ಮೈಸೂರು(Mysore): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ನೀಡುವ ಉದ್ದೇಶದಿಂದ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಪ್ರದೇಶದ ಜನರೆಲ್ಲರೂ ಅಭಿಯಾನದಲ್ಲಿ ಭಾಗವಹಿಸಿ ಉದ್ಯೋಗ ಪಡೆಯಿರಿ ಎಂದು ಜಿಲ್ಲಾ ಪಂಚಾಯತ್ (zilla panchayat) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದುಡಿಯೊಣ ಬಾ ಅಭಿಯಾನ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯೋಜನೆಯಡಿ ದೊರಕುವ ಸೌಲಭ್ಯಗಳನ್ನು ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ನೀಡುವ ಉದ್ದೇಶದಿಂದ ಮಾರ್ಚ್ 15 ರಿಂದ ಜೂನ್ ಅಂತ್ಯದವರೆಗೆ ‘ದುಡಿಯೋಣ ಬಾ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಮೂಲಕ ಬೇಸಿಗೆ ಕಾಲದಲ್ಲಿ ಗ್ರಾಮೀಣ ಭಾಗದ ಜನರು ವಲಸೆ ಹೋಗುವುದನ್ನು ತಪ್ಪಿಸಲು ಒಂದು ಕುಟುಂಬಕ್ಕೆ 100 ದಿನಗಳ ಕಾಲ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನರೇಗಾ ಯೋಜನೆಯಡಿ ಸತತ ಮೂರು ತಿಂಗಳಗಳ ಕಾಲ ಕೆಲಸ ಪಡೆಯಲು ಅವಕಾಶವಿದೆ. ದುಡಿಯೋಣ ಬಾ ಅಭಿಯಾನದಲ್ಲಿ ಉದ್ಯೋಗ ಕೈಗೊಂಡು ಕೃಷಿ ಚಟುವಟಿಕೆಗೆ ಅಗತ್ಯವಿರುವ ಬೀಜ, ರಸಗೊಬ್ಬರ ಖರೀದಿ ಹಾಗೂ ಮಕ್ಕಳ ಶಾಲೆ-ಕಾಲೇಜು ಶುಲ್ಕ ಭರಿಸಲು ಸಹಕಾರಿಯಾಗಲಿದೆ ಎಂದರು.
ಗ್ರಾಮೀಣ ಜನರು ಯೋಜನೆಯ ಸದುಪಯೋಗ ಮಾಡಿಕೊಳ್ಳುವ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬಹುದು. ಅಲ್ಲದೇ ಪ್ರಸ್ತುತ ಕೂಲಿಯು 309 ರೂ.ಗೆ ಹೆಚ್ಚಳವಾಗಿದೆ. ಈ ಸೌಲಭ್ಯ ಪಡೆಯಲು ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿಸಲ್ಲಿಸಿ ಉದ್ಯೋಗ ಪಡೆಯಿರಿ ಎಂದು ತಿಳಿಸಿದರು.
ಉಪಕಾರ್ಯದರ್ಶಿ (ಅಭಿವೃದ್ಧಿ) ಕೆ.ಸಿ.ದೇವರಾಜೇಗೌಡ ಅವರು ಮಾತನಾಡಿ, ಬೇಸಿಗೆ ಸಮಯದಲ್ಲಿ ಕೃಷಿ ಚಟುವಟಿಕೆಗಳು ಕಡಿಮೆ ಇರಲಿದ್ದು, ಕೂಲಿ ಕೆಲಸವೂ ಸಿಗುವುದಿಲ್ಲ. ಈ ವೇಳೆಯಲ್ಲಿ ಗ್ರಾಮೀಣರಿಗೆ ಜೀವನ ನಿರ್ವಹಣೆಯೂ ಕಷ್ಟ, ಇಂತಹ ಸಮಯದಲ್ಲಿ ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನದ ಮೂಲಕ ಗ್ರಾಮೀಣರಿಗೆ 3 ತಿಂಗಳ ಕಾಲ ನಿರಂತರವಾಗಿ ಕೆಲಸ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.
ನರೇಗಾ ಯೋಜನೆಯ ಸೌಲಭ್ಯಗಳ ಮಾಹಿತಿಯೂ ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೂ ತಿಳಿಯಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕಿನ ಜನರು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.