆ ಅಗತ್ಯವಿಲ್ಲದ ಪಾತ್ರ, ಸನ್ನಿವೇಷ, ಚಿತ್ರಕಥೆಯ ತುರುಕುವಿಕೆ ಇಲ್ಲಿ ಕಾಣಬಹುದು.

ಇದು ಇಡೀ ಸಿನಿಮಾದ ಅವಧಿಯನ್ನು 142 ನಿಮಿಷಕ್ಕೆ ಹಿಗ್ಗಿಸಿದೆ. ಇದು ಕಥೆಯ ರೋಚಕತೆ ಹಾಗೂ ಸಿನಿಮಾದ ಮೂಲ ಉದ್ದೇಶವನ್ನೂ ಸಂಪೂರ್ಣ ದಾರಿತಪ್ಪಿಸಿದೆ. ಕ್ಲೈಮ್ಯಾಕ್ಸ್ ನಲ್ಲಿ ಧರ್ಮದ ಹೆಸರಿನಲ್ಲಿ ಪಿತೂರಿ ನಡೆಸುವ ಕಿಡಿಗೇಡಿಗಳಿಗೆ ಪಾಠ ಹೇಳುವ ಕೆಲಸವಾಗಿದೆ.

ನಟನೆಯಲ್ಲಿ ಯಶ್ ಶೆಟ್ಟಿ ಪೂರ್ಣ ಅಂಕ ಗಳಿಸುತ್ತಾರೆ. ಮಾತಿನ ಶೈಲಿಯೂ ಸ್ಥಳೀಯವಾಗಿ ಹೊಂದಾಣಿಕೆಯಾಗಿದೆ. ಸಿನಿಮಾದುದ್ದಕ್ಕೂ ‘ಮೌನವ್ರತ’ಧಾರಿಯಾಗಿ ಪೊಲೀಸ್ ಅಧಿಕಾರಿ ವಿವೇಕ್ ಪಾತ್ರಕ್ಕೆ ಬಣ್ಣಹಚ್ಚಿದ ಅಶ್ವಿನ್ ಹಾಸನ್ ತಮ್ಮ ಹಾವಭಾವದಲ್ಲೇ ಗಮನಸೆಳೆಯುತ್ತಾರೆ. ದೀಪಕ್ ರೈ ಪಾಣಾಜೆ, ಮಂಜುನಾಥ ಹೆಗಡೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸ್ವರಾಜ್ ಶೆಟ್ಟಿ ಹಾಗೂ ಹರ್ಷಿಕಾ ಪೂಣಚ್ಚ ಅವರ ಪಾತ್ರಗಳ ಬರವಣಿಗೆಯೇ ಬಹಳ ಕೃತಕವಾಗಿದೆ. ಉಳಿದಂತೆ ಯಾವ ಪಾತ್ರಗಳೂ ಗಟ್ಟಿಯಾಗಿಲ್ಲ. ಛಾಯಾಚಿತ್ರಗ್ರಹಣ, ಹಿನ್ನೆಲೆ ಸಂಗೀತ ನೀರಸವಾಗಿದೆ.