ಬೆಂಗಳೂರು: ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಂಗಳವಾರ ಭೇಟಿ ಮಾಡಿದ್ದು, ಭೇಟಿ ವೇಳೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿ ವೇಳೆ ಗಡ್ಕರಿಯವರಿಗೆ ಜಾರಕಿಹೊಳಿಯವರು ಸನ್ಮಾನಿಸಿದರು. ಬಳಿಕ ರಾಜ್ಯದಲ್ಲಿ ಒಟ್ಟು 14 ಯೋಜನೆಗಳನ್ನು ನಿರ್ಮಾಣ ಮಾಡುವಂತೆ ಕೇಂದ್ರ ಸಚಿವರಿಗೆ ಮನವಿಯನ್ನು ಸಲ್ಲಿಕೆ ಮಾಡಿದರು. ಈ ವೇಳೆ ಹಲವು ಫ್ಲೈಓವರ್ ರಸ್ತೆಗಳು, ಘಾಟ್ ರಸ್ತೆಗಳು, ಸುರಂಗ ರಸ್ತೆಗಳು ಹಾಗೂ ಇತರೆ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವಂತೆ ಪ್ರಸ್ತಾವನೆ ಸಲ್ಲಿಕೆ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ರಸ್ತೆಗಳ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಕೇಂದ್ರದ ಅಧಿಕಾರಿಗಳ ಜೊತೆಗೆ ಜಂಟಿ ಸಭೆ ಮಾಡಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆಂದು ಹೇಳಿದರು.
38 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಬೇಕಿದೆ. ಚಿಕ್ಕಮಗಳೂರು- ಬಿಳಿಕೆರೆ ರಸ್ತೆ ಉನ್ನತೀಕರಿಸಬೇಕಿದೆ. ಶಿರಾಡಿ ಘಾಟ್ ಸುರಂಗ ಮಾಡಲು ಕೇಂದ್ರ ಸರ್ಕಾರ ಉತ್ಸುಕತೆ ತೋರಿದೆ. ಬೆಂಗಳೂರಿನಲ್ಲಿ ಅಂಡರ್ ಗ್ರೌಂಡ್ 65 ಕಿಲೋ ಮೀಟರ್ ರಸ್ತೆ ಮಾಡಲು ಚಿಂತನೆ ನಡೆದಿದ್ದು, ಮೆಟ್ರೋ ಸುರಂಗದ ರೀತಿ ಅಂಡರ್ ಗ್ರೌಂಡ್ ರಸ್ತೆಯ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಹೆಬ್ಬಾಳ ಕೆರೆ ಪಕ್ಕಕ್ಕೆ ಮತ್ತೊಂದು ರಸ್ತೆ ಕೇಳಿದ್ದೇವೆ. ಮೈಸೂರು ರಿಂಗ್ ರೋಡ್‌ಗೆ ಫ್ಲೈಓವರ್ ಅಗತ್ಯವಿದೆ. ಆ ಬಗ್ಗೆಯೂ ಮಾತುಕತೆ ನಡೆದಿದೆ. ಕರ್ನಾಟಕ ಭವನದ ನಿರ್ಮಾಣದ ವೆಚ್ಚ ಮತ್ತೆ ಏರಿಕೆ ಆಗಿದೆ. ಯೋಜನೆ ಬದಲಾವಣೆಯಾಗಿರುವ ಹಿನ್ನೆಲೆ ಸುಮಾರು 20 ಕೋಟಿ ರೂ. ವೆಚ್ಚ ಹೆಚ್ಚಳವಾಗಬಹುದು ಎಂದು ಹೇಳಿದರು.