ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿ ಫ್ರಾಂಕ್ಸ್ ಸಿಎನ್ ಜಿ ಆವೃತ್ತಿ ಬಿಡುಗಡೆ ಮಾಡಿದ್ದು, ಹೊಸ ಸಿಎನ್ ಜಿ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 8.42 ಲಕ್ಷ ಆರಂಭಿಕ ಬೆಲೆ ಹೊಂದಿದೆ.
ಹೊಸ ಫ್ರಾಂಕ್ಸ್ ಸಿಎನ್ ಜಿ ಮಾದರಿಯು ಸಿಗ್ಮಾ ಮತ್ತು ಡೆಲ್ಟಾ ಎನ್ನುವ ಎರಡು ವೆರಿಯೆಂಟ್ ಗಳನ್ನು ಪಡೆದುಕೊಂಡಿದ್ದು, ಇದರಲ್ಲಿ ಸಿಗ್ಮಾ ವೆರಿಯೆಂಟ್ ರೂ. 8.42 ಲಕ್ಷ ಬೆಲೆ ಹೊಂದಿದ್ದರೆ ಡೆಲ್ಟಾ ವೆರಿಯೆಂಟ್ ರೂ. 9.28 ಲಕ್ಷ ಬೆಲೆ ಹೊಂದಿದೆ.
ಕಂಪನಿಯು ಇದುವರೆಗೆ ಸುಮಾರು 13 ಕಾರು ಮಾದರಿಗಳಲ್ಲಿ ಸಿಎನ್ ಜಿ ಆವೃತ್ತಿಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಹೊಸ ಫ್ರಾಂಕ್ಸ್ ಕಾರು ಮಾದರಿಯಲ್ಲಿ ಸಿಎನ್ ಜಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಎಸ್-ಸಿಎನ್ ಜಿ ತಂತ್ರಜ್ಞಾನದೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಜೊತೆಗೆ ಭರ್ಜರಿ ಮೈಲೇಜ್ ಹಿಂದಿರುಗಿಸಲಿದೆ.
ಹೊಸ ಫ್ರಾಂಕ್ಸ್ ಸಿಎನ್ ಜಿ ಕಾರು ಮಾದರಿಯು ಸಾಮಾನ್ಯ ಸಿಗ್ಮಾ ಮತ್ತು ಡೆಲ್ಟಾ ಪೆಟ್ರೋಲ್ ಆವೃತ್ತಿಯಂತೆ ಹಲವಾರು ಫೀಚರ್ಸ್ ಹೊಂದಿದ್ದು, ಸಿಎನ್ ಜಿ ಕಿಟ್ ಜೋಡಣೆಯೊಂದಿಗೆ ಸಾಮಾನ್ಯ ಪೆಟ್ರೋಲ್ ಮಾದರಿಗಿಂತ ರೂ. 95 ಸಾವಿರದಷ್ಟು ದುಬಾರಿಯಾಗಿರಲಿದೆ.
ಎಂಜಿನ್ ಮತ್ತು ಮೈಲೇಜ್ ಹೊಸ ಫ್ರಾಂಕ್ಸ್ ಸಿಎನ್ ಜಿ ಆವೃತ್ತಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಎಸ್-ಸಿಎನ್ ಜಿ ಕಿಟ್ ಹೊಂದಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 77.5 ಹಾರ್ಸ್ ಪವರ್ ಮತ್ತು 113 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಇದು ಪ್ರತಿ ಲೀಟರ್ ಸಿಎನ್ ಜಿಗೆ ಗರಿಷ್ಠ 28.51 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಈ ವಿಭಾಗದ ಕಾರುಗಳಲ್ಲೇ ಅತಿ ಹೆಚ್ಚು ಇಂಧನ ದಕ್ಷತೆ ಹೊಂದಿರುವ ಕಾರು ಮಾದರಿಯಾಗಿ ಹೊರಹೊಮ್ಮಿದೆ.
ಜೊತೆಗೆ ಹೊಸ ಫ್ರಾಂಕ್ಸ್ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಸಾಮಾನ್ಯ ಪೆಟ್ರೋಲ್ ಮಾದರಿಯಲ್ಲಿರುವಂತೆ ಆಕರ್ಷಕ ಹೊರಭಾಗದ ವಿನ್ಯಾಸದ ಜೊತೆಗೆ ಐಷಾರಾಮಿ ಅನುಭವ ನೀಡುವ ಡ್ಯುಯಲ್ ಕಲರ್ ಕ್ಯಾಬಿನ್ ಸೌಲಭ್ಯವನ್ನು ಪಡೆದುಕೊಂಡಿದೆ. ಇದರಲ್ಲಿರುವ 7 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಸ್ಮಾರ್ಟ್ ಪ್ಲೇ ಪ್ರೋ ಸಿಸ್ಟಂ, ಸ್ಟಿರಿಂಗ್ ಮೌಂಟೆಡ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೈರ್ ಲೆಸ್ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಗ್ರಾಹಕರನ್ನು ಆಕರ್ಷಿಸಲಿದ್ದು, ಸುರಕ್ಷತೆಗಾಗಿ ಡ್ಯುಯಲ್ ಏರ್ ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಸುರಕ್ಷಾ ಸೌಲಭ್ಯಗಳಿವೆ.