ಮನೆ ರಾಜಕೀಯ ಸಚಿವ ಅರಗ ಜ್ಞಾನೇಂದ್ರ ವಜಾಗೊಳಿಸಲು ಸಿಎಂಗೆ ಡಿ.ಕೆ. ಶಿವಕುಮಾರ್ ಆಗ್ರಹ

ಸಚಿವ ಅರಗ ಜ್ಞಾನೇಂದ್ರ ವಜಾಗೊಳಿಸಲು ಸಿಎಂಗೆ ಡಿ.ಕೆ. ಶಿವಕುಮಾರ್ ಆಗ್ರಹ

0

ಬೆಂಗಳೂರು: ಸಮಾಜದಲ್ಲಿ ಅಶಾಂತಿ, ಜಾತಿ, ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಗೆ ಪ್ರಚೋದಿಸುವಂತಹ ಹೇಳಿಕೆ ಕೊಟ್ಟಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಮುಖ್ಯಮಂತ್ರಿಗಳು ವಜಾ ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಕಾನ್ ಅವರ ಜತೆ ಜಂಟಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್ ಅವರು, ‘ಪೊಲೀಸ್ ಆಯುಕ್ತರು ಗೃಹ ಸಚಿವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
‘ನಮ್ಮ ರಾಜ್ಯದ ಗೃಹ ಸಚಿವರಿಗೆ ಸಾಮಾನ್ಯ ಪ್ರಜ್ಞೆ ಎಂಬುದೇ ಇಲ್ಲವಾಗಿದೆ. ಅವರು ಗೃಹ ಸಚಿವರಾಗಿ ಆ ಸ್ಥಾನದ ಪರವಾಗಿ ಮಾತನಾಡುತ್ತಿದ್ದಾರಾ, ಸರಕಾರದ ಪರವಾಗಿ ಮಾತನಾಡುತ್ತಾರಾ, ಅವರ ಪಕ್ಷ ಬಿಜೆಪಿ ಪರ ಮಾತನಾಡುತ್ತಾರಾ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ಅವರು ಸಮಾಜದಲ್ಲಿ ಅಶಾಂತಿ ಮೂಡಿಸಲು, ಸಾಮರಸ್ಯ ಕದಡಿಸಲು, ಜನರನ್ನು ತಪ್ಪುದಾರಿಗೆ ಎಳೆಯಲು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಸಿಎಎ ಹಾಗೂ ಇತರೆ ವಿಚಾರ ಸಂದರ್ಭದಲ್ಲಿ ಹೇಳಿಕೆ ಕೊಟ್ಟವರ ವಿರುದ್ಧ ಪ್ರಕರಣ ದಾಖಲಿಸಿದಂತೆ ಈಗ ಶಾಂತಿ ಕದಡಲು, ಜಾತಿ, ಧರ್ಮದ ನಡುವೆ ವೈಷಮ್ಯ ಮೂಡಿಸಿ, ಗಲಭೆಗೆ ಪ್ರಚೋದನೆ ನೀಡಲು ಪ್ರಯತ್ನಿಸಿದ ಗೃಹ ಸಚಿವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ತಿಳಿಸಿದರು.
