ಮನೆ ಕಾನೂನು ಪ. ಬಂಗಾಳ ಪಂಚಾಯತ್ ಚುನಾವಣೆ: ಸೇನಾಪಡೆ ನಿಯೋಜನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ಪ. ಬಂಗಾಳ ಪಂಚಾಯತ್ ಚುನಾವಣೆ: ಸೇನಾಪಡೆ ನಿಯೋಜನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

0

ಪಶ್ಚಿಮ ಬಂಗಾಳದಲ್ಲಿ ಮುಂಬರುವ ಪಂಚಾಯತ್ ಚುನಾವಣೆಗೆ ಸೇನಾಪಡೆಗಳನ್ನು ನಿಯೋಜಿಸುವಂತೆ ಸೂಚಿಸಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

Join Our Whatsapp Group

 [ಪಶ್ಚಿಮ ಬಂಗಾಳ ಸರ್ಕಾರ ಮತ್ತಿತರರು ಹಾಗೂ  ಸುವೆಂದು ಅಧಿಕಾರಿ ಇನ್ನಿತರರ ನಡುವಣ ಪ್ರಕರಣ].

ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವಂತೆ ಮಾಡುವುದು ಹೈಕೋರ್ಟ್ ಆದೇಶದ ಉದ್ದೇಶ ಎಂಬ ಅಂಶವನ್ನು ಆರಂಭದಲ್ಲಿ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಮನೋಜ್ ಮಿಶ್ರಾ ಅವರಿದ್ದ ರಜಾಕಾಲೀನ ಪೀಠ ಗಮನಿಸಿತು.

“ಹಸ್ತಕ್ಷೇಪ ಮಾಡುವಂತಹ ಅಂಶಗಳು ಹೈಕೋರ್ಟ್ ಆದೇಶದಲ್ಲಿಲ್ಲ. ನಾವು ಹೈಕೋರ್ಟ್ ನೀಡಿರುವ ಯಾವುದೇ ಸೂಚನೆಗೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸುವುದಿಲ್ಲ. ಮೇಲ್ಮನವಿಗಳನ್ನು ವಜಾಗೊಳಿಸಲಾಗಿದೆ” ಎಂದು ನ್ಯಾಯಾಲಯ ತಿಳಿಸಿತು.

ಇದೇ ವೇಳೆ ಚುನಾವಣೆ ಎಂಬುದು ಹಿಂಸಾಚಾರಕ್ಕೆ ನೀಡುವ ಪರವಾನಗಿ ಅಲ್ಲ. ಹಿಂದೆ ಹಿಂಸಾಚಾರ ಉಂಟಾಗಿದ್ದ ಘಟನೆಗಳನ್ನು ಹೈಕೋರ್ಟ್ ಕಂಡಿದೆ. ಚುನಾವಣೆಗಳು ಹಿಂಸಾಚಾರವನ್ನು ಒಳಗೊಳ್ಳುವಂತಿಲ್ಲ. ಯಾವುದೇ ವ್ಯಕ್ತಿ ನಾಮಪತ್ರ ಸಲ್ಲಿಸಲು ಸಾಧ್ಯವಾಗದೆ ಹೋದರೆ, ನಾಮಪತ್ರ ಸಲ್ಲಿಸುವುದಕ್ಕೂ ಮುನ್ನವೇ ಅವರನ್ನು ಹತ್ಯೆಗೈದರೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎಲ್ಲಿ ಸಾಧ್ಯವಾಗುತ್ತದೆ?” ಎಂದು ನ್ಯಾಯಾಲಯ ಪ್ರಶ್ನಿಸಿತು.

ಕಲ್ಕತ್ತಾ ಹೈಕೋರ್ಟ್ ನ ಎರಡು ಆದೇಶಗಳ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಈ ಆದೇಶ ನೀಡಿದೆ.

ಮುಂಬಾರುವ ಪಂಚಾಯತ್ ಚುನಾವಣೆಯಲ್ಲಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಸೇನಾಪಡೆಗಳನ್ನು ತಕ್ಷಣವೇ ನಿಯೋಜಿಸಲು ಮನವಿ ಮಾಡುವಂತೆ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದವು.

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆ ವೇಳೆ ಸಂದರ್ಭದಲ್ಲಿ ಹೈಕೋರ್ಟ್ ಈ ಆದೇಶ ನೀಡಿತ್ತು.