ಮನೆ ಕ್ರೀಡೆ ಡೇವಿಸ್ ಕಪ್ ಟೆನಿಸ್ ಗೆ ರೋಹನ್ ಬೋಪಣ್ಣ ವಿದಾಯ

ಡೇವಿಸ್ ಕಪ್ ಟೆನಿಸ್ ಗೆ ರೋಹನ್ ಬೋಪಣ್ಣ ವಿದಾಯ

0

 ಹೊಸದಿಲ್ಲಿ: ಮುಂದಿನ ಸೆಪ್ಟಂಬರ್ ನಲ್ಲಿ ಡೇವಿಸ್ ಕಪ್ ಟೆನಿಸ್ ಗೆ ವಿದಾಯ ಹೇಳಲು ನಿರ್ಧರಿಸಿರುವ ಭಾರತದ ಅಗ್ರಮಾನ್ಯ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ, ತವರಾದ ಬೆಂಗಳೂರಿನಲ್ಲೇ ವಿದಾಯ ಪಂದ್ಯ ಆಡಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

Join Our Whatsapp Group

43 ವರ್ಷದ ರೋಹನ್ ಬೋಪಣ್ಣ ಮೂಲತಃ ಕೊಡಗಿನವರು. ಹೀಗಾಗಿ ತವರಾದ ಕರ್ನಾಟಕದಲ್ಲೇ ಅಂತಿಮ ಪಂದ್ಯ ಆಡಬೇಕೆನ್ನುವುದು ಅವರ ಆಸೆ. ಆದರೆ ಅವರ ಈ ಬಯಕೆ ಈಡೇರುವ ಸಾಧ್ಯತೆ ಇಲ್ಲ. ಸೆಪ್ಟಂಬರ್ ನಲ್ಲಿ ಮೊರೊಕ್ಕೊ ವಿರುದ್ಧ ಭಾರತ ವಿಶ್ವ ಗ್ರೂಪ್ ಸೆಕೆಂಡ್ ಟೈ ಡೇವಿಸ್ ಕಪ್ ಪಂದ್ಯ ಆಡುವುದಾದರೂ ಇದರ ಆತಿಥ್ಯವನ್ನು ಎಐಟಿಎ ಈಗಾಗಲೇ ಉತ್ತರಪ್ರದೇಶಕ್ಕೆ ನೀಡಿದೆ.

ರೋಹನ್ ಬೋಪಣ್ಣ ಅವರ ಡೇವಿಸ್ ಕಪ್ ಅನುಭವ 2 ದಶಕಗಳಿಗೂ ಮಿಗಿಲಾದದ್ದು. ಅವರು 2002ರಲ್ಲಿ ಡೇವಿಸ್ ಕಪ್ ಗೆ ಪಾದಾರ್ಪಣೆ ಮಾಡಿದ್ದರು. ಎಟಿಪಿ ಟೂರ್ ಗಳಲ್ಲಿ ಸಕ್ರಿಯರಾಗಿದ್ದು, ಭಾರತವನ್ನು 32 ಸ್ಪರ್ಧೆಗಳಲ್ಲಿ ಪ್ರತಿನಿಧಿಸಿದ್ದಾರೆ. 12 ಸಿಂಗಲ್ಸ್ ಮತ್ತು 10 ಡಬಲ್ಸ್ ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ಲಿಯಾಂಡರ್ ಪೇಸ್ 58 ಪಂದ್ಯಗಳಲ್ಲಿ ಆಡಿರುವುದು ಭಾರತೀಯ ದಾಖಲೆ. ಅನಂತರದ ಸ್ಥಾನ ದಲ್ಲಿರುವವರು ಜೈದೀಪ್ ಮುಖರ್ಜಿ (43), ರಾಮನಾಥನ್ ಕೃಷ್ಣನ್ (43), ಪ್ರೇಮ್ಜಿತ್ ಲಾಲ್ (41), ಆನಂದ್ ಅಮೃತ್ರಾಜ್ (39), ಮಹೇಶ್ ಭೂಪತಿ (35) ಮತ್ತು ವಿಜಯ್ ಅಮೃತ್ರಾಜ್ (32).

ಬೆಂಗಳೂರಿಗೆ ಆತಿಥ್ಯ ಅಸಾಧ್ಯ

“ಸೆಪ್ಟಂಬರ್ ನಲ್ಲಿ ನಾನು ಕೊನೆಯ ಡೇವಿಸ್ ಕಪ್ ಪಂದ್ಯವನ್ನು ಆಡಬೇಕೆಂಬ ನಿರ್ಧಾರಕ್ಕೆ ಬಂದಿದ್ದೇನೆ. 2002ರಿಂದಲೂ ಆಡುತ್ತಿರುವ ನನ್ನ ಬಯಕೆಯೆಂದರೆ ತವರಾದ ಬೆಂಗಳೂರಿನಲ್ಲಿ ವಿದಾಯ ಪಂದ್ಯವನ್ನು ಆಡುವುದು. ಭಾರತದ ಎಲ್ಲ ಆಟಗಾರರೊಂದಿಗೆ ಈ ಕುರಿತು ಮಾತಾ ಡಿದ್ದೇನೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಶನ್ ಕೂಡ ಸಕರಾತ್ಮಕವಾಗಿ ಸ್ಪಂದಿಸಿದೆ. ಆದರೆ ಭಾರತೀಯ ಟೆನಿಸ್ ಅಸೋಸಿಯೇಶನ್ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕು’ ಎಂದು ಬೋಪಣ್ಣ ಹೇಳಿದರು.

ಆದರೆ ಅಖೀಲ ಭಾರತ ಟೆನಿಸ್ ಅಸೋಸಿಯೇಶನ್ (ಎಐಟಿಎ) ಮಹಾ ಕಾರ್ಯದರ್ಶಿ ಅನಿಲ್ ಧುಪರ್ ಪ್ರಕಾರ, ಮೊರೊಕ್ಕೊ ಎದುರಿನ ಡೇವಿಸ್ ಕಪ್ ಪಂದ್ಯಾವಳಿಯ ಆತಿಥ್ಯವನ್ನು ಬೆಂಗಳೂರಿಗೆ ವರ್ಗಾಯಿಸುವುದು ಕಷ್ಟ.

ಎಟಿಪಿ ಟೂರ್ ನಲ್ಲಿ ಮುಂದುವರಿಯುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೋಹನ್ ಬೋಪಣ್ಣ, “ನಾನು ಎಟಿಪಿ ಟೂರ್ ಗಳಲ್ಲಿ ಆಡದೇ ಹೋದರೆ ಈ ಸ್ಥಾನ ಮತ್ತೂಬ್ಬ ಭಾರತೀಯ ಆಟಗಾರನಿಗೆ ಲಭಿಸುತ್ತದೆಂಬ ಖಾತ್ರಿ ಇಲ್ಲ. ಉದಾಹರಣೆಗೆ ವಿಂಬಲ್ಡನ್. ನನ್ನ ಸ್ಥಾನ ಇನ್ಯಾರೋ ವಿದೇಶಿ ಆಟಗಾರನ ಪಾಲಾಗುತ್ತದೆ. ಆದರೆ ಡೇವಿಸ್ ಕಪ್ ನಿಂದ ದೂರ ಸರಿದರೆ ಮತ್ತೋರ್ವ ಭಾರತದ ಟೆನಿಸಿಗನಿಗೇ ಅವಕಾಶ ಸಿಗುತ್ತದೆ’ ಎಂದರು.