ಮನೆ ರಾಜ್ಯ ಮೊದಲ ಬಜೆಟ್ ನಲ್ಲೇ ಆರ್ಥಿಕ ಶಿಸ್ತಿಗೆ ತಿಲಾಂಜಲಿ; ರಾಜ್ಯವನ್ನ ಆರ್ಥಿಕ ದಿವಾಳಿಯತ್ತ ಕೊಂಡೊಯ್ಯಲು ಸಿದ್ದರಾಮಯ್ಯನವರ ದಿಟ್ಟ...

ಮೊದಲ ಬಜೆಟ್ ನಲ್ಲೇ ಆರ್ಥಿಕ ಶಿಸ್ತಿಗೆ ತಿಲಾಂಜಲಿ; ರಾಜ್ಯವನ್ನ ಆರ್ಥಿಕ ದಿವಾಳಿಯತ್ತ ಕೊಂಡೊಯ್ಯಲು ಸಿದ್ದರಾಮಯ್ಯನವರ ದಿಟ್ಟ ಹೆಜ್ಜೆ: ಡಾ.ಸುಧಾಕರ್ ವ್ಯಂಗ್ಯ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌, ಬಯಲುಸೀಮೆಯ ಜಿಲ್ಲೆಗಳ ವಿಚಾರದಲ್ಲಿ ತೀವ್ರ ಅಸಡ್ಡೆ ಹೊಂದಿದ್ದು, ನಾನು ಕೂಡ ಸೇರಿದಂತೆ ಈ ಭಾಗದ ಜನರಿಗೆ ಬಹಳ ನಿರಾಶೆಯಾಗಿದೆ. ಬಯಲುಸೀಮೆಯ ಯಾವುದೇ ಅಭಿವೃದ್ಧಿಯ ಗ್ಯಾರಂಟಿಯನ್ನು ಸರ್ಕಾರ ನೀಡಿಲ್ಲ. ಅಲ್ಲದೆ ಜನರಿಗೆ ಕೊಟ್ಟ ಮಾತಿನಂತೆ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಅಸಹಾಯಕರಾಗಿರುವ ಸಿಎಂ ಸಿದ್ದರಾಮಯ್ಯನವರು ತಮ್ಮ ವೈಫಲ್ಯವನ್ನು ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

Join Our Whatsapp Group

ಬಜೆಟ್‌ ಕುರಿತು ಅವರು ವ್ಯಕ್ತಪಡಿಸಿರುವ ಅಭಿಪ್ರಾಯ:

ಚಿಕ್ಕಬಳ್ಳಾಪುರ ಹಾಗೂ ಕೋಲಾರದ ನೀರಿನ ಬವಣೆ ನೀಗಿಸಲು ಎತ್ತಿನಹೊಳೆ ಯೋಜನೆ ಜಾರಿಗೆ ಜನರು ಕಾಯುತ್ತಿದ್ದಾರೆ. ಈ ಯೋಜನೆಯ ಭೂ ಸ್ವಾಧೀನದ ಬಗ್ಗೆ ಹೇಳಿದ್ದಾರೆಯೇ ಹೊರತು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.  ಆದ್ದರಿಂದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಈ ಯೋಜನೆ ಎರಡು ವರ್ಷಗಳಲ್ಲಿ ಅಲ್ಲ, ಐದು ವರ್ಷಗಳಲ್ಲೂ ಜಾರಿಯಾಗುವುದು ಅನುಮಾನ.

ಚಿಕ್ಕಬಳ್ಳಾಪುರದಲ್ಲಿ ರೇಷ್ಮೆ ಹಾಗೂ ಹೂ ಬೆಳೆಗಾರರ ಅಭ್ಯುದಯಕ್ಕೆ ಕಾಂಗ್ರೆಸ್‌ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ. ವಿಶ್ವದರ್ಜೆಯ ಹೂ ಮಾರುಕಟ್ಟೆ ನಿರ್ಮಿಸುವ ಯೋಜನೆಯನ್ನು ಬಿಜೆಪಿ ಸರ್ಕಾರ ಘೋಷಣೆ ಮಾಡಿ 100 ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಇದರ ಜಾರಿ ಬಗ್ಗೆ ಬಜೆಟ್ ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಕೆ.ಸಿ.ವ್ಯಾಲಿ, ಹೆಚ್.ಎನ್.ವ್ಯಾಲಿ ಯೋಜನೆಯಡಿ ತೃತೀಯ ಹಂತದ ಶುದ್ಧೀಕರಣ ಕೈಗೊಳಲು ಬಜೆಟ್ ನಲ್ಲಿ ಹಣ ಮೀಸಲಿಟ್ಟಿಲ್ಲ

ಇವುಗಳ ಜೊತೆಗೆ ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಕೈಗಾರಿಕಾಭಿವೃದ್ಧಿ, ನೀರಾವರಿ, ಕೃಷಿ ಸುಧಾರಣೆ ಸೇರಿದಂತೆ ಯಾವುದೇ ಬಗೆಯ ಯೋಜನೆಗಳನ್ನು ಸಿದ್ದರಾಮಯ್ಯನವರು ನೀಡಿಲ್ಲ. ಈ ಭಾಗದ ಜನರು ಕಾಂಗ್ರೆಸ್‌ ನೆಚ್ಚಿಕೊಂಡು ಮತ ನೀಡಿದ್ದು, ಅದಕ್ಕೆ ತಕ್ಕಂತೆ ನಿರೀಕ್ಷೆಗಳನ್ನು ನಿಜ ಮಾಡುವ ಒಂದಂಶದ ಕೆಲಸವನ್ನೂ ಸರ್ಕಾರ ಮಾಡಿಲ್ಲ.

