ಮನೆ ಸುದ್ದಿ ಜಾಲ ಎನ್‌ಡಿಎ ಮೈತ್ರಿ ಕೂಟದ ಸಭೆ ನಡೆಸಲು ನಿರ್ಧಾರ

ಎನ್‌ಡಿಎ ಮೈತ್ರಿ ಕೂಟದ ಸಭೆ ನಡೆಸಲು ನಿರ್ಧಾರ

0

ಹೊಸ ದಿಲ್ಲಿ: ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳ ಒಕ್ಕೂಟದ ಎರಡನೇ ಸಭೆ ಜುಲೈ 17, 18 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇತ್ತ ಎನ್‌ಡಿಎ ಮೈತ್ರಿ ಕೂಟ ಕೂಡಾ ತನ್ನ ಮೈತ್ರಿ ಪಕ್ಷಗಳ ಸಭೆಯನ್ನು ಜುಲೈ 18 ರಂದೇ ಆಯೋಜಿಸಿದೆ.

Join Our Whatsapp Group

ಈ ಸಭೆಯಲ್ಲಿ ಅಜಿತ್ ಪವಾರ್ ಸಾರಥ್ಯದ ಎನ್‌ಸಿಪಿ ನಾಯಕರ ಬಣ ಹಾಗೂ ಏಕನಾಥ ಶಿಂಧೆ ನಾಯಕತ್ವದ ಶಿವಸೇನೆ ಬಣಗಳು ಭಾಗವಹಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಈ ಮೂಲಕ ವಿಪಕ್ಷ ಒಕ್ಕೂಟಕ್ಕೆ ಎನ್‌ಡಿಎ ಮೈತ್ರಿಕೂಟ ತಿರುಗೇಟು ನೀಡಲು ಸಿದ್ದತೆ ನಡೆಸಿದೆ. ಇನ್ನೊಂದೆಡೆ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಜೊತೆಗೂ ಬಿಜೆಪಿ ನಾಯಕರು ಮಾತುಕತೆ ನಡೆಸುತ್ತಿದ್ದು, ಎನ್‌ಡಿಎ ಮೈತ್ರಿ ಕೂಟಕ್ಕೆ ಎಲ್‌ಜೆಪಿ ಮರು ಸೇರ್ಪಡೆ ಆಗೋದು ಬಹುತೇಕ ಖಚಿತವಾಗಿದೆ.

ಇದಲ್ಲದೆ ಇನ್ನೂ ಹಲವು ರಾಜಕೀಯ ಪಕ್ಷಗಳನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಸೆಳೆಯಲು ಬಿಜೆಪಿ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ. ಎಚ್. ಡಿ. ದೇವೇಗೌಡ ಸಾರಥ್ಯದ ಜೆಡಿಎಸ್‌, ಓ ಪ್ರಕಾಶ್ ರಾಜ್‌ಭರ್ ಅವರ ಒಬಿಸಿ ಸಂಘಟನೆ, ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿ ಹಾಗೂ ಮುಕೇಶ್ ಸಹಾನಿ ನೇತೃತ್ವದ ವಿಕಾಸಶೀಲ ಇನ್ಸಾನ್ ಪಕ್ಷಗಳನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಆಹ್ವಾನಿಸಲು ಬಿಜೆಪಿ ನಾಯಕರು ‘ತಾತ್ವಿಕ’ ಸಮ್ಮತಿ ನೀಡಿದ್ಧಾರೆ.

ಅಜಿತ್ ಪಾಸ್ವಾನ್ ಬಣದ ಎನ್‌ಸಿಪಿ ಪರವಾಗಿ ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್ ಭಾಗಿಯಾಗುವ ಸಾಧ್ಯತೆ ಇದೆ. ಎನ್‌ಸಿಪಿ ಹಾಗೂ ಶಿವಸೇನೆಯ ಶಿಂಧೆ ಬಣ ಎನ್‌ಡಿಎ ಕೈ ಹಿಡಿದಿರೋದು ಈ ಮೈತ್ರಿಕೂಟದ ಪಾಲಿಗೆ ತುಂಬಾನೆ ಮಹತ್ವದ್ದಾಗಿದೆ. ಏಕೆಂದರೆ, ಮಹಾರಾಷ್ಟ್ರದಲ್ಲಿ 48 ಲೋಕಸಭಾ ಸ್ಥಾನಗಳಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸಂಖ್ಯಾ ಬಲಕ್ಕೆ ಮಹತ್ವದ ಕೊಡುಗೆ ನೀಡಬಲ್ಲದು.