ಜೆಜೆ ನಗರ ಕೊಲೆ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಇಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ವಿಚಾರದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಆದರೆ ಕೊಲೆ ಪ್ರಕರಣ ತನಿಖೆಯಾಗುವ ಮುನ್ನವೇ ಉರ್ದು ಬರುವುದಿಲ್ಲ ಎಂದು ಹೇಳಿದ್ದಕ್ಕೇ ಆ ಯುವಕನನ್ನು ಚುಚ್ಚಿ, ಚುಚ್ಚಿ ಕೊಂದಿದ್ದಾರೆ ಎಂದು ಗೃಹ ಸಚಿವರು ಮೊದಲು ಹೇಳಿಕೆ ನೀಡಿ, ನಂತರ ತಲೆ ಕೆರೆದುಕೊಂಡು ತಮ್ಮ ಹೇಳಿಕೆ ಬದಲಾಯಿಸಿದರು.‌ ಇನ್ನು ಇದೆಲ್ಲವೂ ಆದ ನಂತರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಹೋಗಿ ಅವರ ಕುಟುಂಬದವರಿಗೆ ಹೀಗೆ ಹೇಳಿ ಎಂದು ಹೇಳಿಕೊಡುತ್ತಾರೆ. ಇವರೆಲ್ಲರೂ ಕರ್ನಾಟಕ ರಾಜ್ಯವನ್ನು ಏನು ಮಾಡಲು ಹೊರಟಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಗೃಹ ಸಚಿವರು ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಪೊಲೀಸ್ ಅಧಿಕಾರಿಗಳನ್ನು ಎಂಜಲು ತಿನ್ನುವ ನಾಯಿಗಳು ಎಂದರು. ಮೈಸೂರು ರೇಪ್ ಪ್ರಕರಣದಲ್ಲಿ ಸಂಜೆ ನಂತರ ಆ ಯುವತಿ ಹೊರಗೆ ಯಾಕೆ ಹೋಗಬೇಕಿತ್ತು? ಎಂದರು, ನಂತರ ಕಾಂಗ್ರೆಸ್ ನವರು ನನ್ನ ರೇಪ್ ಮಾಡುತ್ತಿದ್ದಾರೆ ಎಂದೆಲ್ಲಾ ಬೇಜವಾಬ್ದಾರಿ ಹೇಳಿಕೆ ನೀಡಿದ್ದರು.

ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಜತೆಗೆ ರಾಜ್ಯದಲ್ಲಿ ಕೋಮು ದ್ವೇಷ ಹಬ್ಬಿಸುವುದನ್ನು ಬಿಟ್ಟು, ಶಾಂತಿ ಕಾಪಾಡಬೇಕು. ಬೇರೆ ರಾಜ್ಯದವರು ನಮ್ಮ ರಾಜ್ಯದ ಪರಿಸ್ಥಿತಿಯ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇಂತಹ ಸಚಿವರನ್ನು ಸರಕಾರದಲ್ಲಿ ಮುಂದುವರಿಸಲು ಮುಖ್ಯಮಂತ್ರಿಗಳಿಗೆ ಹೇಗೆ ಸಾಧ್ಯವಾಗುತ್ತಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ವಜಾಗೊಳಿಸಬೇಕಿದೆ. ಇವರು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದಾರೆ. ಇವರ ನಡೆ ಸಂವಿಧಾನ, ದೇಶದ ಕಾನೂನು ವ್ಯವಸ್ಥೆಗೆ ವಿರುದ್ಧವಾಗಿದೆ. ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇವರಿಗೆ ರಾಜಕೀಯವೇ ಮುಖ್ಯವಾಗಿದೆ. ಕಾನೂನು ಕಾಪಾಡಬೇಕಾದವರೇ ಈ ರೀತಿ ಹೇಳಿಕೆ ನೀಡಿದರೆ, ರಾಜ್ಯ ಸುಭದ್ರವಾಗಿ ಉಳಿಯಲು ಸಾಧ್ಯವೇ? ರಾಷ್ಟ್ರದ ಜನ ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಅಚ್ಚರಿಯಿಂದ ಎಲ್ಲ ಬೆಳವಣಿಗೆ ನೋಡುತ್ತಿದ್ದಾರೆ.