ಕೋವಿಡ್‌ ಸಂಕಷ್ಟ ಪರಿಹರಿಸಿದ್ದೇ ಕೇಂದ್ರ ಸರ್ಕಾರ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಇಲ್ಲದಿದ್ದರೆ, ಕೋವಿಡ್ ಸಂಕಷ್ಟದಿಂದ ಇಷ್ಟು ಬೇಗ ಹೊರಗೆ ಬರಲು ಸಾಧ್ಯವಾಗುತ್ತಿರಲಿಲ್ಲ. 2023 ರ ಮಾರ್ಚ್‌ವರೆಗೆ, 9.88 ಕೋಟಿ ಡೋಸ್‌ ಕೋವಿಡ್‌ ಲಸಿಕೆಗಳನ್ನು ಕರ್ನಾಟಕಕ್ಕೆ ಉಚಿತವಾಗಿ ಕೇಂದ್ರ ಸರ್ಕಾರ ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 2,141 ಕೋಟಿ ರೂ. ಖರ್ಚು ಮಾಡಿದೆ.

ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 80 ಕೋಟಿ ಜನರಿಗೆ ಸತತ ಎರಡು ವರ್ಷಗಳ ಕಾಲ ತಿಂಗಳಿಗೆ 10ಕೆಜಿ ಆಹಾರ ಧಾನ್ಯ ನೀಡಲಾಗಿತ್ತು. ಆಯುಷ್ಮಾನ್ ಭಾರತ್ ಯೋಜನೆಯಡಿ ಕೋಟ್ಯಂತರ ಜನರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಇವೆಲ್ಲ ಇಲ್ಲದಿದ್ದರೆ ನಮ್ಮ ದೇಶ ಕೊವಿಡ್ ಪ್ರಮಾಡದಿಂದ ಇಷ್ಟು ಬೇಗ ಹೊರಬಂದು ಸಹಜ ಸ್ಥಿತಿಗೆ ಮರಳಲು ಸಾಧ್ಯವಾಗುತ್ತಿತ್ತೆ? ಮುಖ್ಯಮಂತ್ರಿ ಸಿದ್ದಮಯ್ಯನವರು ಇವನ್ನೆಲ್ಲ ಪ್ರಶಂಸೆ ಮಾಡುವ ಮುತ್ಸದ್ದಿತನ ಪ್ರದರ್ಶನ ಮಾಡಬೇಕಿತ್ತು. ಅದು ಬಿಟ್ಟು ವಿನಾಕಾರಣ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ.

ಈ ಎಲ್ಲಾ ವಿಚಾರಗಳ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸಿರುವ ಸಿಎಂ ಸಿದ್ದರಾಮಯ್ಯನವರ, ಬಿಜೆಪಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಹಿಂದಿನ ಸರ್ಕಾರದ ಮೇಲೆ, ಕೇಂದ್ರ ಸರ್ಕಾರದ ಮೇಲೆ ಗೂಬೇ ಕೂರಿಸುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ. ಸಿದ್ದರಾಮಯ್ಯನವರು ವಿನಾ ಕಾರಣ ಪದೇ ಪದೆ ಮೋದಿ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದನ್ನು ಮೊದಲು ನಿಲ್ಲಿಸಬೇಕು.

ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎಂಬಂತೆ, ಸಾವಿರ ಸುಳ್ಳು ಗ್ಯಾರಂಟಿಗಳನ್ನು ನೀಡಿ ಅಧಿಕಾರ ಹಿಡಿ ಎನ್ನುವ ರೀತಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 10 ವರ್ಷ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಶಿಕ್ಷಣ ನೀತಿ ತರಲಿಲ್ಲ. ಆದರೆ ಪ್ರಧಾನಿ ಮೋದಿಯವರು ತಂದ ಶಿಕ್ಷಣ ನೀತಿಯನ್ನು ರದ್ದು ಮಾಡಲಾಗುತ್ತಿದೆ. ಇದು ಕಾಂಗ್ರೆಸ್‌ನ ಕೀಳು ರಾಜಕೀಯ. ಈ ನೀತಿಯ ಬಗ್ಗೆ ಅನೇಕ ಶಿಕ್ಷಣ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದು ರಿವರ್ಸ್‌ ಮಾಡುವ ಸರ್ಕಾರವಾಗಿದ್ದು, ಅಭಿವೃದ್ಧಿಯೂ ರಿವರ್ಸ್‌ ಗೇರ್‌ನಲ್ಲಿ ಹಿಂದಕ್ಕೆ ಚಲಿಸಿ ಪ್ರಗತಿ ಕುಂಠಿತವಾಗಲಿದೆ.