ಇನ್ನು ಬಿಹಾರ ರಾಜ್ಯದಲ್ಲಿ ದಿವಂಗತ ರಾಮ್‌ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಅವರು ಎಲ್‌ಜೆಪಿ ಪಕ್ಷವನ್ನು ಮುನ್ನಡೆಸುತ್ತಿದ್ದು, ಎನ್‌ಡಿಎ ಮೈತ್ರಿ ಕೂಟಕ್ಕೆ ಮತ್ತೆ ಅವರನ್ನು ಆಹ್ವಾನಿಸುವ ಕುರಿತು ಬಿಜೆಪಿ ಚಿಂತಿಸುತ್ತಿದೆ. ಬಿಹಾರದಲ್ಲಿ ಪಾಸ್ವಾನ್ ಸಮುದಾಯವು ಒಟ್ಟು ಜನಸಂಖ್ಯೆಯ ಶೇ. 4.5ರಷ್ಟಿದ್ದು, ಚುನಾವಣೆಯಲ್ಲಿ ಎನ್‌ಡಿಎ ಪರ ಮತಗಳನ್ನು ಸೆಳೆಯಲು ಮಹತ್ವದ ಕೊಡುಗೆ ನೀಡಬಹುದಾಗಿದೆ.

ಇನ್ನು ಜೆಡಿಯು ವಿರುದ್ದ ಮುನಿಸಿಕೊಂಡು ಎನ್‌ಡಿಎ ಮೈತ್ರಿಕೂಟ ತೊರೆದಿದ್ದ ಹಿಂದೂಸ್ತಾನ್ ಆವಾಮ್ ಮೋರ್ಚಾದ ದಲಿತ ನಾಯಕ ಜಿತನ್ ರಾಮ್ ಮಾಂಜಿ ಅವರೂ ಕೂಡಾ ಎನ್‌ಡಿಎ ತೆಕ್ಕೆಗೆ ವಾಲಿದ್ದಾರೆ. ಈ ಮೂಲಕ ಬಿಹಾರದ ದಲಿತ ಹಾಗೂ ಮೇಲ್ವರ್ಗದ ಮತಗಳನ್ನ ಸೆಳೆಯುವ ತಂತ್ರಗಾರಿಕೆಗೆ ಬಿಜೆಪಿ ಮುಂದಾಗಿದೆ.

ಇತ್ತ ಕರ್ನಾಟಕದಲ್ಲಿ ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಎನ್‌ಡಿಎ ಮೈತ್ರಿ ಕೂಟಕ್ಕೆ ಜೆಡಿಎಸ್ ಪಕ್ಷವನ್ನು ಸೆಳೆಯುವ ಪ್ರಯತ್ನಗಳೂ ನಡೆಯುತ್ತಿವೆ ಎನ್ನಲಾಗಿದೆ. ಇನ್ನು ತೆಲುಗು ದೇಶಂ ಪಕ್ಷ, ಶಿರೋಮಣಿ ಅಕಾಲಿ ದಳಗಳನ್ನೂ ಬಿಜೆಪಿ ಓಲೈಸುತ್ತಿದ್ದು, ಎನ್‌ಡಿಎ ಮೈತ್ರಿ ಕೂಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ.

ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳ ಒಕ್ಕೂಟದ ವಿರುದ್ದ ತಂತ್ರಗಾರಿಕೆ ರೂಪಿಸುತ್ತಿರುವ ಕೇಸರಿ ನಾಯಕರು, ಎನ್‌ಡಿಎ ಮೈತ್ರಿ ಕೂಟಕ್ಕೆ ಸಣ್ಣ ಪುಟ್ಟ ಪಕ್ಷಗಳನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ತಮ್ಮ ಸಂಖ್ಯಾ ಬಲ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರೂ ಕೂಡಾ ಎನ್‌ಡಿಎ ಮೈತ್ರಿ ಕೂಟವನ್ನು ಬಲಗೊಳಿಸಬೇಕು ಎಂದು ಪಕ್ಷದ ನಾಯಕರಿಗೆ ಕರೆ ಕೊಟ್ಟಿದ್ದನ್ನು ಸ್ಮರಿಸಬಹುದು.