ಮನೆ ರಾಜಕೀಯ ಎಲ್ಲಾ ವರ್ಗದ ಜನತೆಗೆ ಬಜೆಟ್ ನಲ್ಲಿ ಒಳಿತು ಮಾಡಲಾಗಿದೆ: ಹೆಚ್.ವಿಶ್ವನಾಥ್

ಎಲ್ಲಾ ವರ್ಗದ ಜನತೆಗೆ ಬಜೆಟ್ ನಲ್ಲಿ ಒಳಿತು ಮಾಡಲಾಗಿದೆ: ಹೆಚ್.ವಿಶ್ವನಾಥ್

0

ಮೈಸೂರು: ಯಾವುದೇ ಸರ್ಕಾರಗಳು ಬಂದರೂ ಅಕ್ಷರ, ಅನ್ನ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಅದೇ ರೀತಿ ಸಿಎಂ ಸಿದ್ದರಾಮಯ್ಯನವರು ಈ 3ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಎಲ್ಲಾ ವರ್ಗದ ಜನತೆಗೆ ಬಜೆಟ್ ನಲ್ಲಿ ಒಳಿತು ಮಾಡಲಾಗಿದೆ ಎಂದು  ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಗೆ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Join Our Whatsapp Group

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡ ಪುಸ್ತಕ ಖರೀದಿಗೆ ಯಾವುದೇ ಸರ್ಕಾರಗಳು ಹಣ ನೀಡಿರಲಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕನ್ನಡ ಪುಸ್ತಕ ಖರೀದಿಗೆ ಹಣ ನೀಡಿದೆ. ಈ ಸರ್ಕಾರ ಅಚ್ಚ ಕನ್ನಡದ ಸರ್ಕಾರ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶೇಷವಾಗಿ ಯಾವ ರಾಜ್ಯಗಳು ನೀಡದ 5ಗ್ಯಾರಂಟಿ ಯೋಜನೆಗಳನ್ನ ಸರ್ಕಾರ ನೀಡಿದೆ. 5ಗ್ಯಾರಂಟಿ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿಟ್ಟಿದ್ದಾರೆ. ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಗಳು ಜನಪರ ಕಾರ್ಯಕ್ರಮಗಳು. ಈ ಯೋಜನೆಗಳಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಈ ಎಲ್ಲಾ ಯೋಜನೆಗಳನ್ನ ಸಮರ್ಪಕವಾಗಿ ಜಾರಿ ಮಾಡಬೇಕು. ಫಲಾನುಭವಿಗಳಿಗೆ ಈ ಯೋಜನೆಯನ್ನ ತಲುಪಿಸಬೇಕು ಎಂದು ಹೆಚ್.ವಿಶ್ವನಾಥ್ ಹೇಳಿದರು.

ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನ ಟೀಕೆ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಏರಿಕೆಯಾದಾಗ ದೇಶಕ್ಕೋಸ್ಕರ ನೀಡುತ್ತೇವೆ ಎಂದಿದ್ದರು. ಅದೇ ರೀತಿ ಉಳ್ಳವರು ನಮಗೆ ಈ ಯೋಜನೆ ಬೇಡ ಅಂತ ಹೇಳಿ. ಯೋಜನೆಗಳನ್ನ ಜಾರಿ ಮಾಡುವುದು ಮುಖ್ಯವಲ್ಲ ಅದನ್ನ ಅನುಷ್ಠಾನಕ್ಕೆ ತರುವುದು ಕೂಡ ಒಂದು ಚಾಲೆಂಜ್. ಸಿಎಂ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಗ್ಯಾರಂಟಿಗಳನ್ನ ಟೀಕೆ ಮಾಡುತ್ತಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್, ಒಬ್ಬ ವಿಪಕ್ಷ ನಾಯಕನಿಲ್ಲದೆ ಬಜೆಟ್ ಮಂಡನೆಯಾಗಿದೆ ಎಂದರೆ ಇದು ನಾಚಿಕೆಯ ಸಂಗತಿ. ಇಂದು ಬಿಜೆಪಿಯಲ್ಲಿ ಅರಾಜಕತೆ ಇದೆ ಎಂದು ವಾಗ್ದಾಳಿ ನಡೆಸಿದರು.