ಬೆಂಗಳೂರು(Bengaluru): ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕ ಬೆದರಿಕೆಯ ಇ-ಮೇಲ್(E-mail) ಸಂದೇಶ ಬಂದಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಖುದ್ದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಸೂಳಕುಂಟೆಯ ಡೆಲ್ಲಿ ಪಬ್ಲಿಕ್ ಸ್ಕೂಲ್ ಸೇರಿದಂತೆ ನಾಲ್ಕು ಶಾಲೆಗಳನ್ನು ಗುರಿಯಾಗಿಟ್ಟುಕೊಂಡು ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇಮೇಲ್ ಬಂದಿದ್ದು, ಪೊಲೀಸರು ಕೂಲಂಕಷವಾಗಿ ತನಿಖೆ ಮಾಡುತ್ತಿದ್ದಾರೆ. ಇಮೇಲ್ ಆಧರಿಸಿ ಹೆಣ್ಣೂರು ಮತ್ತು ಹೆಬ್ಬುಗೋಡಿಯ ಖಾಸಗಿ ಶಾಲೆಗಳಿಗೆ ಬಾಂಬ್ ಸ್ಕ್ವಾಡ್, ಶ್ವಾನ ದಳ ಮೂಲಕ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಶಾಲೆಗಳಿಂದ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಲಾಗಿದೆ ಎಂದು ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
ಇದುವರೆಗೆ ಶಾಲೆಗಳಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಮಾಹಿತಿ, ಸುಳಿವು ಸಿಕ್ಕಿಲ್ಲ, ಹಾಗೆಂದು ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದಿದ್ದಾರೆ.