ಮನೆ ರಾಜಕೀಯ ವರ್ಷದಲ್ಲಿ 2.50 ಲಕ್ಷ ಜನರಿಗೆ ಕೌಶಲ್ಯ ತರಬೇತಿ: ಅಶ್ವತ್ಥನಾರಾಯಣ

ವರ್ಷದಲ್ಲಿ 2.50 ಲಕ್ಷ ಜನರಿಗೆ ಕೌಶಲ್ಯ ತರಬೇತಿ: ಅಶ್ವತ್ಥನಾರಾಯಣ

0

ಮೈಸೂರು(Mysuru): ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಈ ವರ್ಷ 2.50 ಲಕ್ಷ ಜನರಿಗೆ ಕೌಶಲ್ಯ ತರಬೇತಿ ಕೊಟ್ಟು, ಎಲ್ಲರನ್ನೂ ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡಲಾಗುವುದು. ಜತೆಗೆ, ವಿದ್ಯಾರ್ಥಿಗಳಿಗೆ ಪ್ರೌಢಶಾಲೆಯ ಮಟ್ಟದಿಂದಲೇ ಉದ್ಯೋಗಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ(Dr.C.N.Ashwathnarayan) ಅವರು ಗುರುವಾರ ಹೇಳಿದ್ದಾರೆ.

ನಿಗಮದ ವತಿಯಿಂದ ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ `ಉದ್ಯೋಗ ಮೇಳ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, `ರಾಜ್ಯದಲ್ಲಿ ಉದ್ಯೋಗಗಳಿಗೇನೂ ಕೊರತೆ ಇಲ್ಲ. ಆದರೆ, ಈ ಉದ್ಯೋಗಗಳಿಗೆ ಬೇಕಾದ ಕೌಶಲಗಳನ್ನು ಕಲಿತಿರುವವರ ಕೊರತೆ ಇದೆ. ಆದ್ದರಿಂದಲೇ, ಕೌಶಲ್ಯಾಭಿವೃದ್ಧಿ ನಿಗಮದ ತರಬೇತಿಗೆ ಒಮ್ಮೆ ಹೆಸರು ನೋಂದಾಯಿಸಿಕೊಂಡವರು ಮಧ್ಯದಲ್ಲೇ ಬಿಟ್ಟು ಹೋಗದಂತೆ ನಿರಂತರ ಗಮನವಿಡಲು ಟ್ರ್ಯಾಕಿಂಗ್ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಲಾಗಿದೆ’ ಎಂದರು.

ಕರ್ನಾಟಕವು ಇಡೀ ದೇಶದಲ್ಲೇ ಉದ್ಯೋಗದ ದೃಷ್ಟಿಯಿಂದ ಭರವಸೆಯ ತಾಣವಾಗಿದೆ. ಇಲ್ಲಿರುವಂತಹ ಉದ್ಯಮ ಕಾರ್ಯ ಪರಿಸರವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇದಕ್ಕೆ ತಕ್ಕಂತೆ ಸರಕಾರವು `ಸಕಲರಿಗೂ ಉದ್ಯೋಗ’ ಎನ್ನುವ ನೀತಿಯನ್ನೇ ಹೊರತಂದಿದ್ದು, ಹಬ್ & ಸ್ಪೋಕ್ ಮಾದರಿಯನ್ನು ಅಳವಡಿಸಿಕೊಂಡಿದೆ. ಆದ್ದರಿಂದ ಯುವಜನರು ನಿರುದ್ಯೋಗದ ಭೀತಿಗೆ ಒಳಗಾಗಬೇಕಾಗಿಲ್ಲ. ಬದಲಿಗೆ, ಗುಣಮಟ್ಟದ ಶಿಕ್ಷಣ ಮತ್ತು ತಮ್ಮ ಕನಸಿನ ಉದ್ಯೋಗವನ್ನು ಪಡೆಯಲು ಅಗತ್ಯವಿರುವ ಆಧುನಿಕ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ನುಡಿದರು.

