ಮನೆ ರಾಜಕೀಯ ಶ್ರೀರಾಮನಿಗೆ ಅಪಚಾರ ಮಾಡಬೇಡಿ: ಹೆಚ್.ಡಿ.ಕುಮಾರಸ್ವಾಮಿ

ಶ್ರೀರಾಮನಿಗೆ ಅಪಚಾರ ಮಾಡಬೇಡಿ: ಹೆಚ್.ಡಿ.ಕುಮಾರಸ್ವಾಮಿ

0

ಬೆಂಗಳೂರು(Bengaluru): ಶ್ರೀರಾಮನ (Shriram)ಹೆಸರು ಇಟ್ಟುಕೊಂಡು ಶಾಂತಿ ಹಾಳು ಮಾಡುವ ಕೆಲಸ ಮಾಡದಿರಿ, ಅಂಥ ಕೃತ್ಯಗಳನ್ನು ಎಸಗಲು ರಾವಣನ ಹೆಸರಿಟ್ಟುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ(H D Kumarswamy) ಅವರು ಕೆಲ ಸಂಘಟನೆಗಳ ಮೇಲೆ ವಾಗ್ದಾಳಿ ನಡೆಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಕೆಲವರು ರಾಮಸೇನೆ, ಮತ್ಯಾವುದೋ ಸೇನೆ ಅಂತ ಹೆಸರು ಇಟ್ಟಕೊಂಡಿದ್ದಾರೆ. ರಾಮನ ಹೆಸರಿಟ್ಟುಕೊಂಡು ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ. ಅಂಥವರು ರಾವಣಸೇನೆ ಎಂದು ಹೆಸರಿಟ್ಟುಕೊಂಡರೆ ಉತ್ತಮ. ಇವರು ರಾಮನ ಹೆಸರಿಗೆ ಯಾಕೆ ಕಳಂಕ ತರುತ್ತಿದ್ದಾರೆ. ದಯಮಾಡಿ ಮರ್ಯಾದಾ ಪುರುಷೋತ್ತಮನ ಹೆಸರಿಗೆ ಕಳಂಕ ತರಬೇಡಿ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಪದೆ ಪದೇ ಬಿಜೆಪಿ ಸಹ ಸಂಸ್ಥೆಗಳು ಈ ರೀತಿ ಸಾಮರಸ್ಯ ಹಾಳು ಮಾಡುತ್ತಿದೆ. ನಿಜಕ್ಕೂ ನಮ್ಮ ಸಂಸ್ಕೃತಿಗೆ ಅಗೌರವ ತೋರಿಸುತ್ತಿದ್ದಾರೆ. ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ನಂತರವೂ ಈ ವಿಚಾರವನ್ನು ಲಘುವಾಗಿ ಪರಿಗಣಿಸಲಾಗ್ತಿದೆ. ದಿನಕ್ಕೆ ಒಂದು ವಿಚಾರ ಪ್ರಾರಂಭ ಮಾಡುತ್ತಿದ್ದಾರೆ. ನಿಜವಾಗಿಯೂ ಅವರು ರಾಮಭಕ್ತರೇ ಆಗಿದ್ದರೆ, ದಿನನಿತ್ಯದಲ್ಲಿ ನಮ್ಮ ಪರಂಪರಾಗತ ಸಂಪ್ರದಾಯ ಆಚರಣೆಗೆ ಒತ್ತು ಕೊಟ್ಟರೆ ಹಿಂದು ಧರ್ಮ‌ ಕಾಪಾಡಿದಂತೆ ಆಗುತ್ತದೆ ಎಂದು ಅವರು ಹೇಳಿದರು.

ಜನರ ಬದುಕಿಗೆ ಬೆಂಕಿ ಇಡುವ ಕೆಲಸ ಮಾಡುತ್ತಿದೆ ಸರಕಾರ. ಜನರ ಬವಣೆ ಕಡೆಗಣಿಸಿ ಚುನಾವಣೆ ಮಾಡುತ್ತಿರಾ ಮುಖ್ಯಮಂತ್ರಿಗಳೇ? ನೀವು ಮೌನಿ ಬಾಬಾ ಆಗಿದ್ದೀರ, ನಿಮ್ಮಿಂದ ಏನು ಮಾಡೋಕೆ ಆಗುವುದಿಲ್ಲ. ಈ ರಾಜ್ಯದಲ್ಲಿ ಸಿಎಂ ಇದಾರಾ ಅನ್ನುವುದೇ ಅನುಮಾನ. ಸರಕಾರ ಇದೆಯಾ ಎನ್ನುವ ಸಂಶಯ ಬಂದಿದೆ. ಈ ಸರಕಾರವನ್ನು ಯಾರೋ ನಡೆಸುತ್ತಿದ್ದಾರೆ ಎಂದು ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಬೆಳೆವಣಿಗೆಗಳು ಎಲ್ಲರಿಗೂ ಗೊತ್ತಿದೆ. ಸರಕಾರಕ್ಕೆ ಬೆನ್ನುಮೂಳೆ ಎನ್ನುವುದು ಇದೆಯಾ? ಯಾರನ್ನು ಮೆಚ್ಚಿಸಲು ರಾಜ್ಯ ಆಳುತ್ತಿದ್ದಿರಿ. ನೀವೆಲ್ಲ ಪ್ರಮಾಣ ಸ್ವೀಕಾರ ಮಾಡಿದ್ದೀರಿ, ಅದರ ಉದ್ದೇಶ ಸಚಿವರು ಮರೆತಿರಾ? ಹಲಾಲ್ ಮುಗೀತು, ಈಗ ಆಜಾನಾ ಶುರುವಾಗಿದೆ. ನಾನು ರಾಜ್ಯದ ಜನರಿಗೆ ಮನವಿ ಮಾಡ್ತೀನಿ, ಇಂಥವರನ್ನು ದೂರ ಇಡಿ. ಸಮಾಜಘಾತುಕರನ್ನು ದೂರ ಇಡಿ ಎಂದು ಮನವಿ‌ ಮಾಡುವೆ ಎಂದು ಕುಮಾರಸ್ವಾಮಿ ಅವರು ಕರೆ ನೀಡಿದರು.