ಮನೆ ಸುದ್ದಿ ಜಾಲ ಮೈಸೂರು: ಗ್ರಂಥಪಾಲಕರಿಗೆ ವಿಜ್ಞಾನ ಕಾರ್ಯಗಾರ

ಮೈಸೂರು: ಗ್ರಂಥಪಾಲಕರಿಗೆ ವಿಜ್ಞಾನ ಕಾರ್ಯಗಾರ

0

ಮೈಸೂರು: ಜಿಲ್ಲಾ ಪಂಚಾಯತಿ ಮತ್ತು ಕುತುಹಲಿ ಸ್ಕೋಪ್ ಯೋಜನೆ ಅವರ ಸಹಯೋಗದಲ್ಲಿ ಸೋಮವಾರ ಜಿಪಂ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗ್ರಂಥಾಲಯದಲ್ಲಿ ಮಾಡಬಹುದಾದ ವಿಜ್ಞಾನ ಕಲಿಕೆಯ ಚಟುವಟಿಕೆಗಳು ಹಾಗೂ ಗ್ರಂಥಾಲಯಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮಕ್ಕೆ ಚಾಮರಾಜನಗರದ ದೀನಬಂಧು ಸೇವಾ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಜಯದೇವ ಚಾಲನೆ ನೀಡಿದರು.

Join Our Whatsapp Group

ಜಿ.ಪಂ. ವ್ಯಾಪ್ತಿಯಲ್ಲಿನ 225 ಗ್ರಾಮ ಪಂಚಾಯಿತಿಗಳಲ್ಲಿರುವ ಗ್ರಂಥಾಲಯದ ಗ್ರಂಥಪಾಲಕರಿಗೆ ಸರಳ ವಿಜ್ಞಾನವನ್ನು ಮತ್ತು ಅದರ ಚಟುವಟಿಕೆಗಳ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಸದರಿ ತರಬೇತಿಯನ್ನು ಪಡೆದು ಗ್ರಾಪಂ ಮಟ್ಟದಲ್ಲಿ ಮಕ್ಕಳಿಗೆ ವಿಜ್ಞಾನ ಚಟುವಟಿಕೆಯನ್ನು ಹಮ್ಮಿಕೊಳ್ಳುವುದು ತರಬೇತಿಯ ಉದ್ದೇಶವಾಗಿದೆ.

ಬಳಿಕ ಮಾತನಾಡಿದ ಜಯದೇವ ಅವರು, ಬದುಕನ್ನು ಬದಲಾಯಿಸುವ ಶಕ್ತಿ ಪುಸ್ತಕಕ್ಕೆ ಇದೆ. ಪುಸ್ತಕಗಳ ಕಲಿಕೆಯ ನಿರಂತರತೆಯಿಂದ ಉತ್ತಮ ವ್ಯಕ್ತಿಗಳನ್ನು ಸಮಾಜಕ್ಕೆ ಪರಿಚಯಿಸುತ್ತದೆ. ಪುಸ್ತಕಗಳ ಕಲಿಕೆ ಜ್ಞಾನದ ಹೊಸ ಬಾಗಿಲುಗಳನ್ನು ತೆರೆಯುತ್ತದೆ.  ದೇಶದ ಹೃದಯವಾಗಿರುವ ಗ್ರಾಮಗಳಲ್ಲಿ ಗ್ರಂಥಾಲಯಗಳ ಮೂಲಕ ಸಾರ್ವಜನಿಕರಿಗೆ, ಮಕ್ಕಳಿಗೆ, ಗ್ರಾಮಸ್ಥರಿಗೆ ಜ್ಞಾನ ಭಂಡಾರವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಕ್ರಿಯಾತ್ಮಕವಾಗಿ ಗ್ರಂಥಾಲಯಗಳನ್ನು ಸೃಷ್ಟಿಸಿದಾಗ ಜನರನ್ನು ಆಕರ್ಷಿತಗೊಳ್ಳುತ್ತಾರೆ. ಪುಸ್ತಕ ಸಂಸ್ಕೃತಿ ಬೆಳೆಯಬೇಕಾದರೆ ಪುಸ್ತಕವನ್ನು ಓದುವ ಪರಿಯನ್ನು ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕೆಂದು ಗ್ರಂಥಪಾಲಕರಿಗೆ ತಿಳಿಸಿದರು.

