ಮನೆ ಆಟೋ ಮೊಬೈಲ್ ಮಾರುತಿ ಸುಜುಕಿ ಇನ್ವಿಕ್ಟೊ ಎಂಪಿವಿ ಬಿಡುಗಡೆ

ಮಾರುತಿ ಸುಜುಕಿ ಇನ್ವಿಕ್ಟೊ ಎಂಪಿವಿ ಬಿಡುಗಡೆ

0

ದೇಶದ ಅತಿದೊಡ್ಡ ಕಾರು ಉತ್ಪಾದನೆ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಹೊಚ್ಚ ಹೊಸ ಇನ್ವಿಕ್ಟೊ ಎಂಪಿವಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 24.79 ಲಕ್ಷ ಆರಂಭಿಕ ಬೆಲೆ ಹೊಂದಿದೆ.

Join Our Whatsapp Group

ಹೊಸ ಇನ್ವಿಕ್ಟೊ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಜಿಟಾ ಪ್ಲಸ್(7 ಸೀಟರ್) ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ. 24.79 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಜಿಟಾ ಪ್ಲಸ್(8 ಸೀಟರ್) ವೆರಿಯೆಂಟ್ ರೂ. 24.84 ಲಕ್ಷ ಮತ್ತು ಆಲ್ಫಾ ಪ್ಲಸ್(7 ಸೀಟರ್) ವೆರಿಯೆಂಟ್ ರೂ. 28.42 ಲಕ್ಷ ಬೆಲೆ ಪಡೆದುಕೊಂಡಿದ್ದು, ಇದು ಟೊಯೊಟಾ ಕಂಪನಿ ಜೊತೆಗಿನ ಪಾಲುದಾರಿಕೆ ಯೋಜನೆ ಅಡಿ ಮಾರಾಟಗೊಳ್ಳಲಿದೆ.

ಮಾರುತಿ ಸುಜುಕಿ ಕಂಪನಿಯು ಹೊಸ ಇನ್ವಿಕ್ಟೊ ಕಾರನ್ನು 2.0 ಲೀಟರ್ ಪೆಟ್ರೋಲ್ ಹೈಬ್ರಿಡ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆ ಮಾಡಿದ್ದು, ಇದು ಇ-ಸಿವಿಟಿ ಗೇರ್ ಬಾಕ್ಸ್ ನೊಂದಿಗೆ 184 ಹಾರ್ಸ್ ಪವರ್ ಉತ್ಪಾದಿಸುತ್ತಿದೆ. ಈ ಮೂಲಕ ಹೊಸ ಕಾರು ಪ್ರತಿ ಲೀಟರ್ ಪೆಟ್ರೋಲ್ ಗೆ ಎಲೆಕ್ಟ್ರಿಕ್ ಮೋಡ್ ಸಂಯೋಜನೆಯೊಂದಿಗೆ ಬರೋಬ್ಬರಿ 23.24 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಹೊಸ ಇನ್ವಿಕ್ಟೊ ಕಾರಿನ ವಿನ್ಯಾಸವು ಮೇಲ್ನೊಟಕ್ಕೆ ಹೈಕ್ರಾಸ್ ಮಾದರಿಯೆಂತೆ ಕಂಡರೂ ಕೂಡಾ ಮುಂಭಾಗದಲ್ಲಿನ ಕ್ರೊಮ್ ಸ್ಲಾಟ್ ಸ್ಪೋರ್ಟಿ ಗ್ರಿಲ್, ಎಲ್ ಇಡಿ ಹೆಡ್ ಲೈಟ್ಸ್, ಸುಜುಕಿ ಬ್ಯಾಡ್ಜಿಂಗ್, 17 ಇಂಚಿನ ಅಲಾಯ್ ವ್ಹೀಲ್ ಮತ್ತು ಸ್ಪೋರ್ಟಿಯಾಗಿರುವ ಟೈಲ್ ಗೇಟ್ ಪ್ರಮುಖ ಆಕರ್ಷಣೆಯಾಗಿವೆ. ಐಷಾರಾಮಿ ಅನುಭವ ನೀಡುವ ಲೆದರ್ ಆಸನಗಳು, ಮುಂಭಾಗದ ಆಸನಗಳಲ್ಲಿ ವೆಂಟಿಲೆಷನ್ ಸಿಸ್ಟಂ, 8 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಆಸನ, ಮಲ್ಟಿ ಲೆಯರ್ಡ್ ಡ್ಯಾಶ್ ಬೋರ್ಡ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸರ್ಪೊಟ್ ಮಾಡಬಹುದಾದ 10.1 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, ಪನೊರಮಿಕ್ ಸನ್ ರೂಫ್, ಆ್ಯಂಬಿಯೆಂಟ್ ಲೈಟಿಂಗ್ಸ್, ಪ್ರೀಮಿಯಂ ಆಡಿಯೋ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಪವರ್ಡ್ ಟೈಲ್ ಗೇಟ್, ವೈರ್ ಲೆಸ್ ಫೋನ್ ಚಾರ್ಜರ್ ಮತ್ತು ಸುಜುಕಿ ಕನೆಕ್ಟ್ ಸೂಟ್ ಜೋಡಿಸಲಾಗಿದೆ.

ಮಾರುತಿ ಸುಜುಕಿ ಕಂಪನಿ ಇನ್ವಿಕ್ಟೊ ಕಾರಿನಲ್ಲಿ ಹೈಕ್ರಾಸ್ ಮಾದರಿಯಲ್ಲಿರುವ ಹಲವಾರು ಪ್ರೀಮಿಯಂ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಿದ್ದು, ಇದರಲ್ಲಿ ಸ್ಟ್ಯಾಂಡರ್ಡ್ ಆಗಿ ಆರು ಏರ್ ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಅಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದೆ.

ಹೈಕ್ರಾಸ್ ಟಾಪ್ ಎಂಡ್ ಮಾದರಿಯಲ್ಲಿ ಎಡಿಎಎಸ್ ಸೌಲಭ್ಯವಿದ್ದರೂ ಇನ್ವಿಕ್ಟೊ ಕಾರಿನ ಬೆಲೆ ಇಳಿಕೆಗಾಗಿ ಎಡಿಎಎಸ್ ಕೈಬಿಡಲಾಗಿದ್ದು, ಇನ್ವಿಕ್ಟೊ ಹೈಎಂಡ್ ಮಾದರಿಯ ಹೈಕ್ರಾಸ್ ಹೈ ಎಂಡ್ ಮಾದರಿಗಿಂತ ರೂ. 1.50 ಲಕ್ಷದಷ್ಟು ಕಡಿಮೆ ಬೆಲೆ ಹೊಂದಿದೆ. ಇದು ಮಾರುತಿ ಸುಜುಕಿ ನೆಕ್ಸಾ ಶೋರೂಂಗಳ ಮೂಲಕ ಮಾರಾಟಗೊಳ್ಳಲಿದೆ.