ಮನೆ ಕಾನೂನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲೋಕನಾಥ್ ನೇಮಕ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲೋಕನಾಥ್ ನೇಮಕ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

0

ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ. ಎನ್ ಕೆ ಲೋಕನಾಥ್ ಅವರನ್ನು ನೇಮಕ ಮಾಡಿ ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ತಡೆ ನೀಡಿದೆ.

Join Our Whatsapp Group

ಬೆಂಗಳೂರಿನ ಪ್ರೊ.ಶರತ್ ಅನಂತಮೂರ್ತಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಇ ಎಸ್ ಇಂದಿರೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

2023ರ ಮಾರ್ಚ್ 23ರಂದು ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಮೇಲ್ನೋಟಕ್ಕೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯಿದೆ 2000ರ ಸೆಕ್ಷನ್ 14 ಮತ್ತು ಯುಜಿಸಿ ನಿಯಮಗಳ ಅಡಿಯಲ್ಲಿ ಪ್ರತಿವಾದಿ ಪ್ರಾಧಿಕಾರಗಳು ನಿಬಂಧನೆ ಪಾಲಿಸಿಲ್ಲ. ಹೀಗಾಗಿ, ಒಂದನೇ ಪ್ರತಿವಾದಿ ಮಾಡಿರುವ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ. ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ. ಅಲ್ಲದೇ, ವಿಚಾರಣೆ ಮುಂದೂಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅವರು “ಮೊದಲಿಗೆ ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯಿದೆ ಅನ್ವಯ ನಿರ್ದಿಷ್ಟ ಅರ್ಹತೆ ಇಲ್ಲದಿದ್ದರೂ ನಿಯಮಾವಳಿ ಉಲ್ಲಂಘಸಿ ಕುಲಪತಿಯನ್ನು ನೇಮಕ ಮಾಡಲಾಗಿದೆ. ಲೋಕನಾಥ್ ಅವರ ಹೆಸರು ಉನ್ನತ ಶಿಕ್ಷಣ ಇಲಾಖೆ ಮಾಡಿದ್ದ ಪಟ್ಟಿಯಲ್ಲೇ ಇರಲಿಲ್ಲ” ಎಂದರು.

“ಕುಲಪತಿಯಾಗಿ ನೇಮಕಗೊಂಡಿರುವ ಲೋಕನಾಥ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದೆ. ಆದರೆ, ಅವರು ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ. ಜತೆಗೆ ಸುಪ್ರೀಂ ಕೋರ್ಟ್ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪಿಗೆ ವಿರುದ್ಧವಾಗಿ ನಿಯಮಗಳನ್ನು ಗಾಳಿಗೆ ತೂರಿ ಅವರನ್ನು ನೇಮಕ ಮಾಡಲಾಗಿದೆ” ಎಂದು ಆಕ್ಷೇಪಿಸಿದರು.

ದಾಖಲೆಗಳ ಪ್ರಕಾರ ಕುಲಪತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಲು 20 ದಿನ ಸಮಯ ನೀಡಿ ನವೆಂಬರ್ 8ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಅರ್ಜಿ ಸಲ್ಲಿಕೆಗೆ 2022ರ ನವೆಂಬರ್ 24 ಕೊನೆಯ ದಿನವಾಗಿತ್ತು.  ಅದೇ ದಿನ ಅವರು ಹೈಕೋರ್ಟ್ನಲ್ಲಿ ತಮ್ಮ ಪ್ರಕರಣದ ವಿರುದ್ಧ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಜೊತೆಗೆ 2007ರಲ್ಲಿ ನಡೆದ ಪ್ರೊಫೆಸರ್ ನೇಮಕದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ತನಿಖೆಗೆ ನೇಮಕ ಮಾಡಲಾಗಿದ್ದ ನ್ಯಾಯಮೂರ್ತಿ ರಂಗವಿಠಲಾಚಾರ್ ಆಯೋಗವು ಪ್ರೊಫೆಸರ್ ನೇಮಕಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಮದಂತೆ 10 ವರ್ಷಗಳ ಬೋಧನಾ ಅನುಭವ ಇರಬೇಕು, ಆದರೆ ಲೋಕನಾಥ್ ಅವರಿಗೆ ಅದು ಇಲ್ಲ. ಹೀಗಾಗಿ, ಅವರು ಯುಜಿಸಿ ನಿಯಮದ ಪ್ರಕಾರ ಪ್ರೊಫೆಸರ್ ಹುದ್ದೆಗೆ ಅರ್ಹರಲ್ಲ ಎಂದು ಹೇಳಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮೈಸೂರಿನ ಜಯಲಕ್ಷ್ಮೀಪುರಂ ನಿವಾಸಿ ಡಿ ವಿ ಶಶಿಧರ್ ಮತ್ತಿತರರು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಲೋಕನಾಥ್ ಮತ್ತಿತರರ ವಿರುದ್ಧ ಆಸ್ತಿ ಒತ್ತುವರಿ ಸಂಬಂಧ 2020ರ ನವೆಂಬರ್ 4ರಂದು ವಂಚನೆ ಪ್ರಕರಣ ದಾಖಲಿಸಿದ್ದರು. ಆ ಕುರಿತ ಪ್ರಕರಣ ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದೂ ವಿವರಿಸಲಾಗಿದೆ.

ಶೋಧನಾ ಸಮಿತಿಯು ಪ್ರೊ. ಎನ್ ಕೆ ಲೋಕನಾಥ್, ಪ್ರೊ. ಶರತ್ ಅನಂತಮೂರ್ತಿ, ಪ್ರೊ. ಡಿ ಎಸ್ ಗುರು ಅವರ ಹೆಸರುಗಳನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಶಿಫಾರಸ್ಸು ಮಾಡಿತ್ತು. ರಾಜ್ಯಪಾಲರು 2023ರ ಮಾರ್ಚ್ 23ರಂದು ಪ್ರೊ. ಎನ್ ಕೆ ಲೋಕನಾಥ್ ಅವರನ್ನು ನಾಲ್ಕು ವರ್ಷಗಳ ಅವಧಿಗೆ ಅಥವಾ 67 ವರ್ಷಗಳಾಗುವವರೆಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಿದ್ದರು. ಈ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.