ಮೈಸೂರು: ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಂಸದೀಯ ಸಮಿತಿಯು, ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರಮಾದೇವಿಯವರ ನೇತೃತ್ವದಲ್ಲಿ ಇಂದು ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ನ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
NSFDC(ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಅಭಿವೃದ್ಧಿ ನಿಗಮ)/NSKFDC (ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಅಭಿವೃದ್ಧಿ ನಿಗಮ)/NBCFDC (ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಅಭಿವೃದ್ಧಿ ನಿಗಮ) ಸೇರಿದಂತೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಪ್ರತಿನಿಧಿಗಳೊಂದಿಗೆ,ಆಯಾ ಇಲಾಖೆ ವತಿಯಿಂದ ಕರ್ನಾಟಕದಲ್ಲಿನ ಎಸ್.ಸಿ. ಒಬಿಸಿ ಮತ್ತು ಅಪಾಯಕಾರಿ ಉದ್ಯೋಗದಲ್ಲಿ ತೊಡಗಿರುವ ವ್ಯಕ್ತಿಗಳ ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರು, ಸಫಾಯಿ ಕರ್ಮಚಾರಿಗಳು, ಟ್ರಾನ್ಸ್ಜೆಂಡರ್ಗಳು ಮತ್ತು ಮಾದಕ ವ್ಯಸನಿಗಳಿಗೆ ಮತ್ತು ಅವರ ಮಕ್ಕಳಿಗೆ ಸ್ಕಾಲರ್ ಶಿಪ್/ಫೆಲೋಶಿಪ್, ಇತರೆ ಕಲ್ಯಾಣ ಮತ್ತು ಪುನರ್ವಸತಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಧಿಸಿದಂತೆ ರಾಜ್ಯ ಚಾನಲೈಸಿಂಗ್ ಏಜೆನ್ಸಿಗಳಾದ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ,ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ,ಕರ್ನಾಟಕ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ಮುಂತಾದ ಇಲಾಖೆ/ನಿಗಮಗಳು ತೆಗೆದುಕೊಂಡ ವಿವರದ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರಮಾದೇವಿ ಅವರು ಮಾತನಾಡಿ, ಸಮಾಜದ ಹಿಂದುಳಿದ ವರ್ಗಗಳಾದ ಎಸ್ ಸಿ ಎಸ್ ಟಿ ಹಾಗೂ ಸಪಾಯಿ ಕರ್ಮಚಾರಿಗಳು ಮುಂತಾದವರಿಗೆ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡು ಸಮಿತಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಎರಡನೇ ಅವಧಿಯಲ್ಲಿ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಮತ್ತು ರಕ್ಷಣಾ ಸಚಿವಾಲಯದ ಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿ ಆ ಸಂಸ್ಥೆಯಲ್ಲಿ ಎಸ್ಸಿ/ಎಸ್ಟಿ ಮತ್ತು ವಿಕಲಚೇತನರ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು, ಸಂಸ್ಥೆಗಳಲ್ಲಿರುವ ಸಿ.ಎಸ್.ಆರ್ ಫಂಡ್ ಬಳಸಿಕೊಂಡು ರೂಪಿಸಿರುವ ಚಟುವಟಿಕೆ ಹಾಗೂ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದರು.
ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿಗಳು, ಪ್ರತಿನಿಧಿಗಳು ಸೇರಿದಂತೆ NHFDC ಪ್ರತಿನಿಧಿಗಳೊಂದಿಗೆ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ವಿವಿಧ ವಿದ್ಯಾರ್ಥಿವೇತನ ಯೋಜನೆಗಳು, ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ರೂಪಿಸಿರುವ ದೀನ್ ದಯಾಳ್ ದಿವ್ಯಾಂಗಜನ ಪುನರ್ವಸತಿ ಯೋಜನೆ ಹಾಗೂ ಇತರ ರಾಜ್ಯ ಯೋಜನೆಗಳು ಸೇರಿದಂತೆ ಎಲ್ಲಾ ಯೋಜನೆಗಳ ಕುರಿತು ಚರ್ಚೆ ನಡೆಸಿದರು.
ಎಸ್.ಸಿ./ಎಸ್.ಟಿ ಮತ್ತು ವಿಕಲಚೇತನರಿಗೆ ಆದ್ಯತೆಯ ವಲಯದ ಆಧಾರದ ಮೇಲೆ ಸಾಲ ನೀಡುವ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಮತ್ತು ಹಣಕಾಸು ಸಚಿವಾಲಯದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಂಸದೀಯ ಸಮಿತಿಯ ಅಧ್ಯಕ್ಷರಾದ ಹಾಗೂ ಇತರೆ ಸದಸ್ಯರಾದ ರಮಾದೇವಿ, ಸಂಗೀತ ಆಜಾ಼ದ್, ಭೋಲನಾಥ್, ಪ್ರಮೀಳಾ ಬಿಸೋಯಿ, ಛತರ್ ಸಿಂಗ್ ದರ್ಬಾರ್, ರಂಜೀತ ಕೋಲಿ, ಅಕ್ಷಯ್ಬಾರ್ ಲಾಲ್, ಸುಮಿತ್ರ ಬಾಲ್ಮಿಕ್, ರಮಿಲಾಬೆನ್ ಬೆಚಾರ್ಭಾಯ್ ಬರಾ, ಚಂದ್ರಶೇಗರನ್, ಮಮತ ಮೊಹಂತ, ನಾರಾಯಣ್ ಕೊರಗಪ್ಪ, ರಾಮ್ಜೀ, ಅನಿತಾಭಟ್ ಪಂದ, ಕೃಷ್ಣೇಂದ್ರಕುಮಾರ್, ಜ್ಯೋತಿ ಕಪೂರ್, ಮಾರ್ಷಲ್ ಟುಟೊ ಹಾಗೂ ಹಯೋಕಿಪ್ ಕಾಕೈ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತಾದ ಡಾ.ಕೆ ರಾಕೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಡಾ.N. ಮಂಜುಳಾ, ಅಂಗವಿಕಲ ಕಲ್ಯಾಣ ಇಲಾಖೆಯ ಆಯುಕ್ತರಾದ ಲತಾ ಕುಮಾರಿ,ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ ಕೆ.ವಿ ರಾಜೇಂದ್ರ ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎಂ ಗಾಯತ್ರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಲಕ್ಷ್ಮಿಕಾಂತ ರೆಡ್ಡಿ, SBI ಬ್ಯಾಂಕ್ ನ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.