ಮನೆ ಸ್ಥಳೀಯ ಸಂಚಾರ ನಿಯಮ ಉಲ್ಲಂಘನೆ: ಮೈಸೂರು ನಗರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ

ಸಂಚಾರ ನಿಯಮ ಉಲ್ಲಂಘನೆ: ಮೈಸೂರು ನಗರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ

0
ಸಾಂದರ್ಭಿಕ ಚಿತ್ರ

ಮೈಸೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಕಾರಣದಿಂದಾಗಿ ಬುಧವಾರ ಫೀಲ್ಡ್ ಗಿಳಿದ ನಗರ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿದರು.

Join Our Whatsapp Group

ತ್ರಿಬಲ್ ರೈಡಿಂಗ್, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಸಂಚಾರ, ಡ್ರಂಕ್ ಅಂಡ್ ಡ್ರೈವ್ , ಸಿಗ್ನಲ್ ಜಂಪ್ ಸೇರಿದಂತೆ ಇನ್ನಿತರ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಸ್ಥಗಿತಗೊಳಿಸಿದ ಕಾರ್ಯಾಚರಣೆಯನ್ನು ಮತ್ತೆ ಪ್ರಾರಂಭಿಸಲಾಗಿದೆ.     

ಸಂಜೆ 5:00ಯಿಂದ ರಾತ್ರಿ 9:00 ವರೆಗೆ ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಜಂಟಿ (ಸಂಚಾರ ಮತ್ತು ಕಾನೂನು ಮತ್ತು ಸುವ್ಯವಸ್ಥೆ) ಕಾರ್ಯಾಚರಣೆ ನಡೆಸಿದ ಪೊಲೀಸರು ವಾಹನಗಳನ್ನು ತಡೆದು ಪರಿಶೀಲನೆ ನಡೆಸಿದರಲ್ಲದೇ,  ನಿಯಮ ಉಲ್ಲಂಘಿಸಿದವರಿಂದ ಸ್ಥಳದಲ್ಲೇ ದಂಡ ವಸೂಲಿ ಮಾಡಲಾಯಿತು.

ಮೈಸೂರು ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್, ನಜರ್ ಬಾದ್ ಪೊಲೀಸ್ ಠಾಣೆ ವೃತ್ತದಲ್ಲಿ ವಾಹನಗಳ ತಪಾಸನೆ  ನಡೆಸುವ ಮೂಲಕ ವಿಶೇಷ ಕಾರ್ಯಚರಣೆಗೆ ಚಾಲನೆ ನೀಡಿದರಲ್ಲದೆ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.         

ಹಾಗೆಯೇ ಅಪರಾಧ ಮತ್ತು ಸಂಚಾರ  ವಿಭಾಗದ ಡಿ.ಸಿ.ಪಿ ಎಸ್.ಜಾಹ್ನವಿ ಹಾಗೂ ಎ.ಸಿ.ಪಿ ಹೆಚ್ ಪರಶುರಾಮಪ್ಪ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಪರಿಶೀಲನೆ ನಡೆಸಿದರಲ್ಲದೆ ವಾಹನಗಳ ತಪಾಸಣೆ ನಡೆಸಿದರು.         

ಈ ಕುರಿತು ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಬಿ. ರಮೇಶ್, ನಗರದೆಲ್ಲೆಡೆ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಲಾಗಿದೆ. ಪ್ರತಿನಿತ್ಯ ಸಂಜೆ 5:00 ರಿಂದ ರಾತ್ರಿ 9:00 ವರೆಗೆ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ

ತ್ರಿಬಲ್ ರೈಡಿಂಗ್, ಹೆಲ್ಮೆಟ್ ಧರಿಸದೆ ವಾಹನ ಸವಾರಿ ಸೇರಿದಂತೆ ಇನ್ನಿತರ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗಿದೆ. ಕಳೆದೊಂದು ತಿಂಗಳಿನಿಂದ ಸುಗಮ ಸಂಚಾರಕ್ಕೆ ಆದ್ಯತೆ ನೀಡುವ ಸಲುವಾಗಿ ದಂಡ ವಿಧಿಸುವ ಕಾರ್ಯಚರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಕ್ಯಾಮರಗಳ ಮೂಲಕ ಪ್ರಕರಣ ದಾಖಲಿಸುವುದನ್ನು ಹೆಚ್ಚಿಸಲಾಗಿತ್ತು. ಆದರೆ ಇದನ್ನೇ ಲಾಭವಾಗಿ ಪಡೆದಿರಬಹುದು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಶಾಲಾ-ಕಾಲೇಜುಗಳ ಸುತ್ತಮುತ್ತ ತ್ರಿಬಲ್ ರೈಡಿಂಗ್ ಪ್ರಕರಣಗಳು ಹೆಚ್ಚಾಗಿರುವುದು ಕಂಡುಬಂದ ಹಿನ್ನೆಲೆ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.