ವಿಜಯ ದಶಮಿ ಸಮಯದಲ್ಲಿ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳ ಸಮವಸ್ತ್ರ ತ್ಯಜಿಸಿ ಕೇಸರಿ ಬಟ್ಟೆ ಹಾಕಿಸಿದ್ದರು. ಇನ್ನು ಮುಖ್ಯಮಂತ್ರಿಗಳು ನೈತಿಕ ಪೊಲೀಸ್ ಗಿರಿಗೆ ಬೆಂಬಲ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆ, ಇಂತಹ ವಾತಾವರಣಕ್ಕೆ ಮುಖ್ಯಮಂತ್ರಿಗಳ ದೌರ್ಬಲ್ಯವೇ ಕಾರಣ. ನೈತಿಕ ಪೊಲೀಸ್ ಗಿರಿ, ಅವರದೇ ಪ್ರತ್ಯೇಕ ಕಾನೂನು ಇರುವುದಾದರೆ, ಪೊಲೀಸ್ ಇಲಾಖೆ, ಸಂವಿಧಾನ, ಕಾನೂನು ಏಕೆ ಇರಬೇಕು?
ಇನ್ನು ಮಂಡ್ಯ ಯುವತಿ ಮುಸ್ಕಾನ್ ವಿಚಾರವಾಗಿ ವಿದೇಶದ ಸಂಘಟನೆಯ ವ್ಯಕ್ತಿಯೊಬ್ಬ ಹೇಳಿಕೆ ನೀಡಿರುವುದನ್ನು ನಾವು ಖಂಡಿಸುತ್ತೇವೆ. ನಮ್ಮ ದೇಶದ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಬೇರೆ ಯಾರಿಗೂ ಅಧಿಕಾರವಿಲ್ಲ. ನಮ್ಮ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ವಿಚಾರದಲ್ಲಿ ಬೇರೆಯವರು ತಲೆ ಹಾಕಬೇರದು, ಇದಕ್ಕೆ ಸರ್ಕಾರ ಅವಕಾಶ ನೀಡಬಾರದು. ಈ ಸಂಘಟನೆಗಳನ್ನು ಈಗಾಗಲೇ ನಿಷೇಧಿಸಲಾಗಿದ್ದು, ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
11ರಂದು ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ:
ನಿರಂತರ ಬೆಲೆ ಏರಿಕೆ ವಿಚಾರವನ್ನು ಖಂಡಿಸಿ ಇದೇ ತಿಂಗಳು 11ರಂದು ಬೆಂಗಳೂರು ನಗರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳಗ್ಗೆ 11 ಗಂಟೆಗೆ ರಾಜ್ಯ ಮಟ್ಟದ ಪ್ರತಿಭಟನೆ ಮಾಡಲು ಚಿಂತನೆ ನಡೆಸಿದ್ದೇವೆ. ಆದರೆ ಹೈಕೋರ್ಟ್ ಪ್ರತಿಭಟನೆ ಮಾಡುವಂತಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಕಾನೂನು ಅವಕಾಶಗಳ ಬಗ್ಗೆ ಪರಿಶೀಲಿಸಲು ನಮ್ಮ ಕಾನೂನು ಘಟಕಕ್ಕೆ ಸೂಚಿಸಿದ್ದೇನೆ. ಇನ್ನು ಇದೇ 7, 8 ಅಥವಾ 9 ರಂದು ಯಾವುದಾದರೂ ಒಂದು ದಿನ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸುವಂತೆ ನಮ್ಮ ನಾಯಕರುಗಳಿಗೆ ಸೂಚನೆ ನೀಡಲಾಗಿತ್ತು.
ಪೊಲೀಸ್ ಅಧಿಕಾರಿಗಳು ಗೃಹ ಸಚಿವರ ವಿರುದ್ದ ಪ್ರಕರಣ ದಾಖಲಿಸದಿದ್ದರೆ ಕಾಂಗ್ರೆಸ್ ನಡೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಪೊಲೀಸರು ಸುಮೋಟೋ ಕೇಸ್ ದಾಖಲಿಸಲಿಲ್ಲ ಎಂದರೆ, ನಾವೇ ಪಕ್ಷದ ವತಿಯಿಂದ ದೂರು ಸಲ್ಲಿಸುತ್ತೇವೆ. ಜನರ ಮುಂದೆ ಹೋಗುತ್ತೇವೆ’ ಎಂದರು.
