ಮನೆ ಸುದ್ದಿ ಜಾಲ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಕ್ರಮ ವಹಿಸಿ: ಡಾ.ಅಂಜು ಬಾಲಾ

ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಕ್ರಮ ವಹಿಸಿ: ಡಾ.ಅಂಜು ಬಾಲಾ

0

ಮೈಸೂರು: ಪರಿಶಿಷ್ಟ ಜಾತಿ ಜನರ ಶ್ರೇಯೋಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಯೋಜನೆಗಳು ಪರಿಶಿಷ್ಟ ಜಾತಿಯವರಿಗೆ ತಲುಪುವಂತಾಗಬೇಕು ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಅವರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಸದಸ್ಯರಾದ ಡಾ.ಅಂಜು ಬಾಲಾ ತಿಳಿಸಿದರು.

Join Our Whatsapp Group

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಜನ್ ಧನ್ ಯೋಜನೆಯಡಿ ಹಲವು ಉಪಯೋಗಗಳುಂಟಾಗುತ್ತಿದ್ದು, ಯೋಜನೆಯಿಂದ ವಂಚಿತರಾದವರನ್ನು ಗುರುತಿಸಿ ಅವರಿಗೆ ಈ ಯೋಜನೆಗಳ ಫಲ ದೊರಕುವಂತೆ ಅಧಿಕಾರಿಗಳಿಗೆ ತಿಳಿಸಿದರು.

ವಿದ್ಯಾಭ್ಯಾಸ ಸಾಲದ ಬಗ್ಗೆ ಆದ್ಯತೆ ವಹಿಸಿ ಪ್ರತಿಯೊಂದು ಲೋನ್ ಗಳು ಹೇಗೆ ತಿರಸ್ಕಾರ ಆಗುತ್ತಿದೆ ಮತ್ತೆ ಏಕೆ ಎಂಬುದನ್ನು ಒಂದು ವರದಿ ಸಲ್ಲಿಸಿ, ಸಭೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪ್ರತಿಯೊಂದು ಸಭೆಯಲ್ಲೂ ಸರ್ಕಾರದ ಯೋಜನೆಗಳನ್ನು ಜಾರಿಗೆ ತಂದಿರುವ ಬಗ್ಗೆ ಮಾಹಿತಿ ಪಡೆಯಬೇಕಾಗುತ್ತದೆ ಎಂದರು.

ಆಯೋಗವು ಮಾಹಿತಿ ಬೇಕಾದಾಗ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುತ್ತದೆ ಪತ್ರಕ್ಕೆ 15 ದಿನದ ಒಳಗೆ ಉತ್ತರ ನೀಡಬೇಕು ಇಲ್ಲವಾದರೆ ಇದರ ಪರಿಣಾಮ ಬೇರೆ ರೀತಿ ಇರುತ್ತದೆ ಎಂದು ಎಚ್ಚರಿಕೆ ನೀಡಿದರು.

ಆಯೋಗಕ್ಕೆ ಯಾರಿಗೂ ತೊಂದರೆ ನೀಡುವ ಉದ್ದೇಶವಿಲ್ಲ, ಆದರೆ ಅಧಿಕಾರಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಹಾಗೂ ನ್ಯಾಯಸಮ್ಮತವಾಗಿ ಮಾಡಬೇಕು ಎಂದು ತಿಳಿಸಿದರು.

ಪೊಲೀಸ್ ಇಲಾಖೆಯಿಂದ ಕಳೆದ ಬಾರಿ ಪ್ರಗತಿಪರಿಶೀಲನಾ ಸಭೆಯಲ್ಲಿ ನೋಡಿದಂತೆ ಈ ಬಾರಿ ಅನೇಕ ಬದಲಾವಣೆಗಳಾಗಿದ್ದು, ಇಲಾಖೆಯು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಶ್ಲಾಘಿಸಿದರು.

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಜನನಿ ಸುರಕ್ಷಾ ಯೋಜನೆಯಡಿ 2020-21 ನೇ ಸಾಲಿನಲ್ಲಿ 21,076 ಫಲಾನುಭವಿಗಳಿದ್ದು ಶೇ.25 ರಷ್ಟು ಫಲಾನುಭವಿಗಳು ಪ.ಜಾತಿಯವರಿಗಿದ್ದಾರೆ. 2022-23 ನೇ ಸಾಲಿಗೆ 9,131 ಫಲಾನುಭವಿಗಳಿದ್ದು ಅದರಲ್ಲಿ 1,944 ಜನ ಪರಿಶಿಷ್ಟ ಜಾತಿಯವರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಪ್ರಸಾದ್ ಅವರು ತಿಳಿಸಿದರು.

ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಮತ್ತೊಂದು ಸಭೆ ನಡೆಯಲಿದ್ದು ಅದಕ್ಕೆ ಆಯೋಗದ ಅಧ್ಯಕ್ಷರು ಭಾಗಿಯಾಗಲಿದ್ದಾರೆ. ಆ ಸಭೆಯಲ್ಲಿ ಪ್ರತಿಯೊಬ್ಬರನ್ನು ಪ್ರಶ್ನಿಸಲಾಗುವುದು ಎಲ್ಲದಕ್ಕೂ ತಯಾರಿ ನಡೆಸಿಕೊಳ್ಳಿ ಇಂದಿನ ಸಭೆ ಮಾದರಿಯಲ್ಲಿ ಸಭೆಯಾಗಿದ್ದು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ ಎಂದರು.

ಸಭೆಯಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ‌ ಅವರು ಶಾಲೆಗಳಲ್ಲಿ ದಾಖಲಾತಿ ಬಗ್ಗೆ ಅಗತ್ಯ ಕ್ರಮವಹಿಸಲಾಗಿದ್ದು ಕಡಿಮೆಯಾದರೆ ಅದರ ಬಗ್ಗೆ ವಿಶೇಷವಾಗಿ ಸಭೆ ನಡೆಸಿ ಏಕೆ ಕಡಿಮೆಯೋಗುತ್ತಿದೆ ಎನ್ನುವುದರ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಆದಿವಾಸಿಗಳ ಸಂಖ್ಯೆಯು ಹೆಚ್ಚಿದ್ದು ಅಲ್ಲಿ ಮಕ್ಕಳು ಶಾಲೆಗೆ ಏಕೆ ಬರುತ್ತಿಲ್ಲ ಎಂಬುದರ ಬಗ್ಗೆ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತಿದೆ. ಪ್ರತಿಷ್ಠಿತ ಶಾಲೆಗಳ‌ ಸ್ಕೀಮ್  ಗಳ ಅಡಿಯಲ್ಲಿ ಶಾಲೆಗಳನ್ನು ಗುರುತಿಸಿ ಅಲ್ಲಿಗೆ ಎಸ್ಸಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಸಲು ಅಗತ್ಯ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲೆಯಲ್ಲಿ ಎಷ್ಟು ಮನೆಗಳು ಮಂಜೂರಾಗಿದೆ ಎಂಬುವುದರ ಬಗ್ಗೆ ಮಾಹಿತಿ ಪಡೆದುಕೊಂಡು ಆಯೋಗಕ್ಕೆ ಜಿಲ್ಲಾಧಿಕಾರಿ ಸಮಗ್ರವಾಗಿ ಮಾಹಿತಿ ನೀಡಿದರು. ಅದರಂತೆ 2021 ಮತ್ತು 22ನೇ ಸಾಲಿನಲ್ಲಿ 409 ಮನೆಗಳಿಗೆ ಗುರಿ ನೀಡಿದ್ದು ಅದರಲ್ಲಿ  ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ 297 ಮನೆಗಳು ಹಂಚಿಕೆಯಾಗಿದೆ.

ಮನೆಗಳ ನಿರ್ಮಾಣಕ್ಕೆ ರಾಜೀವ್ ಗಾಂಧಿ ಹೌಸ್ ಕಾರ್ಪೊರೇಷನ್ ಕಡೆಯಿಂದ ಸಹಾಯಧನ ನೀಡಲಾಗುತ್ತಿದ್ದು ಕೇಂದ್ರ ಸರ್ಕಾರದಿಂದ 1.50 ಲಕ್ಷ ರೂ ಹಾಗೂ ರಾಜ್ಯ ಸರ್ಕಾರದಿಂದ ಅಂಬೇಡ್ಕರ್ ವಸತಿ ಯೋಜನೆಯಡಿ 3.50 ಲಕ್ಷ ರು ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಸಭೆಯಲ್ಲಿ ಮುದ್ರಾ ಲೋನ್ ಸ್ಟಾರ್ಟರ್ ಹಾಗೂ ಎಜುಕೇಶನ್ ಲೋನ್ಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಅದರಂತೆ , ಏಕೆ ರಿಜೆಕ್ಟ್ ಆಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದ ಕಾರಣ ಆಯೋಗವು ಸಂಬಂಧಪಟ್ಟ ಲೀಡ್ ಬ್ಯಾಂಕಿಗೆ ಸಮಗ್ರವಾಗಿ15 ದಿನದೊಳಗೆ ಮಾಹಿತಿ ನೀಡುವಂತೆ  ಆದೇಶ ನೀಡಿದರು.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್,  ನಿರ್ದೇಶಕ ಸುನೀಲ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್, ನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ, ಡಿಸಿಪಿ ಮುತ್ತುರಾಜ್, ಎ.ಎಸ್.ಪಿ ನಂದಿನಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.