ಮನೆ ಪ್ರಕೃತಿ 5 ವರ್ಷದಲ್ಲಿ 25 ಕೋಟಿ ಸಸಿ ನೆಡುವ ಸಂಕಲ್ಪ: ಈಶ್ವರ ಖಂಡ್ರೆ

5 ವರ್ಷದಲ್ಲಿ 25 ಕೋಟಿ ಸಸಿ ನೆಡುವ ಸಂಕಲ್ಪ: ಈಶ್ವರ ಖಂಡ್ರೆ

1 ವಾರದಲ್ಲಿ 1 ಕೋಟಿ ಗಿಡ ನೆಡಲು ಯೋಜನೆ, ಜಿಯೋ ಟ್ಯಾಗ್ ಮೂಲಕ ಆಡಿಟ್

0

ಬೆಂಗಳೂರು: ಪ್ರಸಕ್ತ ವರ್ಷ 5 ಕೋಟಿ ಸಸಿಗಳನ್ನು ರಾಜ್ಯಾದ್ಯಂತ ನೆಟ್ಟು, ಅವು ಮರವಾಗಿ ಬೆಳೆಯುವಂತೆ ಕಾಳಜಿ ವಹಿಸುವುದರ ಜೊತೆಗೆ ಎಷ್ಟು ಸಸಿಗಳು ಉಳಿದಿವೆ ಎಂಬ ಬಗ್ಗೆ ಜಿಯೋ ಟ್ಯಾಗ್ ಮೂಲಕ ಆಡಿಟ್ ಮಾಡಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

Join Our Whatsapp Group

ವಿಕಾಸಸೌಧದಲ್ಲಿಂದು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಚಿವರು,  ಅರಣ್ಯ ವ್ಯಾಪ್ತಿ, ಹಸಿರು ವ್ಯಾಪ್ತಿ ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ. ಒಟ್ಟಾರೆ ಭೌಗೋಳಿಕ ಪ್ರದೇಶದ ಪೈಕಿ ಅರಣ್ಯ ಹಾಗೂ ಹಸಿರು ವ್ಯಾಪ್ತಿ ಕನಿಷ್ಠ ಶೇ.33ಕ್ಕೆ ಇರಬೇಕು ಎಂಬುದು ಮಾನದಂಡ. ಆದರೆ ಪ್ರಸ್ತುತ ರಾಜ್ಯದಲ್ಲಿ ಈ ವ್ಯಾಪ್ತಿ ಸುಮಾರು 20.19ರಷ್ಟು ಮಾತ್ರವೇ ಇದ್ದು, ಸರ್ಕಾರ ವ್ಯಾಪ್ತಿ ಹೆಚ್ಚಳವನ್ನು ಆದ್ಯ ಕರ್ತವ್ಯ ಎಂದು ಪರಿಗಣಿಸಿದೆ ಎಂದರು.

ನಾವು ಪ್ರಕೃತಿ ಪರಿಸರ ರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ.  ಅರಣ್ಯ ಇಲಾಖೆ ಮುಖ್ಯವಾಗಿ ಅರಣ್ಯ ಸಂರಕ್ಷಿಸಬೇಕು. ಆ ಕಾರ್ಯವನ್ನು ಇಲಾಖೆ ಮಾಡುತ್ತದೆ.  ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಲು ಯೋಜನೆ ರೂಪಿಸಿದ್ದು, ಶಿಕ್ಷಣ ಇಲಾಖೆಯೂ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಪ್ರಸಕ್ತ ವರ್ಷ 5 ಕೋಟಿ ಸಸಿ ನೆಟ್ಟು, ಪೋಷಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಲಾಗುವುದು ಎಂದರು.

ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಎಷ್ಟು ಮಹತ್ವದ್ದು ಎಂಬುದು ಇಡೀ ಮಾನವ ಕುಲಕ್ಕೆ ಅರಿವಾಯಿತು. ಹೀಗಾಗಿ ನಮಗೆ ಪ್ರಾಣವಾಯು ನೀಡುವ ವೃಕ್ಷಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ಮಾಧ್ಯಮಗಳು ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಬೇಕು ಎಂದರು.

ಜುಲೈ 1ರಿಂದ 7 ದಿನಗಳ ಕಾಲ ಆಚರಿಸಲಾಗುತ್ತಿರುವ ವನಮಹೋತ್ಸವಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೂ ಇದ್ದು,  ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಜಿಲ್ಲೆಯ ಇತರ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಹಸಿರು ವ್ಯಾಪ್ತಿ ಹೆಚ್ಚಳ ಕೇವಲ ಅರಣ್ಯ ಇಲಾಖೆ ಒಂದರಿಂದ ಆಗುವ ಕಾರ್ಯವಲ್ಲ. ಇದರಲ್ಲಿ ಇಡೀ ಸಮಾಜ ಪಾಲ್ಗೊಳ್ಳಬೇಕು. ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸುವುದು ತಮ್ಮ ಕರ್ತವ್ಯ ಎಂದು ತಿಳಿಯಬೇಕು. ಆಬಾಲವೃದ್ಧರಾದಿಯಾಗಿ ಎಲ್ಲರೂ ಕೈಜೋಡಿಸಿದರೆ ಇದು ಜನಾಂದೋಲನವಾಗುತ್ತದೆ ಎಂದರು.

