ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ನಲ್ಲಿ ರೈತರಿಗೆ ಪೂರಕವಾದ ಅಂಶಗಳನ್ನು ಅಳವಡಿಸಬೇಕು. ರೈತರ ಸಾಲಮನ್ನಾ ಮಾಡಬೇಕು. ರೈತರಿಗೆ ನೀಡುವ ಸಾಲ ನೀತಿಯನ್ನು ಸರಳೀಕರಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಮೈಸೂರಿನ ಜಲದರ್ಶಿನಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಚೀನದಿಂದ ರೇಷ್ಮೆ ಆಮದು ಮಾಡಿಕೊಳ್ಳುತ್ತಿದೆ. ಮಲೇಷಿಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಇದರ ಪರಿಣಾಮ ದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೀನಾದಿಂದ ರೇಷ್ಮೆ ನೂಲು ಆಮದಿಗೆ ಅನುಮತಿ ನೀಡಿರುವುದರಿಂದ ರಾಜ್ಯದಲ್ಲಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದೆ. ಕ್ವಿಂಟಾಲ್ ಗೆ 12ಸಾವಿರ ಇದ್ದ ಕೊಬ್ಬರಿ ಬೆಲೆ 6ಸಾವಿರಕ್ಕೆ ಇಳಿಕೆಯಾಗಿದೆ. ದೇಶದ ರೈತರು ಕಂಗಾಲಾಗಿದ್ದು. ಸಂಸದರು ಏನು ನಿದ್ದೆ ಮಾಡುತ್ತಿದ್ದಾರಾ…? ಎಂದು ಕಿಡಿಕಾರಿದರು.
ವಿದೇಶದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳಿಗೆ ತೆರಿಗೆ ಹಾಕದೆ ಏಕೆ ವಿನಾಯಿತಿ ನೀಡಿದ್ದೀರಿ. ಕೇಂದ್ರ ಸರ್ಕಾರ ರೈತರ ಮೇಲೆ ಗದಾಪ್ರಹಾರ ಮಾಡುತ್ತಿದೆ. ಕ್ಯಾಸಿನೋ,ಆನ್ಲೈನ್ ಜೂಜಾಟ ರೇಸ್ ಗೆ ಯಾವುದೇ ತೆರಿಗೆ ವಿಧಿಸುವುದಿಲ್ಲ. ಆದರೆ ಜನಸಾಮಾನ್ಯರು ಕೊಂಡುಕೊಳ್ಳುವ ಅಗತ್ಯ ವಸ್ತುಗಳಿಗೆ ಜಿಎಸ್ ಟಿ ವಿಧಿಸುತ್ತಿದ್ದಾರೆ. ಮೋಜು ಮಸ್ತಿಗೆ ಇಲ್ಲದ ಜಿಎಸ್ ಟಿ ಬಡವರ ಮೇಲೆ ಏಕೆ ಹಾಕುತ್ತಿದ್ದೀರಿ ಎಂದು ಕುರುಬೂರು ಶಾಂತಕುಮಾರ್ ಪ್ರಶ್ನಿಸಿದರು.
ರಾಜ್ಯ ಸರ್ಕಾರ ಬಜೆಟ್ ಮಂಡನೆ ಹಿನ್ನಲೆ, ರೈತರ ಸಮಸ್ಯೆ ಕುರಿತು ಸರ್ಕಾರಕ್ಕೆ ಒಂದಷ್ಟು ಸಲಹೆ ನೀಡಿದ್ದೇವೆ.ಈಗಾಗಲೇ ಸರ್ಕಾರ ಕೂಡ ಕೃಷಿ ಕಾಯ್ದೆ ವಾಪಾಸ್ ಪಡೆಯಲು ತೀರ್ಮಾನ ಮಾಡಿದೆ. ಅದೇ ರೀತಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನ ಸಹ ರದ್ದುಗೊಳಿಸಬೇಕು. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಾಪಾಸ್ ಪಡೆಯಬಾರದು. ಈ ಹಿಂದೆ ರಾಜ್ಯದಲ್ಲಿ ಗೋವುಗಳ ಸಂತತಿ 14 ಲಕ್ಷ ಇತ್ತು. ಇದೀಗ 11ಲಕ್ಷಕ್ಕೆ ಇಳಿಕೆಯಾಗಿದೆ. ಹೀಗೆಯೇ ಗೋವುಗಳ ಸಂತತಿ ನಾಶವಾಗುತ್ತ ಹೋದರೆ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಎಲ್ಲಿಂದ ಬರುತ್ತೆ. ಇತ್ತ ಕೇಂದ್ರ ಸರ್ಕಾರ ಕೂಡ ಚೀನಾದಿಂದ ರೇಷ್ಮೆ, ಮಲೇಷಿಯಾದಿಂದ ತಾಳೆ ಎಣ್ಣೆ ಆಮದಿಗೆ ಮುಂದಾಗಿದೆ. ಈ ವಿಚಾರವಾಗಿ ರೈತರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ತುಮಕೂರು, ರಾಮನಗರ ಬೃಹತ್ ರೈತರ ಸಮಾವೇಶವನ್ನು ಆಯೋಜನೆ ಮಾಡುವ ಮೂಲಕ ರೈತರಿಗೆ ಜಾಗೃತಿ ಮೂಡಿಸುತ್ತೇವೆ ಎಂದು ತಿಳಿಸಿದರು.
ರೈತರ ಬೆಳೆಗಳಿಗೆ ಬೆಂಬಲ ಬೆಲೆಯನ್ನ ನಿಗದಿ ಮಾಡಬೇಕು. ರೈತರ ಅಭಿವೃದ್ಧಿಗೆ ಸಹಕಾರ ನೀಡುವ ಕಾಯ್ದೆಗಳನ್ನ ಸರ್ಕಾರಗಳು ಜಾರಿ ಮಾಡಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.