ಬೆಂಗಳೂರು(Bengaluru): ರಾಜ್ಯದಲ್ಲಿ ಜಿಲ್ಲೆಗೊಂದು ಇಎಸ್ಐ ಆಸ್ಪತ್ರೆ ತೆರೆಯುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಸಚಿವ ಶಿವರಾಮ ಹೆಬ್ಬಾರ್(Shivaram Hebbar) ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆ ಮತ್ತು ಸ್ವಜಿಲ್ಲೆಯ ಅಭಿವೃದ್ಧಿಗೆ ಸಂಬoಧಿಸಿದoತೆ ದಿಲ್ಲಿ ಪ್ರವಾಸ ಕೈಗೊಂಡಿದ್ದ ಸಚಿವರ ನೇತೃತ್ವದ ನಿಯೋಗವು ಸರತಿಯಂತೆ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ಅಭಿವೃದ್ಧಿ ಪರವಾದ ಚರ್ಚೆ ನಡೆಸಿ ಕೇಂದ್ರದ ಅಗತ್ಯ ಸಹಕಾರ ಕೋರಿದೆ.
ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಇಎಸ್ಐ ಆಸ್ಪತ್ರೆಗಳಲ್ಲಿ ಅಸಂಘಟಿತ ಕಾರ್ಮಿಕರಿಗೂ ವೈದ್ಯಕೀಯ ಸೌಲಭ್ಯ ದೊರಕುವಂತೆ ಕ್ರಮವಹಿಸಬೇಕೆಂದು ಮನವಿ ಮಾಡಿದ್ದಾರೆ.
ಇಎಸ್ಐ ಆಸ್ಪತ್ರೆಗಳಲ್ಲಿ ‘ಆಯುಷ್’ ವಿಭಾಗಗಳನ್ನು ತೆರೆಯಬೇಕು, ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಒಂದರಂತೆ ಇಎಸ್ಐ ಆಸ್ಪತ್ರೆಗಳನ್ನು ತೆರೆಯುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕೋವಿಡ್ ಸಂದರ್ಭ ಸೇರಿದಂತೆ ಕಾರ್ಮಿಕ ಇಲಾಖೆ ಕಾರ್ಯವೈಖರಿ ಮತ್ತು ವಲಸೆ ಕಾರ್ಮಿಕರ ಕ್ಷೇಮಕ್ಕೆ ರಾಜ್ಯ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಭೂಪೇಂದ್ರ ಯಾದವ್, ರಾಜ್ಯದಲ್ಲಿ ಕಾರ್ಮಿಕ ಸ್ನೇಹಿ ವಾತಾವರಣ ಇರುವ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರಲ್ಲದೆ, ಕೂಡಲೇ ಸ್ಥಳಕ್ಕೆ ಇಎಸ್ಐಸಿ ಪ್ರಧಾನ ನಿರ್ದೇಶಕ ಬಾಟಿಯಾ ಅವರನ್ನು ಕರೆಸಿದರು. ಇಎಸ್ಐಸಿ ಅಧಿಕಾರಿಗಳೊಂದಿಗೆ ಇಎಸ್ಐ ಆಸ್ಪತ್ರೆಗಳ ಸುಧಾರಣೆಗಳ ಬಗ್ಗೆ ಸಚಿವ ಹೆಬ್ಬಾರ್ ಚರ್ಚೆ ನಡೆಸಿದ್ದಾರೆ.
ರಾಜ್ಯ ಕಾರ್ಮಿಕ ಇಲಾಖೆಯು ರಾಜ್ಯದ ವಿವಿಧೆಡೆಗಳಲ್ಲಿ 69 ಚಿಕಿತ್ಸಾಲಯಗಳನ್ನು ತೆರೆಯಲು ಅನುಮತಿ ಕೋರಲಾಗಿದ್ದು, ಈ ಸಂಬಂಧ ಕೇಂದ್ರವು ಇದೀಗ 19ಕ್ಕೆ ಅನುಮತಿ ನೀಡಿದ್ದು, ಇನ್ನುಳಿದ 50 ಚಿಕಿತ್ಸಾಲಯಗಳನ್ನು ತೆರೆಯಲು ಅನುಮತಿ ನೀಡುವಂತೆ ಮತ್ತು ಪ್ರತಿ ಜಿಲ್ಲೆಗೆ ಒಂದರಂತೆ ಇಎಸ್ಐ ಆಸ್ಪತ್ರೆಗಳನ್ನು ಆರಂಭಿಸಲು ಅನುಮೋದನೆ ಕೊಡಬೇಕು, ಪ್ರಸ್ತುತ ಇರುವ ಆಸ್ಪತ್ರೆಗಳಿಗೆ ಸಿಬ್ಬಂದಿ ಮತ್ತು ಆಧುನಿಕ ಉಪಕರಣಗಳನ್ನು ನೀಡುವ ಮೂಲಕ ಸಶಕ್ತೀಕರಣಗೊಳಿಸಬೇಕೆಂಬ ಮನವಿಯನ್ನು ಇದೇ ವೇಳೆ ಕೇಂದ್ರಕ್ಕೆ ಸಲ್ಲಿಸಲಾಯಿತು.
ಜಿಲ್ಲೆಗಳಲ್ಲಿ ಇರುವ ಚಿಕಿತ್ಸಾಲಯಗಳನ್ನು ‘ಆರೋಗ್ಯ ಕಲ್ಯಾಣ ಕೇಂದ್ರ’ಗಳಾಗಿ ಪರಿವರ್ತಿಸಬೇಕು. ಈ ಕಲ್ಯಾಣ ಕೇಂದ್ರಗಳಲ್ಲಿ ಇಸಿಜಿ, ಮೈನರ್ ಓಟಿ, ಆಕ್ಸಿಜನ್ ಸೇವೆಗಳ ಜತೆಗೆ ಅಗತ್ಯ ವೈದ್ಯ ಸಿಬ್ಬಂದಿ ಒದಗಿಸಬೇಕು ಎಂದು ಮನವಿ ಮಾಡಿದರು.
ಕಾಫಿ ಬೋರ್ಡ್, ತಂಬಾಕು ಮಂಡಳಿಗೆ ನೀಡಿರುವಂತೆ ಕಾರ್ಮಿಕ ಕಲ್ಯಾಣ ಮಂಡಳಿಗೂ ಸೆಸ್ ಮೇಲಿನ ತೆರಿಗೆಯಿಂದ ರಿಯಾಯ್ತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಯಿತು.