ಮನೆ ಕಾನೂನು ಆರ್.ಎಂ.ಎಂ. ಡಿಸಿಸಿ ಬ್ಯಾಂಕ್ ಮರುಪ್ರವೇಶಕ್ಕೆ ಮತ್ತೆ ವಿಘ್ನ: ಗೌಡರು ಸಲ್ಲಿಸಿದ್ದ ರಿಟ್ ವಜಾಗೊಳಿಸಿದ ಹೈಕೋರ್ಟ್

ಆರ್.ಎಂ.ಎಂ. ಡಿಸಿಸಿ ಬ್ಯಾಂಕ್ ಮರುಪ್ರವೇಶಕ್ಕೆ ಮತ್ತೆ ವಿಘ್ನ: ಗೌಡರು ಸಲ್ಲಿಸಿದ್ದ ರಿಟ್ ವಜಾಗೊಳಿಸಿದ ಹೈಕೋರ್ಟ್

0

ಶಿವಮೊಗ್ಗ: ಪುನಃ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗುವ ಮೂಲಕ ಮರಳಿ ಬ್ಯಾಂಕ್ ಅಧ್ಯಕ್ಷರಾಗ ಬಯಸಿದ್ದ ಆರ್.ಎಂ.ಮಂಜುನಾಥ ಗೌಡರಿಗೆ ಮತ್ತೊಮ್ಮೆ ಹಿನ್ನಡೆಯುಂಟಾಗಿದೆ.

Join Our Whatsapp Group

ತಮ್ಮ ಮುಂದುವರಿಕೆಗೆ ಅವಕಾಶ ನೀಡದ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರ ಕ್ರಮವನ್ನು ಪ್ರಶ್ನಿಸಿ ಗೌಡರು ದಾಖಲಿಸಿದ್ದ ರಿಟ್ ಪಿಟಿಷನ್ ಅನ್ನು ಹೈಕೋರ್ಟ್ ನಿನ್ನೆ ವಜಾಗೊಳಿಸಿದೆ.

ಮಂಜುನಾಥ ಗೌಡರ ಅನರ್ಹತೆಯನ್ನು ಅನೂರ್ಜಿತಗೊಳಿಸಿದ್ದ ಸಹಕಾರ ಸಂಘಗಳ ಅಪರ ನಿಬಂಧಕರ ಆದೇಶವನ್ನು ಪ್ರಶ್ನಿಸಿ ಗೌಡರ ಸ್ಥಾನಕ್ಕೆ ನಾಮಕರಣಗೊಂಡಿದ್ದ ಶಿಕಾರಿಪುರದ ಗುರುರಾಜ್ ಸಲ್ಲಿಸಿದ್ದ ಅರ್ಜಿಯನ್ನು ಸಹ ಹೈಕೋರ್ಟ್ ನ್ಯಾಯಮೂರ್ತಿಗಳಾದ ಆರ್.ದೇವದಾಸ್ ವಿಲೆಗೊಳಿಸಿದ್ದಾರೆ.

ಮಂಜುನಾಥ ಗೌಡರನ್ನು ಆಡಳಿತ ಮಂಡಳಿಯಲ್ಲಿ ಸೇರ್ಪಡೆಗೊಳಿಸಲಾಗದೆಂದು ಎಂ.ಡಿ. ಆಗಿದ್ದ ನಾಗೇಶ್ ಡೋಂಗ್ರೆ ಅವರು  ಹಿಂಬರಹ ನೀಡಿದ್ದರು. ಇದರ ವಿರುದ್ದ ಅರ್.ಎಂ.ಎಂ.ಹೈಕೋರ್ಟ್ ಮೆಟ್ಟಿಲೇರಿದ್ದರು.

2014 ರಲ್ಲಿ ಬೆಳಕಿಗೆ ಬಂದಿದ್ದ ನಗರ ಶಾಖೆಯಲ್ಲಿನ ಬಹುಕೋಟಿ ನಕಲಿ ಬಂಗಾರ ಹಗರಣದ ಹಿನ್ನೆಲೆಯಲ್ಲಿ ವಜಾಗೊಂಡು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅರ್.ಎಂ.ಎಂ.ರವರು ಮರಳಿ ಡಿಸಿಸಿ ಬ್ಯಾಂಕ್ ಮೇಲೆ ಹಿಡಿತ ಸಾಧಿಸಲು ಬಯಸಿದ್ದರು.