ಇಂದು ಹಸಿರು ವ್ಯಾಪ್ತಿ ಕ್ಷೀಣಿಸುತ್ತಿರುವುದರ ಪರಿಣಾಮವಾಗಿ ಮತ್ತು ಕೈಗಾರಿಕೆಗಳು, ವಾಹನಗಳು ಮತ್ತು ಮನೆಗಳಲ್ಲಿ ಎಲೆಕ್ಟ್ರಿಕ್ ಉಪಕರಣಗಳಿಂದ ಹೊರಹೊಮ್ಮುವ ಶಾಖ, ತ್ಯಾಜ್ಯ, ಹೊಗೆಯಿಂದ ಹಸಿರು ಮನೆ ಅನಿಲ ಪ್ರಮಾಣ ಹೆಚ್ಚಾಗಿ ಓಜೋನ್ ಪದರಕ್ಕೂ ಹಾನಿಯಾಗಿ ಹವಾಮಾನ ವೈಪರೀತ್ಯ ಆಗುತ್ತಿರುವುದು ನಮಗೆಲ್ಲಾ ತಿಳಿದ ವಿಷಯವಾಗಿದೆ. ಕುಡಿಯುವ ನೀರು, ಸೇವಿಸುವ ಗಾಳಿ ಮಲಿನವಾಗುತ್ತಿದೆ. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಬೇಕು. ನಾವೆಲ್ಲರೂ ಸೇರಿ ಪ್ರಕೃತಿ ಪರಿಸರ ಉಳಿಸಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.

ನಮ್ಮ ಅರಣ್ಯ ಇಲಾಖೆ 5 ಕೋಟಿ ಸಸಿ ನೆಡಲೆಂದೇ ತನ್ನ ನರ್ಸರಿಗಳಲ್ಲಿ ವ್ಯಾಪಕ ಶ್ರೇಣಿಯ ಸಸಿ ಬೆಳೆಸಿದೆ.  2.5 ಕೋಟಿಯಷ್ಟು ಸಸಿಗಳನ್ನು ಅರಣ್ಯ ವ್ಯಾಪ್ತಿಯಲ್ಲಿ ಇಲಾಖೆಯ ವತಿಯಿಂದ ನೆಡಲಾಗುತ್ತಿದೆ ಎಂದರು.

ದರ ಇಳಿಕೆ: ತಾವು ಅಧಿಕಾರ ವಹಿಸಿಕೊಳ್ಳುವ ಮೊದಲೇ ರೈತರಿಗೆ ಪೂರೈಕೆ ಮಾಡುತ್ತಿದ್ದ ಸಸಿಗಳ ದರವನ್ನು ಹೆಚ್ಚಳ ಮಾಡಲಾಗಿತ್ತು. ಈ ಬಗ್ಗೆ ಪುನರ್ ಪರಿಶೀಲನೆ ಮಾಡಿ, 5×8 ಗಿಡಗಳಿಗೆ 2 ರೂ., 6 x8 ಗಿಡಗಳಿಗೆ 3 ರೂ. ಮತ್ತು 8 x12 ಗಿಡಗಳಿಗೆ 6 ರೂ. ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.

ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲೂಗ್ರಾಮೀಣ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಅದೇ ರೀತಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ  ಸ್ಥಳೀಯ ನಗರ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಒಣ ಮಹೋತ್ಸವ ಆಗಲು ಬಿಡುವುದಿಲ್ಲ: ಯಾವುದೇ ಕಾರಣಕ್ಕೂ ವನಮಹೋತ್ಸವವನ್ನು ಒಣ ಮಹೋತ್ಸವ ಆಗಲು ಬಿಡುವುದಿಲ್ಲ. ನೆಟ್ಟ ಸಸಿಗಳು ಜೀವಂತ ಉಳಿಯಬೇಕು, ಬೆಳೆಯಬೇಕು. ಇದಕ್ಕಾಗಿ ಜಿಯೋ ಟ್ಯಾಗ್ ಮೂಲಕ ಆಡಿಟ್ ಮಾಡಿಸಲಾಗುವುದು, ಅಗತ್ಯ ಬಿದ್ದರೆ ಮೂರನೆ ವ್ಯಕ್ತಿ ಆಡಿಟ್ ಕೂಡ ಮಾಡಿಸಲಾಗುವುದು. ಈ ಬಾರಿ ನೆಟ್ಟ ಗಿಡಗಳ ಪೈಕಿ ಕನಿಷ್ಠ ಶೇ.80ರಷ್ಟು ಜೀವಂತ ಉಳಿಸಿ ಬೆಳೆಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಅಕೇಶಿಯಾ ಮತ್ತು ನೀಲಗಿರಿ ಗಿಡಗಳಿಂದಾಗುವ ದುಷ್ಪರಿಣಾಮದ ಬಗ್ಗೆಯೂ ಕ್ರಮ ವಹಿಸುವ ಭರವಸೆ ನೀಡಿದರು.