ಕೋವಿಡ್ ಸಾಂಕ್ರಾಮಿಕದ ನಂತರ ಆರೋಗ್ಯ ವಲಯದ ಸುಧಾರಣೆಗೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರಲ್ಲಿ ಆರೋಗ್ಯದ ಕುರಿತಂತೆ ಸ್ವಲ್ಪ ಮಟ್ಟಿಗೆ ಕಾಳಜಿ ಹೆಚ್ಚಿದಂತೆ ಕಾಣುತ್ತಿದೆ. ಕೆಲವು ರೋಗಗಳನ್ನು ‘ಹದ್ದುಬಸ್ತಿ’ನಲ್ಲಿ ಇಡಲಾಗಿದ್ದು, ಇನ್ನೂ ಕೆಲವು ರೋಗಗಳ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ರೋಗಗಳನ್ನು ಹಲವಾರು ವಿಚಾರಗಳ ಆಧಾರದ ಮೇಲೆ ಹಲವಾರು ರೀತಿಯಲ್ಲಿ ವಿಂಗಡಿಸಬಹುದು. ರೋಗಗಳು ಹರಡುವ ವಿಧಾನಕ್ಕೆ ತಕ್ಕಂತೆ ಒಬ್ಬರಿಂದ ಒಬ್ಬರಿಗೆ ನೇರವಾಗಿ ಹರಡುವ ರೋಗಗಳು ಮತ್ತು ಒಬ್ಬರಿಂದ ಒಬ್ಬರಿಗೆ ನೇರವಾಗಿ ಹರಡಲು ಸಾಧ್ಯವಾಗದ ರೋಗಗಳು ಎಂದು ಎರಡು ರೀತಿ ವಿಂಗಡಿಸಲಾಗುತ್ತದೆ.ಒಬ್ಬರಿಂದ ಒಬ್ಬರಿಗೆ ನೇರವಾಗಿ ಹರಡಲು ಸಾಧ್ಯವಾಗದ ರೋಗಗಳು ಈಗ ಭಾರತದಲ್ಲಿ ಹೆಚ್ಚಾಗಿ ವ್ಯಾಪಿಸಿವೆ. ಈ ರೋಗಗಳನ್ನು ಸಾಂಕ್ರಾಮಿಕವಲ್ಲದ ರೋಗಗಳು ಎಂದೂ ಕರೆಯಬಹುದು.
ಹೃದಯಸಂಬಂಧಿ ರೋಗಗಳು, ಪಾರ್ಕಿನ್ಸನ್, ಪಾರ್ಶ್ವವಾಯು, ಕ್ಯಾನ್ಸರ್ಗಳು, ಮಧುಮೇಹ, ಮೂತ್ರಪಿಂಡ ಕಾಯಿಲೆ, ಅಲ್ಜಮೈರ್, ಕಣ್ಣಿನ ಸಂಬಂಧಿ ಸಮಸ್ಯೆಗಳು, ಇತರ ಕಾಯಿಲೆಗಳು ಸಾಂಕ್ರಾಮಿಕವಲ್ಲದ ರೋಗಗಳ ಅಡಿಯಲ್ಲಿ ಬರುತ್ತವೆ. ಈ ರೋಗಗಳೇ ಈಗ ಭಾರತದಲ್ಲಿ ಸಾಕಷ್ಟು ವ್ಯಾಪಿಸಿಕೊಂಡಿವೆ.
ಇಲ್ಲಿದೆ ಆಘಾತಕಾರಿ ವಿಚಾರ: ಭಾರತದಲ್ಲಿ 26 ವರ್ಷದಿಂದ 59 ವರ್ಷದೊಳಗಿನ ಮೂರನೇ ಎರಡು ಭಾಗದಷ್ಟು ಮಂದಿ ಹೃದಯ ಸಂಬಂಧಿ ರೋಗಗಳಂಥಹ ಒಬ್ಬರಿಂದ ಒಬ್ಬರಿಗೆ ನೇರವಾಗಿ ಹರಡಲು ಸಾಧ್ಯವಾಗದ ರೋಗಗಳಿಂದ ಬಳಲುತ್ತಿದ್ದಾರೆ ಎಂದು ಅಸ್ಸೋಚಾಮ್ ವರದಿ ಹೇಳಿದೆ. ಇದು 2021ರ ವರದಿಯನ್ನು ಆಧರಿಸಿದ್ದು, ಇವರಲ್ಲಿ ಶೇ.2.9ರಷ್ಟು ಮಂದಿ ಮಧುಮೇಹದಿಂದ ಮತ್ತು 3.6ರಷ್ಟು ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇಂಥಹ ಎನ್ಸಿಡಿ ರೋಗಗಳನ್ನು ತಡೆಯಲು ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಆಹಾರದ ಜೊತೆಗೆ ಸ್ವಯಂ ಆರೈಕೆ ಕೂಡ ಅಗತ್ಯವಿರುತ್ತದೆ. ದೇಶದಲ್ಲಿ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಜನರನ್ನು ಪಾರ್ಕಿನ್ಸನ್, ಪಾರ್ಶ್ವವಾಯು, ಕ್ಯಾನ್ಸರ್ನಂತಹ ರೋಗಗಳಿಗೆ ಒಳಗಾಗುವಂತೆ ಮಾಡುತ್ತವೆ ಎಂದು ಹೇಳಲಾಗುತ್ತದೆ. ಆದರಲ್ಲೂ ಆಹಾರದಲ್ಲಿ ಸಿ ವಿಟಮಿನ್ ಕೊರತೆ ಇಂತಹ ರೋಗಗಳಿಗೆ ಒಳಗಾಗುವಂತೆ ಮಾಡುತ್ತವೆ.
