ಮನೆ ಕಾನೂನು ನಿರೀಕ್ಷಣಾ ಜಾಮೀನು ಕೋರಿ ಹಲವು ಕೋರ್ಟ್ ಗಳಲ್ಲಿ ಅರ್ಜಿ ಸಲ್ಲಿಕೆ ತಡೆಗೆ ಹೈಕೋರ್ಟ್ ಮಾರ್ಗಸೂಚಿ

ನಿರೀಕ್ಷಣಾ ಜಾಮೀನು ಕೋರಿ ಹಲವು ಕೋರ್ಟ್ ಗಳಲ್ಲಿ ಅರ್ಜಿ ಸಲ್ಲಿಕೆ ತಡೆಗೆ ಹೈಕೋರ್ಟ್ ಮಾರ್ಗಸೂಚಿ

0

ಬೆಂಗಳೂರು(Bengaluru): ಅಪರಾಧ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿಗಳು ಏಕಕಾಲದಲ್ಲಿ ನಾನಾ ನ್ಯಾಯಾಲಯಗಳಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಅಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹೈಕೋರ್ಟ್(High Court) ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ನ್ಯಾಯಾಲಯಗಳಲ್ಲಿ ಜಾಮೀನು ಪಡೆಯಲು ಮಾಹಿತಿ ಮರೆಮಾಚಿ ಮಾಡಿದ ವಂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ನ್ಯಾಯಾಲಯಗಳಿಂದ ನಿರೀಕ್ಷಣಾ ಅಥವಾ ನಿಯಮಿತ ಜಾಮೀನು ಪಡೆಯಲು ಅಂತಹ ಮೋಸದ ಮಾರ್ಗಗಳನ್ನು ತಡೆಯಲು ತಂತ್ರಜ್ಞಾನ ಆಧಾರಿತ ಕಾರ್ಯವಿಧಾನ ಅಭಿವೃದ್ಧಿ ಸೇರಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

2021ರಲ್ಲಿ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಭೂ ದಾಖಲೆಗಳನ್ನು ನಕಲಿ ಮಾಡಿ ವಂಚಿಸಿದ ಅಪರಾಧ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾದಹಳ್ಳಿಯ ನವರತ್ನ ಅಗ್ರಹಾರದ 40 ವರ್ಷದ ನಂಜಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ. ಬೆಂಗಳೂರಿನ ವಿಚಾರಣಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ನಂತರ ಇದೇ ಪ್ರಕರಣದಲ್ಲಿ ಈ ಹಿಂದೆ ಬೆಂಗಳೂರಿನ ಹೈಕೋರ್ಟ್ನ ಪ್ರಧಾನ ಪೀಠದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಅದೇ ಕ್ರಿಮಿನಲ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಕಲಿ ವಿಳಾಸವನ್ನು ನೀಡಿ ಮೈಸೂರು ಮತ್ತು ತುಮಕೂರಿನ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದ ಅಂಶ ವಿಚಾರಣೆ ವೇಳೆ ಕಂಡುಬಂದಿದೆ.

ಹಾಗಾಗಿ ಇದರ ಗಂಭೀರತೆಯನ್ನು ಅರಿತು ನ್ಯಾಯಪೀಠ ಪೊಲೀಸರಿಗೆ ದೂರು ನೀಡುವಂತೆ ರಿಜಿಸ್ಟ್ರಾರ್ ಜನರಲ್ಗೆ ಸೂಚಿಸಿದೆಯಲ್ಲದೆ, ದೂರು ದಾಖಲಾದ ದಿನದಿಂದ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.