ತಮ್ಮನ್ನು ಅನರ್ಹಗೊಳಿಸಿದ್ದರ ಸಂಬಂಧ ಗೌಡರು ಈ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯವು ಇದನ್ನು ಮರುಪರಿಶೀಲಿಸುವಂತೆ ಸಹಕಾರ ಇಲಾಖೆ ಅಪರ ನಿಬಂಧಕರಿಗೆ ನಿರ್ದೇಶನ ನೀಡಿತ್ತು.

ಆ ಮೇರೆಗೆ ಇತ್ತೀಚೆಗಷ್ಟೇ ಸಹಕಾರ ಸಂಘಗಳ ಅಪರ ನಿಬಂಧಕರು ಗೌಡರ ಪರವಾಗಿ ಆದೇಶ ನೀಡಿದ್ದರು.

ಆದರೆ ಇದನ್ನು ಮಾನ್ಯ ಮಾಡದ ಎಂಡಿ ನಾಗೇಶ್ ಡೋಂಗ್ರೆರವರು ಹಿಂಬರಹ ನೀಡಿ, ಶಿವಮೊಗ್ಗ ಟಿಎಪಿಸಿ ಮೂಲಕ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಬಂದಿದ್ದು, ಆ ಮೂಲ ಸ್ಥಾನದ ಅವಧಿ ಕೋವಿಡ್ ವೇಳೆ  ಮುಗಿದು 9 ತಿಂಗಳು ಸದರಿ ಸೊಸೈಟಿ ಆಡಳಿತಾಧಿಕಾರಿ ಉಸ್ತುವಾರಿಯಲ್ಲಿತ್ತು. ಈ ಸಮಯದಲ್ಲಿ ನೀವು ಅಲ್ಲಿನ ಸದಸ್ಯರಾಗಿರಲಿಲ್ಲ. ಆಗ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯು ಸರ್ವಾನುಮತದಿಂದ ಗುರುರಾಜ್ ರನ್ನು ಖಾಲಿ ಇದ್ದ ಸ್ಥಾನಕ್ಕೆ ನೇಮಿಸಿಕೊಂಡಿದೆ.

ಈಗ ಆಡಳಿತ ಮಂಡಳಿಯಲ್ಲಿ ಯಾವುದೇ ಸ್ಥಾನ ಖಾಲಿ ಇಲ್ಲ. ಹೀಗಾಗಿ ಮರುಸೇರ್ಪಡೆ ಅಸಾಧ್ಯ ಎಂದು ಸಕಾರಣ ನೀಡಿದ್ದರು. ಎಂಡಿಯವರ ಹಿಂಬರಹವನ್ನು ಮಾನ್ಯ ಮಾಡಿದ ಹೈಕೋರ್ಟ್ ಗೌಡರ ರಿಟ್ ವಜಾಗೊಳಿಸಿದೆ.

 ಮುಂದೇನು?

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಆರ್.ಎಂ.ಎಂ. ಕಾಂಗ್ರೆಸ್ ಸರ್ಕಾರ ಬಂದ ನಂತರ ಇತ್ತೀಚೆಗಷ್ಟೇ ಡಿಸಿಸಿ ಬ್ಯಾಂಕ್ ಸರಕಾರಿ ನಾಮಿನಿ ಆಗಿ ನೇಮಕಗೊಂಡಿರುವ ದಶರಥ ಅವರ ನಾಮಕರಣವನ್ನು ರದ್ದುಗೊಳಿಸಿ ತಾವೇ ಆ ಸ್ಥಾನಕ್ಕೆ ನೇಮಕಗೊಂಡು ಡಿಸಿಸಿ ಬ್ಯಾಂಕ್ ಮರುಪ್ರವೇಶಕ್ಕೆ ಯೋಚಿಸಿದ್ದಾರೆನ್ನಲಾಗಿದೆ.