ಬಿಜೆಪಿ ಪರ ಸಂಘಟನೆಗಳು ದಿನನಿತ್ಯ ತರುತ್ತಿರುವ ಹೊಸ ವಿಚಾರಗಳು ರೈತರ ಬದುಕಿನ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತಿವೆಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಎಲ್ಲ ವಿಚಾರಗಳನ್ನು ಚುನಾವಣೆಗಾಗಿ ತರುತ್ತಿದ್ದಾರೆ. ಕೋಳಿ, ಕುರಿ ಸಾಕುವುದು ರೈತರು. ಇವರ ಹಲಾಲ್ ವಿಚಾರದಿಂದ ನಷ್ಟ ಅನುಭವಿಸಿದ್ದು ರೈತರು. ಇನ್ನು ಮುಸಲ್ಮಾನರಿಂದ ಮಾವು ಖರೀದಿ ಮಾಡಬಾರದು, ವ್ಯಾಪಾರಿಗಳಿಗೆ ರೈತರು ಮಾವು ಕೊಡಬಾರದು ಎಂದು ಹೇಳುತ್ತಿದ್ದಾರೆ. ಕೋವಿಡ್ ಬಂದಾಗ ಇಂತಹುದೇ ವಿಚಾರ ಎತ್ತಿದ ಪರಿಣಾಮ ರೈತರ ಮಾವುಗಳು ಜಮೀನಿನಲ್ಲೇ ಕೊಳೆತವು. ಮಾವಿನ ಕಟಾವು ಮಾಡುವಾಗ ಅದರ ರಸ ಬಿದ್ದರೆ ಗಾಯವಾಗುತ್ತದೆ. ಈಗಿನ ಕಾಲದಲ್ಲಿ ಮಾವಿನ ಬೆಳೆ ಎರಡು ವರ್ಷಕ್ಕೊಮ್ಮೆ ಬರುವುದೇ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಹೇಗೋ ಬಂದ ಬೆಳೆಯನ್ನು ರೈತ ಮಾರಾಟ ಮಾಡಿಕೊಳ್ಳಲು ನೋಡುತ್ತಿದ್ದಾನೆ. ಆದರೆ ರೈತನ ಬದುಕು ನಾಶ ಮಾಡಲು ಇವರು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ರೈತನಿಗೆ ರಸಗೊಬ್ಬರ ಬೆಲೆ ಹೆಚ್ಚಿಸಿ, ಕೀಟನಾಶಕದ ಮೇಲೆ ಜಿಎಸ್ ಟಿ ವಿಧಿಸಿ ದುಬಾರಿ ಮಾಡಿದ್ದಾರೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದವರು, ಅದನ್ನು ಅರ್ಧಕ್ಕೆ ಇಳಿಸಿದ್ದಾರೆ. ರೈತರು ಅಂತಿಮವಾಗಿ ಸಾಯುವಂತೆ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಇನ್ನು ಜಾತ್ರೆಗಳ ಸಮಯದಲ್ಲಿ ಜನ ಅವರಿಗೆ ಇಚ್ಛೆ ಬಂದವರ ಬಳಿ ವ್ಯಾಪಾರ ಮಾಡುತ್ತಾರೆ, ಹೋಗುತ್ತಾರೆ. ಯಾರು ಯಾವ ಜಾತಿಯವರು ಬಂದು ಮಾರಾಟ ಮಾಡಿದರು ಎಂದು ನೋಡುವುದಿಲ್ಲ. ಸುಮ್ಮನೆ ಎಲ್ಲರ ಹೊಟ್ಟೆ ಮೇಲೆ ಹೊಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಮುಂದೆ ಯುವಕರಿಗೆ ನಿರುದ್ಯೋಗ ಸಮಸ್ಯೆ ಯಾವ ರೀತಿ ಕಾಡಲಿದೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದರು.