ಮೈಸೂರು : ಕಬ್ಬಿಣದ ಕುರ್ಪಿಯಿಂದ ತಲೆಗೆ ಹೊಡೆದು ಪತ್ನಿ ಹತ್ಯೆಗೈದಿದ್ದ ಪತಿಗೆ ಮೈಸೂರು ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.
ಮೈಸೂರು ತಾಲೂಕು ಜಯಪುರ ಹೋಬಳಿ, ನಗರ ಹಳ್ಳಿ ಗ್ರಾಮದ ರಮೇಶ ನಾಯಕ ಶಿಕ್ಷೆಗೊಳಗಾದವನಾಗಿದ್ದು, ಈತ ಸೈಕಲ್ ನಲ್ಲಿ ಹೂ ಮಾರಿಕೊಂಡಿದ್ದ. ಕುಡಿಯುವ ಚಟಕ್ಕೆ ಬಲಿಯಾಗಿ ನಿತ್ಯ ಹೆಂಡತಿ ಕುಮಾರಿ ಹಾಗೂ ಮಕ್ಕಳಿಗೆ ಹೊಡೆದು ಹಿಂಸೆ ನೀಡುತ್ತಿದ್ದ.
2021ರ ಫೆಬ್ರವರಿ 25ರಂದು ಮುಂಜಾನೆ ಮನೆಯಲ್ಲಿದ್ದ ಕಬ್ಬಿಣದ ಅಲ್ಲೆ (ಕುರ್ಪಿ )ಇಂದ ಕುಮಾರಿಯಾ ತಲೆಗೆ ಹೊಡೆದು ಕೊಲೆ ಮಾಡಿದ್ದ. ರಮೇಶ ನಾಯಕನ ವಿರುದ್ಧ ಪ್ರಕರಣ ದಾಖಲಿಸಿದ್ದ ಜಯಪುರ ಠಾಣೆ ಪೊಲೀಸರು, ವಿಚಾರ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗುರುರಾಜ್ ಸೋಮಕ್ಕಲವರ್ ಅವರು ಸಾಕ್ಷಾಧಾರಗಳಿಂದ ಕೃತ್ಯ ಸಾಬೀತದ ಹಿನ್ನೆಲೆಯಲ್ಲಿ ಕಲಂ 498 (ಎ) ಅಡಿ ಆರೋಪಿಗೆ 2 ವರ್ಷ ಕಠಿಣ ಶಿಕ್ಷೆ, 1000ರೂ.ದಂಡ, ಕಲಂ 302 ಅಡಿ ಜೀವಾವಧಿ ಶಿಕ್ಷೆ ಹಾಗೂ 5000ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಸರ್ಕಾರದ ಪರವಾಗಿ ಐದನೇ ಅಧಿಕ ಸರ್ಕಾರಿ ಅಭಿಯೋಜಕ ಎಂ.ಎಸ್. ಮಂಜುಳಾ ಅವರು ವಾದ ಮಂಡಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಜಯಪುರ ಸರ್ಕಲ್ ಇನ್ಸ್ಪೆಕ್ಟರ್ ಎಂ.ಮಹೇಶ್, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.