ಮನೆ ರಾಜ್ಯ ಸದನಕ್ಕೆ ಪೋಸ್ಟರ್ ತರಬಾರದು: ಶಾಸಕರಿಗೆ ಯು.ಟಿ ಖಾದರ್ ಕ್ಲಾಸ್

ಸದನಕ್ಕೆ ಪೋಸ್ಟರ್ ತರಬಾರದು: ಶಾಸಕರಿಗೆ ಯು.ಟಿ ಖಾದರ್ ಕ್ಲಾಸ್

0

ಬೆಂಗಳೂರು: ಸದನಕ್ಕೆ ಪೋಸ್ಟರ್ ತರಬಾರದು ಹಾಗೂ ಪ್ರದರ್ಶಿಸಬಾರದು.. ಪ್ರಚಾರಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಸಭಾಧ್ಯಕ್ಷರಾದ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಶಾಸಕರೊಬ್ಬರನ್ನು ತರಾಟೆಗೆ ತೆಗೆದುಕೊಂಡರು.

Join Our Whatsapp Group

ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಅವರು ಪೋಸ್ಟರ್ ಒಂದನ್ನು ಪ್ರದರ್ಶಿಸಿ, ನಮ್ಮ ಕ್ಷೇತ್ರದಲ್ಲಿ ರೈತರ ಆತ್ಮಹತ್ಯೆಯಾಗಿದ್ದು, ಆ ವಿಚಾರದ ಬಗ್ಗೆ ಪ್ರಸ್ತಾಪ ಮಾಡಲು ಅವಕಾಶ ಕೋರಲು ಮುಂದಾದರು. ಆಗ ಸಭಾಧ್ಯಕ್ಷರು, ಪೋಸ್ಟರ್ ಸದನಕ್ಕೆ ತರುವುದು ಸರಿಯಲ್ಲ, ಇದರಿಂದ ನಿಮಗೆ ಪ್ರಚಾರ ಸಿಕ್ಕರೂ ಮತ ಸಿಗುವುದಿಲ್ಲ. ಭಿತ್ತಿ ಪತ್ರ ತೆಗೆದುಕೊಂಡು ಸದನದಲ್ಲಿ ಹಾಜರಾಗಿದ್ದ ಶರಣಗೌಡ ಕಂದಕೂರ್ ಅವರನ್ನು ನೋಡುತ್ತಿದ್ದಂತೆ, ಮತ ಪಡೆಯುವ ಲೆಕ್ಕಾಚಾರ, ಬಿಟ್ಟಿ ಪ್ರಚಾರ ಪಡೆಯುವ ಲೆಕ್ಕಾಚಾರ ಹಾಕಿಕೊಂಡು ಈ ರೀತಿ ಭಿತ್ತಿಪತ್ರ ಸದನದಲ್ಲಿ ತೋರಿಸುವ ಅವಶ್ಯಕತೆ ಇಲ್ಲ, ನಾನು ಕೂಡಾ ಶಾಸಕ ಆಗಿ ಬಂದವನು ಎಂದು ಸ್ಪೀಕರ್ ಕ್ಲಾಸ್ ತೆಗೆದುಕೊಂಡರು. ವಿಪಕ್ಷ ಬಿಜೆಪಿ ಸದಸ್ಯರು ಸ್ಪೀಕರ್ ಮಾತಿಗೆ ಲಘು ಆಕ್ಷೇಪ ವ್ಯಕ್ತಪಡಿಸಿದರು.

ಬಿತ್ತಿಪತ್ರ ಪ್ರದರ್ಶಿಸಬಾರದು ಎಂಬುದಕ್ಕೆ ಬಿಜೆಪಿ ಹಿರಿಯ ಸದಸ್ಯರಾದ ಸಿ.ಸಿ.ಪಾಟೀಲ್, ಅಶ್ವತ್ಥನಾರಾಯಣ ಅವರು ಆಕ್ಷೇಪಿಸಿ, ನೀವು ಶಾಸಕರಾಗಿದ್ದಾಗ ನೀವು ಪ್ರದರ್ಶಿಸಿಲ್ಲವೆ ಎಂದರು. ಆಗ ಸಭಾಧ್ಯಕ್ಷರು ಹಿಂದಿನ ಸಭಾಧ್ಯಕ್ಷರು ಕೂಡ ಇದೇ ರೀತಿಯ ಸೂಚನೆ ಕೊಟ್ಟಿದ್ದರು ಎಂದು ಹೇಳಿ ಸಂತಾಪ ಸೂಚನೆ ಕಲಾಪ ಕೈಗೆತ್ತಿಕೊಂಡರು.

ಸಂತಾಪ ಸೂಚನೆ ಮುಗಿದ ಬಳಿಕ ಶರಣಗೌಡ ಕಂದಕೂರ್ ಮತ್ತೆ ಪೋಸ್ಟರ್ ಪ್ರದರ್ಶಿಸಿ ನಮ್ಮ ಜಿಲ್ಲೆಯಲ್ಲಿನ ರೈತರ ಆತ್ಮಹತ್ಯೆ ವಿಚಾರ ಪ್ರಸ್ತಾಪಿಸಬೇಕು. ನಮ್ಮ ದನಿ ಅಡಗಿಸಬಾರದು. ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಆಗ ಸಭಾಧ್ಯಕ್ಷರು, ಶೂನ್ಯವೇಳೆಯಲ್ಲಿ ನೋಟಿಸ್ ನೀಡಿ ಪ್ರಸ್ತಾಪಿಸಬಹುದು. ನೀವು ಲಿಖಿತ ನೋಟಿಸ್ ಕೊಟ್ಟ ನಂತರ ಪರಿಗಣಿಸುವುದಾಗಿ ಶರಣಗೌಡ ಅವರಿಗೆ ತಿಳಿಸಿದರು.