ಮನೆ ರಾಜ್ಯ ಶಿವಮೊಗ್ಗ ವಿಮಾನ ನಿಲ್ದಾಣ ಜುಲೈ 20ರ ವೇಳೆಗೆ ಸಜ್ಜು, ಆ.11ರಿಂದ ವಿಮಾನ ಹಾರಾಟ: ಸಚಿವ ಎಂ...

ಶಿವಮೊಗ್ಗ ವಿಮಾನ ನಿಲ್ದಾಣ ಜುಲೈ 20ರ ವೇಳೆಗೆ ಸಜ್ಜು, ಆ.11ರಿಂದ ವಿಮಾನ ಹಾರಾಟ: ಸಚಿವ ಎಂ ಬಿ ಪಾಟೀಲ

0

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 11ರಿಂದ ಕಾರ್ಯಾಚರಣೆಗೊಳ್ಳುವ ಸಾಧ್ಯತೆ ಇದ್ದು, ಇದಕ್ಕೆ ಮುಂಚಿತವಾಗಿ ಜುಲೈ 20ರೊಳಗೆ ಬೇಕಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ ಗುರುವಾರ ಹೇಳಿದ್ದಾರೆ.

Join Our Whatsapp Group

ರಾಜ್ಯದ ಹೊಸ ವಿಮಾನ ನಿಲ್ದಾಣಗಳ ಕಾಮಗಾರಿ ಪ್ರಗತಿ ಮತ್ತಿತರ ವಿಷಯಗಳ ಬಗ್ಗೆ ಸಭೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಸಂದರ್ಭದಲ್ಲಿ ಅವರು ಹೀಗೆ ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಂಬುಲೆನ್ಸ್ ಮತ್ತು ಇತರೆ ಅಗತ್ಯ ವಾಹನಗಳನ್ನು ನಿಯೋಜಿಸುವ ಕೆಲಸ ಆಗಬೇಕಾಗಿದೆ. ಕಾಫಿ ಕೆಫೆ ಆರಂಭಿಸುವ ಸಂಬಂಧದ ಕೆಲಸವೂ ಆಗಬೇಕಿದೆ. ಜೊತೆಗೆ, ಕೆಲವು ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ನೇಮಕ ನಡೆಯಬೇಕಿದೆ. ಇವೆಲ್ಲವನ್ನೂ ಜುಲೈ 20ರ ಹೊತ್ತಿಗೆ ಪೂರೈಸಿ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗುವುದು ಎಂದು ವಿವರಿಸಿದರು.

ಕೇಂದ್ರ ನಾಗರಿಕ ವಿಮಾನ ನಿರ್ದೇಶನಾಲಯವು ಇಲ್ಲಿನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಎಸ್ಐಐಡಿಸಿ) ವಹಿಸಿದೆ. ಇದರೊಂದಿಗೆ ಶಿವಮೊಗ್ಗ ನಿಲ್ದಾಣವು ರಾಜ್ಯ ಸರ್ಕಾರದ ಸಂಸ್ಥೆಯ ವತಿಯಿಂದ ನಡೆಯಲಿರುವ ಕರ್ನಾಟಕದ ಮೊದಲನೇ ವಿಮಾನ ನಿಲ್ದಾಣವಾಗಲಿದೆ ಎಂದು ಪಾಟೀಲ ಹೇಳಿದರು.

ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಶಿವಮೊಗ್ಗ ಏರ್ ಪೋರ್ಟ್ ನಲ್ಲಿ 20 ವಿಮಾನಗಳು ಬಂದಿಳಿದಿವೆ. ಇದರಿಂದಾಗಿ 12 ಲಕ್ಷ ರೂ. ಆದಾಯ ಬಂದಿದೆ ಎಂದರು.

ಆ.11ರಂದು ನಿಲ್ದಾಣ ಕಾರ್ಯಾರಂಭಗೊಳಲಿದ್ದು, ಅಂದು ಮೊದಲ ವಿಮಾನ‌ ಹಾರಾಟ ನಡೆಸಲಿದೆ. ಈ ಐತಿಹಾಸಿಕ ಸನ್ನಿವೇಶಕ್ಕೆ ಸಾಕ್ಷಿಯಾಗಲು ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಜನಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಯೋಜನೆಯಂತೆ ನಡೆದರೆ ಆ.11ರಂದು ಬೆಂಗಳೂರಿನಿಂದ ಹೊರಡುವ ವಿಮಾನವು ಶಿವಮೊಗ್ಗ ನಿಲ್ದಾಣದಲ್ಲಿ ಇಳಿಯಲಿದೆ ಎಂದರು.

ವಿಜಯಪುರ ಏರ್ ಪೋರ್ಟ್: ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆಗೆ ಸೂಚನೆ

ಇದೇ ವೇಳೆ ಸಚಿವ ಪಾಟೀಲ ಅವರು, ನಿರ್ಮಾಣ ಹಂತದ ವಿಜಯಪುರ ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ತಕ್ಷಣವೇ ಆ ಸೌಲಭ್ಯವನ್ನೂ ಕಲ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ನಿಲ್ದಾಣದ ಮೂಲಯೋಜನೆಯಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯ ಸೇರಿರಲಿಲ್ಲ.
ಈ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲು 12 ಕೋಟಿ ರೂ. ಹೆಚ್ಚುವರಿಯಾಗಿ ಬೇಕಾಗುತ್ತದೆ. ಇದುವರೆಗೆ ಸುಮಾರು 350 ಕೋಟಿ ರೂ. ಖರ್ಚಾಗಿದೆ. ರನ್ ವೇ ಪೂರ್ಣಗೊಂಡಿದ್ದು ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಕೆಲಸಗಳೆಲ್ಲ ಮೂರು ತಿಂಗಳಲ್ಲಿ ಮುಗಿಯಲಿವೆ. ಕೆಲವು ಉಪಕರಣಗಳ ಅಳವಡಿಕೆ ಮಾತ್ರ ಬಾಕಿ ಇದೆ ಎಂದರು.

ನಿರ್ಮಾಣ ಹಂತದಲ್ಲಿರುವ ಹಾಸನ, ರಾಯಚೂರು ಮತ್ತು ಕಾರವಾರ ವಿಮಾನ ನಿಲ್ದಾಣಗಳ ಕಾರ್ಯ ಪ್ರಗತಿ ಪರಿಶೀಲಿಸಿದರು. ರಾಜ್ಯ ಬಜೆಟ್ ನಲ್ಲಿ ಘೋಷಣೆಗೊಂಡ ಧರ್ಮಸ್ಥಳ, ಕೊಡಗು ಮತ್ತು ಚಿಕ್ಕಮಗಳೂರು ಏರ್ ಸ್ಟ್ರಿಪ್ ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆಯೂ ಚರ್ಚೆ ನಡೆಸಿದರು.

ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ ಗುಪ್ತ, ಕೆಎಸ್ಐಐಡಿಸಿ ವ್ಮವಸ್ಥಾಪಕ ನಿರ್ದೇಶಕ ಎಂ.ಆರ್.ರವಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಈ ಸಂದರ್ಭದಲ್ಲಿ ಇದ್ದರು.