ವಿಟಮಿನ್ ಸಿ ಅಂದರೆ ಆಸ್ಕೋರ್ಬಿಕ್ ಆಮ್ಲ ದೇಹದ ರೋಗ ನಿರೋಧಕ ಅಂಶಗಳನ್ನು ಬೆಂಬಲಿಸುತ್ತದೆ. ಇದರಿಂದಾಗಿ ಸಾಮಾನ್ಯವಾಗಿ ಎನ್ಸಿಡಿ ಸೇರಿದಂತೆ ಈ ಎಲ್ಲಾ ರೋಗಗಳ ವಿರುದ್ಧ ಹೋರಾಡುವ ಪ್ರತಿರೋಧಕ ಗುಣವನ್ನು ಬೆಳಸಿಕೊಳ್ಳಲು ವಿಟಮಿನ್ ಸಿ ನೆರವು ನೀಡುತ್ತದೆ.ವಿಟಮಿನ್ ಸಿ ಅತ್ಯಂತ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ ಆಗಿದೆ. ಆ್ಯಂಟಿಆಕ್ಸಿಡೆಂಟ್ ಎಂದರೆ, ಜೀವಕೋಶಗಳಿಗೆ ಹಾನಿಯಾಗುವುದನ್ನು ತಪ್ಪಿಸುವ ಗುಣ.
ಈ ಗುಣದಿಂದ ಜೀವಕೋಶಗಳಿಗೆ ಹಾನಿಯಾಗದಂತೆ ಸಿ ವಿಟಮಿನ್ ರಕ್ಷಿಸುತ್ತದೆ.ವೈದ್ಯ ತಜ್ಞರಾದ ಡಾ.ದೀಪಕ್ ತಲ್ವಾರ್ ಹೇಳುವಂತೆ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯಗತ್ಯ ಪೋಷಕಾಂಶವಾಗಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಎನ್ಸಿಡಿ ರೋಗಗಳಿಗೆ ವಿಟಮಿನ್ ಸಿ ಅನಿವಾರ್ಯವಾಗಿದೆ.ವೈದ್ಯರು ಹೇಳುವಂತೆ ಮಧುಮೇಹ ಇರುವ ರೋಗಿಗಳಲ್ಲಿ ಸಾಮಾನ್ಯ ಆರೋಗ್ಯವಂತ ವ್ಯಕ್ತಿಗಳಿಗಿಂತ ಶೇ.30ರಷ್ಟು ಕಡಿಮೆ ಪ್ರಮಾಣದಲ್ಲಿ ವಿಟಮಿನ್ ಸಿ ಇರುತ್ತದೆ. ಈ ಮೂಲಕ ಮಧುಮೇಹ ನಿಯಂತ್ರಣಕ್ಕೆ ವಿಟಮಿನ್ ಸಿ ಅಗತ್ಯ ಎಂಬುದು ಗೊತ್ತಾಗುತ್ತದೆ.ಸಿಟ್ರಸ್ ಆಹಾರ (ನಿಂಬೆ, ಮೋಸಂಬಿ, ದಾಳಿಂಬೆ, ಕಿತ್ತಳೆ ಮುಂತಾದ ಹಣ್ಣುಗಳು) ಮತ್ತು ಟೊಮ್ಯಾಟೊಗಳನ್ನು ಹೊಂದಿರುವ ಆಹಾರವನ್ನು ನಿಯಮಿತವಾಗಿ ಸೇವನೆ ಮಾಡುವುದರ ಮೂಲಕ ದೇಹದಲ್ಲಿ ಸಿ ವಿಟಮಿನ್ ಪ್ರಮಾಣ ಹೆಚ್ಚಿಸಬಹುದು.
ಎನ್ಸಿಡಿ ರೋಗಗಳಿಂದ ಬಳಲುತ್ತಿರುವ ಜನರಲ್ಲಿ ಶೀತ ಮತ್ತು ಜ್ವರದಂತಹ ಸಮಸ್ಯೆಗಳನ್ನು ನಿವಾರಿಸುವಲ್ಲಿ ವಿಟಮಿನ್ ಸಿ ಕೆಲಸ ಮಾಡುತ್ತದೆ. ಹೃದಯರಕ್ತನಾಳದ ಕಾಯಿಲೆಗಳನ್ನು ನಿಯಂತ್ರಿಸುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಉತ್ತರ ಭಾರತದಲ್ಲಿ ಶೇ.74ರಷ್ಟು ಮಂದಿಯಲ್ಲಿ ಮತ್ತು ದಕ್ಷಿಣ ಭಾರತದಲ್ಲಿ ಶೇ.46ರಷ್ಟು ಮಂದಿಯಲ್ಲಿ ಸಿ ವಿಟಮಿನ್ ಕೊರತೆಯಿದೆ. ಎನ್ಸಿಡಿಯ ರೋಗಗಳಿಂದ ಬಳಲುತ್ತಿರುವವರಲ್ಲೂ ಸಿ ವಿಟಮಿನ್ ಕೊರತೆ ಸಾಮಾನ್ಯವಾಗಿದೆ. ಆಹಾರದಲ್ಲಿ ಸಿ ವಿಟಮಿನ್ ಇರುವ ಆಹಾರವನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸಕಾರಾತ್ಮಕ ಫಲಿತಾಂಶಗಳನ್ನ ಪಡೆಯಬಹುದಾಗಿದೆ.