ಇಂದಿನ ಉದ್ಯೋಗ ಮೇಳಕ್ಕೆ 5 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, 84ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿವೆ. ಇವುಗಳ ಪೈಕಿ ಮೈಸೂರಿನಲ್ಲಿ ನೆಲೆಯೂರಿರುವವ ಸ್ಥಳೀಯ ಕಂಪನಿಗಳೇ ಹೆಚ್ಚಾಗಿವೆ. ಉದ್ಯೋಗದ ಅರ್ಹತೆ ಹೊಂದಿರುವ ಯುವಜನರು ಉದ್ಯೋಗಾರ್ಥವಾಗಿ ದೂರದ ಮಹಾನಗರಗಳಿಗೆ ವಲಸೆ ಹೋಗುವ ಪ್ರಮೇಯವೇ ಮುಂದಿನ ದಿನಗಳಲ್ಲಿ ಬರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸಂದರ್ಶನದಲ್ಲಿ ವಿಫಲರಾಗುವ ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯವಿರುವ ಹೆಚ್ಚಿನ ತರಬೇತಿ ಮತ್ತು ಇಂಗ್ಲಿಷ್ ಭಾಷಾ ಸಂವಹನ ಕೌಶಲ್ಯಕ್ಕೆ ಉಚಿತ ವ್ಯವಸ್ಥೆ ಮಾಡಲಾಗುವುದು. ಉದ್ಯೋಗಾಕಾಂಕ್ಷಿಗಳ ಅಗತ್ಯವನ್ನು ಪರಿಗಣಿಸಿಯೇ ವರ್ಚುಯಲ್ ರೂಪದಲ್ಲಿ ಕೂಡ ಉದ್ಯೋಗ ಮೇಳಗಳನ್ನು ಏರ್ಪಡಿಸಲಾಗುತ್ತಿದೆ. ನಮ್ಮ ಯುವಜನರು ಉದ್ಯೋಗವನ್ನು ಆಗ್ರಹಿಸುವ ವಿಷಯದಲ್ಲಿ ಕೀಳರಿಮೆಯನ್ನು ಬಿಟ್ಟು, ಹೊರಬರಬೇಕು ಎಂದು ಅಶ್ವತ್ಥನಾರಾಯಣ ನುಡಿದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಸುನಂದಾ, ಮುಕ್ತ ವಿವಿ ಕುಲಪತಿ ವಿದ್ಯಾಶಂಕರ್, ಶಾಸಕರಾದ ಎಸ್.ಎ.ರಾಮದಾಸ್ ಮತ್ತು ನಾಗೇಂದ್ರ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಮುಂತಾದವರು ಉಪಸ್ಥಿತರಿದ್ದರು.

ಮುಕ್ತ ವಿವಿ ಪ್ರಯೋಗಾಲಯ, ಸಭಾಂಗಣ ಉದ್ಘಾಟನೆ

ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯಲ್ಲಿ ನೂತನವಾಗಿ ನಿರ್ಮಿಸಿರುವ ರಸಾಯನಶಾಸ್ತ್ರ, ಭೂಗೋಳ, ಪರಿಸರ ವಿಜ್ಞಾನ, ಜೈವಿಕ ತಂತ್ರಜ್ಞಾನ, ಸೂಕ್ಷ್ಮ ಜೀವಶಾಸ್ತ್ರ, ಜೀವರಸಾಯನ ಶಾಸ್ತ್ರ, ಆಹಾರ ವಿಜ್ಞಾನ ಮತ್ತು ನ್ಯೂಟ್ರಿಷನ್, ಮನೋವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಪ್ರಯೋಗಾಲಯಗಳನ್ನು ಉದ್ಘಾಟಿಸಿದರು. ಇದಲ್ಲದೆ ನಳ ಸಭಾಂಗಣ, ಆಡಿಯೋ-ವಿಶುಯಲ್ ಸ್ಟುಡಿಯೋ, ಕೊಡಗು, ಬಾಗಲಕೋಟೆ ಮತ್ತು ಬೆಂಗಳೂರು-4 ಪ್ರಾದೇಶಿಕ ಕೇಂದ್ರಗಳನ್ನು ಕೂಡ ಅವರು ಲೋಕಾರ್ಪಣೆ ಮಾಡಿದರು.