“ತುಮಕೂರು ನ್ಯಾಯಾಲಯ ಹಾಗೂ ಮೈಸೂರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅರ್ಜಿದಾರರು ಆಯಾ ವಕೀಲರಿಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್ನಲ್ಲಿ ಪ್ರತಿಪಾದಿಸಿದ್ದರಿಂದ ತನಿಖೆ ನಡೆಸುವುದು ಅಗತ್ಯ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸದ್ಯದ ಅರ್ಜಿಯಲ್ಲಿ ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿ ಹಿಂದೆ ಯಾವುದೇ ಅರ್ಜಿಗಳನ್ನು ಸಲ್ಲಿಸಿರುವ ಅಂಶಗಳನ್ನು ಬಹಿರಂಗಪಡಿಸಿಲ್ಲ ಎಂಬುದನ್ನು ಹೈಕೋರ್ಟ್ ಪತ್ತೆ ಹಚ್ಚಿದೆ.

ಒಂದೇ ಪ್ರಕರಣದಲ್ಲಿ ಈ ರೀತಿ ಯಾವುದೇ ನ್ಯಾಯಾಲಯಗಳ ಮುಂದೆ ಇದೇ ರೀತಿಯ ಅರ್ಜಿಗಳನ್ನು ಸಲ್ಲಿಸಲಾಗಿದೆಯೇ ಎಂಬುದನ್ನು ಕಂಡುಹಿಡಿಯಲು ನಿಯಮಿತ ಅಥವಾ ನಿರೀಕ್ಷಣಾ ಜಾಮೀನು ಕೋರಿ ಪ್ರತಿ ಅರ್ಜಿಯನ್ನು ಪರಿಶೀಲಿಸಲು ಪ್ರತಿ ಕೋರ್ಟ್ ನಲ್ಲಿ ಕಾರ್ಯವಿಧಾನ ಅಭಿವೃದ್ಧಿಪಡಿಸಬೇಕು ಎಂದು ಹೈಕೋರ್ಟ್, ರಿಜಿಸ್ಟ್ರಾರ್-ಜನರಲ್ ಗೆ ನಿರ್ದೇಶನ ನೀಡಿದೆ. ಪೊಲೀಸರಿಂದ ವಿವರಗಳನ್ನು ಪಡೆದ ನಂತರ ಆರೋಪಿಯ ಮೇಲಿನ ಹಿಂದಿನ ಆದೇಶ ಅಥವಾ ಜಾಮೀನಿಗಾಗಿ ಬಾಕಿ ಇರುವ ಅರ್ಜಿಗಳ ಕುರಿತು ಆಯಾ ನ್ಯಾಯಾಲಯಗಳಿಗೆ ಮಾಹಿತಿಯನ್ನು ಪೂರೈಸಲು ಪ್ರಾಸಿಕ್ಯೂಟರ್ ಇಲಾಖೆಯು ಎಲ್ಲಾ ಸಾರ್ವಜನಿಕ ಅಭಿಯೋಜಕರಿಗೆ ಸೂಚಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ವಕೀಲರ ವಕಾಲತ್ಗೆ ಒತ್ತಾಯಿಸುವಂತೆ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳ ನೋಂದಣಿಗೂ ಸಹ ಸೂಚಿಸಲಾಗಿದೆ.

ಈ ಮಧ್ಯೆ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ತನಿಖೆಗೆ ಮಾಡಲು ತನಿಖಾಧಿಕಾರಿ ವಿಫಲರಾಗಿರುವುದು ಮಾತ್ರವಲ್ಲದೆ ನ್ಯಾಯಾಲಯಗಳಿಗೆ ವಂಚನೆ ಮಾಡಲು ಅವಕಾಶ ನೀಡಿದ್ದರಿಂದ ತನಿಖಾಧಿಕಾರಿಯನ್ನು (ಐಒ) ಬದಲಾಯಿಸುವಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್ಪೆಕ್ಟರ್ ಜನರಲ್ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ನಿರೀಕ್ಷಣಾ ಜಾಮೀನಿಗಾಗಿ ಅರ್ಜಿದಾರರು ವಂಚನೆಯಿಂದ ನಾನಾ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿರುವುದು ತಿಳಿದಿದ್ದರೂ ಸಹ ಬಂಧಿಸದೆ ಇರುವುದು ಸರಿಯಲ್ಲ ಎಂದು ನ್ಯಾಯಪೀಠ ಹೇಳಿದೆ.