ವಿಜಯಪುರ: ವಿಜಯಪುರದಲ್ಲಿ ಇಂದು ನಸುಕಿನಲ್ಲಿ ಭೂಕಂಪನವಾಗಿದ್ದು, ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.
ಗುರುವಾರ ನಸುಕಿನ 1.38 ರ ಸಮಯದಲ್ಲಿ 3.4 ರಷ್ಟು ತೀವ್ರತೆ ಹೊಂದಿದ್ದ ಭೂಕಂಪನ ಸಂಭವಿಸಿದೆ. ಜನರು ಗಾಢ ನಿದ್ರೆಯಲ್ಲಿದ್ದ ಕಾರಣ ಭೂಕಂಪನದ ಅನುಭವ ಬಹುತೇಕರಿಗೆ ಆಗಿಲ್ಲ. ಹೀಗಾಗಿ ಜನರು ಈ ಹಿಂದಿನ ಘಟನೆಗಳಂತೆ ಆತಂಕಗೊಂಡು ಮನೆಯಿಂದ ಹೊರಗೆ ಓಡಿ ಬಂದಿಲ್ಲ.
ವಿಜಯಪುರ ನಗರ, ಐನಾಪುರ, ಕತಕನಹಳ್ಳಿ, ಹಿಟ್ನಳ್ಳಿ ಸೇರಿದಂತೆ ಸುತ್ತಲಿನ ಬಹುತೇಕ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಗಿದೆ.
ವಿಜಯಪುರ ನಗರದ ಹೊರ ವಲಯದಲ್ಲಿರುವ ಐನಾಪುರ ಗ್ರಾಮದ ಪರಿಸರದ ಭೂಮಿಯ 5 ಕಿ.ಮೀ. ಆಳದಲ್ಲಿ ಭೂಕಂಪನದ ಬಿಂದು ಕೇಂದ್ರೀಕೃತವಾಗಿದೆ.
ಭೂಕಂಪನ ಘಟನೆ ರಿಕ್ಟರ್ ಮಾಪನ ಕೇಂದ್ರದಲ್ಲಿ ದಾಖಲಾಗಿರುವುದನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣ ಕೇಂದ್ರ (ಕೆ.ಎಸ್.ಎನ್.ಡಿ.ಎಂ.ಸಿ) ದೃಢಪಡಿಸಿದ್ದಾಗಿ ಜಿಲ್ಲಾಡಳಿತ ಖಚಿತಪಡಿಸಿದೆ.