ಪ್ರಸ್ತುತ ಗ್ರಂಥಾಲಯಗಳು ಡಿಜಿಟಲೀಕರಣಗೊಳ್ಳುತ್ತಿದ್ದು, ಅದರಂತೆ ಬದಲಾಗಬೇಕಿದೆ. ಮಕ್ಕಳಿಗೆ ವಿಜ್ಞಾನ ಕಲಿಕೆಯೊಂದಿಗೆ ಪುಸ್ತಕಗಳ ಪ್ರೀತಿ ಹೆಚ್ಚಿಸಬೇಕು. ದೃಶ್ಯ ಮಾಧ್ಯಮದ ಮೂಲಕ ಮಕ್ಕಳಿಗೆ ಜ್ಞಾನ ಮೂಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಮಾತನಾಡಿ, ಗ್ರಂಥಪಾಲಕರಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಲಿಕಾ ಚಟುವಟಿಕೆಯನ್ನು ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ. ಅದನ್ನು ಪೂರಕವಾಗಿ ಇಂದು ಸರಳ ವಿಜ್ಞಾನ ಚಟುವಟಿಕೆಯ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಸದರಿ ತರಬೇತಿಯ ಸದುಪಯೋಗವನ್ನು ಎಲ್ಲಾ ಗ್ರಂಥಪಾಲಕರು ಪಡೆದುಕೊಳ್ಳಬೇಕು ಎಂದರು.

ಸಿಎಫ್ ಟಿಆರ್ ಐ ನ ನಿವೃತ್ತ ಮುಖ್ಯ ವಿಜ್ಞಾನಿ ಕೊಳ್ಳೆಗಾಲ ಶರ್ಮ ಅವರು ಮಾತನಾಡಿ, ವಿಜ್ಞಾನ ಪ್ರತಿಯೊಬ್ಬರಿಗೂ ಅಗತ್ಯವಿರುವಂತದ್ದು ಹಾಗಾಗಿ ಅದನ್ನು ಗ್ರಂಥಾಲಯಗಳಲ್ಲಿ ಬಳಸುವ ಮೂಲಕ, ವಿಜ್ಞಾನದ ವಿವಿಧ  ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ರೀತಿಯನ್ನು ಈ ತರಬೇತಿಯಲ್ಲಿ ತಿಳಿಸಲಾಗುವುದು. ಇದನ್ನು ಗ್ರಂಥಪಾಲಕರು ತಮ್ಮ ಗ್ರಂಥಾಲಯಗಳಲ್ಲಿ ಅಳವಡಿಸಿಕೊಂಡು ವಿಜ್ಞಾನ ಕಲಿಕೆಯ ಮೂಲಕ ಮಕ್ಕಳಿಗೆ ಪುಸ್ತಕಗಳ ಅರಿವು ಮೂಡಿಸಬೇಕು ಎಂದರು.

ಈ ವೇಳೆ ಕೊಳ್ಳೇಗಾಲ ಶರ್ಮ ಅವರ ಜಾಣ ಪ್ರಶ್ನೆ ಮತ್ತು ಅಡ್ಯನಡ್ಕ ಕೃಷ್ಣ ಭಟ್ ಅವರ ಆಯ್ದ ಬರಹಗಳು (ವಿಜ್ಞಾನ ಸಾಹಿತ್ಯ ಸಂಚಯ) ಎಂಬ ಪುಸ್ತಕಗಳ 500 ಪ್ರತಿಗಳನ್ನು ಎಲ್ಲಾ ಗ್ರಾಮ ಪಂಚಾಯಿತಗಳ ಗ್ರಂಥಾಲಯಗಳಿಗೆ ಕೊಳ್ಳೇಗಾಲ ಶರ್ಮ ಅವರು ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದಲ್ಲಿ ಉಪಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು, ಯೋಜನಾ ನಿರ್ದೇಶಕರಾದ ಸವಿತಾ, ಜಿಪಂ ಸಹಾಯಕ ಕಾರ್ಯದರ್ಶಿ ಕುಲದೀಪ್ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕಿನ ಗ್ರಂಥಪಾಲಕರು ಹಾಜರಿದ್ದರು.