ಪುಣೆ (ಮಹಾರಾಷ್ಟ್ರ)(Pune): 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್(Mumbai Indians) 15ನೇ ಆವೃತ್ತಿಯಲ್ಲಿ ಕೆಟ್ಟ ಆರಂಭ ಪಡೆದುಕೊಂಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ರೋಹಿತ್ ಪಡೆ ಇಂದು ಕೋಲ್ಕತ್ತಾ ನೈಟ್ ರೈಡರ್ಸ್(Kolkata knight riders) ವಿರುದ್ಧ ಕಣಕ್ಕಿಳಿಯುತ್ತಿದೆ.
ಮುಂಬೈ ತಂಡ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲುವಿನ ಸನಿಹ ಇತ್ತಾದರೂ, ಡೆತ್ ಓವರ್ಗಳಲ್ಲಿ ಮೊನಚು ಕಳೆದುಕೊಂಡು ಸೋಲನುಭವಿಸಿತು. ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜಾಸ್ ಬಟ್ಲರ್ ಅವರ ಅಬ್ಬರಕ್ಕೆ ಶರಣಾಗಿದ್ದಲ್ಲದೆ, ಬ್ಯಾಟಿಂಗ್ನಲ್ಲೂ ವಿಫಲವಾಗಿ 23 ರನ್ಗಳ ಸೋಲು ಕಂಡಿತು.
ಇದೀಗ ಇಂದು ಬಲಿಷ್ಠ ಕೆಕೆಆರ್ ವಿರುದ್ಧ ಮೊದಲ ಗೆಲುವಿಗಾಗಿ ಕಣಕ್ಕಿಳಿಯುತ್ತಿದೆ. ಆರಂಭಿಕ ಬ್ಯಾಟಿಂಗ್ನಲ್ಲಿ ಇಶಾನ್ ಕಿಶನ್, ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಮಿಂಚುತ್ತಿದ್ದಾರೆ. ಆದರೆ ಪಂದ್ಯವನ್ನು ಫಿನಿಶ್ ಮಾಡುವುದರಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಎಡುವಿದೆ. ಕೀರನ್ ಪೊಲಾರ್ಡ್ ಮತ್ತು ಟಿಮ್ ಡೇವಿಡ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯ ಇವರಿಬ್ಬರಿಗೆ ಮತ್ತು ನಾಯಕ ರೋಹಿತ್ಗೆ ಸಿಡಿಯಲು ಅದ್ಭುತ ಅವಕಾಶವಾಗಿದೆ.
ಬೌಲಿಂಗ್ನಲ್ಲಿ ಕೂಡ ಜಸ್ಪ್ರೀತ್ ಬುಮ್ರಾ ಅವರಿಗೆ ಸರಿಯಾದ ಸಾಥ್ ಸಿಗುತ್ತಿಲ್ಲ. ತೈಮಲ್ಸ್ ಮಿಲ್ಸ್ ಮತ್ತು ಬಾಸಿಲ್ ತಂಪಿ ಲೈನ್ ಅಂಡ್ ಲೆಂತ್ನತ್ತ ಗಮನ ಹರಿಸಬೇಕಾಗಿದೆ. ಜೊತೆಗೆ ಮುರುಗನ್ ಅಶ್ವಿನ್ ಪಿಚ್ನ ನೆರವು ಪಡೆದು ತಂಡಕ್ಕೆ ನೆರವಾಗಬೇಕಾಗಿದೆ.ಇತ್ತ ಕೆಕೆಆರ್ ಆಡಿರುವ ಮೂರು ಪಂದ್ಯಗಳಲ್ಲಿ 2 ಗೆಲುವು, ಒಂದು ಸೋಲು ಕಂಡಿದೆ.
ಆರ್ಸಿಬಿ ವಿರುದ್ಧ ಸೋಲು ಕಂಡರೆ, ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿದೆ. ಕಳೆದ ಪಂದ್ಯದಲ್ಲಿ ರಸೆಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿರುವುದು ತಂಡಕ್ಕೆ ಆನೆಬಲ ತಂದಿದೆ. ಉಮೇಶ್ ಯಾದವ್, ಸೌಥಿ, ನರೇನ್ ಅಂತಹ ಅನುಭವಿಗಳ ಬೌಲಿಂಗ್ ಬಲ ತಂಡಕ್ಕಿದೆ. ಆದರೆ ಆರಂಭಿಕರ ಅಸ್ಥಿರತೆ ತಂಡದ ಪ್ರಮುಖ ವೈಫಲ್ಯವಾಗಿದೆ. ಈ ವಿಭಾಗವನ್ನು ಸರಿಪಡಿಸಿಕೊಂಡರೆ ಕೆಕೆಆರ್ಗೆ ಮತ್ತೊಂದು ಗೆಲುವು ಸಾಧ್ಯ.