ಮನೆ ಕಾನೂನು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಬಹುಕೋಟಿ ನಕಲಿ ಬಂಗಾರ ಹಗರಣ: ತನಿಖೆಗೆ ಮುಂದಾದ ಜಾರಿ ನಿರ್ದೇಶನಾಲಯ

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಬಹುಕೋಟಿ ನಕಲಿ ಬಂಗಾರ ಹಗರಣ: ತನಿಖೆಗೆ ಮುಂದಾದ ಜಾರಿ ನಿರ್ದೇಶನಾಲಯ

0

ಶಿವಮೊಗ್ಗ: 2014ರಲ್ಲಿ ಬೆಳಕಿಗೆ ಬಂದಿದ್ದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಯ ಬಹುಕೋಟಿ ನಕಲಿ ಬಂಗಾರ ಸಾಲ ಪ್ರಕರಣವೀಗ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ.

Join Our Whatsapp Group

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಕಲಿ ಬಂಗಾರ ಸಾಲದ ಪ್ರಕರಣದ ತನಿಖೆಗೆ ಈಗ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ ಮುಂದಾಗಿದೆ.

ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್  ಕಾಯ್ದೆ  2003ರ ಸೆಕ್ಷನ್ 54ರಡಿ ಜಾರಿ ನಿರ್ದೇಶನಾಲಯ ನಕಲಿ ಬಂಗಾರ ಸಾಲ ಹಗರಣದ ತನಿಖೆಗೆ ಮುಂದಾಗಿದೆ.

 ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ 2012ರಿಂದ 2014ರ ಅವಧಿಯಲ್ಲಿ ನಕಲಿ ಬಂಗಾರವಿಟ್ಟು ಮತ್ತು ಬಂಗಾರವನ್ನು ಇಡದೆಯೇ ಲಕ್ಷಗಟ್ಟಲೆ ಸಾಲ ಪಡೆದು ವಂಚಿಸಿರುವ 34 ಸಾಲ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಕೆವೈಸಿ ದಾಖಲೆಗಳನ್ನು ಮೂರು ದಿನದೊಳಗೆ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ಅಜಯ್ ಚೌದರಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದ್ದಾರೆ.

ಕೇವಲ ನಕಲಿ ಬಂಗಾರ ಸಾಲ ಪಡೆದವರಷ್ಟೇ ಅಲ್ಲದೆ ಈ ಹಗರಣ ನಡೆದ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿ ನಿರ್ದೇಶಕರೆಲ್ಲರ ಹೆಸರು, ವಿಳಾಸ, ಫೋನ್ ನಂ., ಈ-ಮೇಲ್ ಐಡಿ ಹಾಗೂ ಅವರುಗಳ ಜವಾಬ್ದಾರಿ ಮತ್ತು ಹಗರಣದಲ್ಲಿ ಅವರ  ಪಾಲುದಾರಿಕೆ ಬಗ್ಗೆಯೂ ವಿವರ ನೀಡುವಂತೆ ಸೂಚಿಸಲಾಗಿದೆ.

ಇದಲ್ಲದೇ ಸದರಿ ಅವಧಿಯಲ್ಲಿ ಡಿಸಿಸಿ ಬ್ಯಾಂಕಿನ ಜನರಲ್ ಮ್ಯಾನೇಜರ್, ಉಪ ಮತ್ತು ಸಹಾಯಕ ಜನರಲ್ ಮ್ಯಾನೇಜರ್ ಆಗಿದ್ದವರು, ಶಾಖಾ ವ್ಯವಸ್ಥಾಪಕರು, ಸಿಇಒ, ಕ್ಯಾಷಿಯರ್, ಬಂಗಾರದ ವ್ಯಾಲ್ಯುಯರ್ ಆಗಿದ್ದವರ ಹೆಸರು, ವಿಳಾಸ, ಫೋನ್ ನಂ.,ಈ-ಮೇಲ್ ಐಡಿ, ಹಗರಣದಲ್ಲಿ ಅವರ ಪಾತ್ರ ಮತ್ತು ಜವಾಬ್ದಾರಿ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ಜೊತೆಗೆ ಸದರಿ ಬ್ಯಾಂಕ್ ಶಾಖೆಯ ಹಾಲಿ ಶಾಖಾ ವ್ಯವಸ್ಥಾಪಕರ ವಿವರ ನೀಡಬೇಕೆಂದು ಸೂಚಿಸಲಾಗಿದೆ.

ಆರ್.ಎಂ.ಮಂಜುನಾಥ ಗೌಡ ಅಧ್ಯಕ್ಷರಾಗಿದ್ದ ಅವಧಿಯಲ್ಲಿ  ನಡೆದಿದ್ದ 62  ಕೋಟಿ ನಕಲಿ ಬಂಗಾರ ಸಾಲ ಹಗರಣದಲ್ಲಿ ಶಾಖಾ ವ್ಯವಸ್ಥಾಪಕರಾಗಿದ್ದ ಶೋಭಾ ಸೇರಿದಂತೆ 18 ಜನರ ವಿರುದ್ದ ತನಿಖೆ ನಡೆಸಿದ್ದ ಸಿಒಡಿ ಪೋಲೀಸರು ಪ್ರಕರಣ ದಾಖಲಿಸಿದ್ದರು.